ಕರ್ನಾಟಕ

ಕಳಂಕಿತ ಸಚಿವರ ವಿಷಯ ಪ್ರಸ್ತಾಪಕ್ಕೆ ಯತ್ನ: ಕೋಲಾಹಲ

Pinterest LinkedIn Tumblr

jds

ಸುವರ್ಣ ವಿಧಾನಸೌಧ (ಬೆಳಗಾವಿ): ಸಚಿವರಾದ ಮಹದೇವ­ಪ್ರಸಾದ್, ದಿನೇಶ್ ಗುಂಡೂರಾವ್ ಹಾಗೂ ಖಮರುಲ್ ಇಸ್ಲಾಂ ವಿರುದ್ಧದ ಆರೋಪಗಳ ಕುರಿತು ಪ್ರಸ್ತಾಪಿಸಲು ಬಿಜೆಪಿ ಸದಸ್ಯರು ಪ್ರಯತ್ನಿಸಿ­ದ್ದ­ರಿಂದ ಗುರುವಾರ ವಿಧಾನ ಪರಿಷತ್‌ನಲ್ಲಿ ಕೋಲಾಹಲ ಸೃಷ್ಟಿಯಾಯಿತು.

ಸಚಿವರ ರಾಜೀನಾಮೆಗೆ ಬಿಜೆಪಿ ಸದಸ್ಯರು ಪಟ್ಟು ಹಿಡಿ­ದರು. ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಕ್ರಿಯಾ­ಲೋಪ ಎತ್ತಿದರು. ಇದರಿಂದ  ಮಾತಿನ ಚಕಮಕಿ ನಡೆಯಿತು.

ಆರಂಭದಿಂದಲೂ ಜಟಾಪಟಿ: ಭೋಜನ ವಿರಾಮದ ನಂತರ ಕಲಾಪ ಆರಂಭಗೊಂಡಾಗ, ಸಚಿವರ ವಿರುದ್ಧದ ಆರೋಪಗಳ ಕುರಿತು ನಿಯಮ 307ರಡಿ ಚರ್ಚೆಗೆ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರಿಗೆ ಅವಕಾಶ ನೀಡಿದ್ದಾಗಿ ಸಭಾಪತಿ ಪ್ರಕಟಿಸಿದರು. ಆಗ, ಮಾತು ಆರಂಭಿ­ಸಿದ ಈಶ್ವರಪ್ಪ, ‘ನಿವೇಶನ ಇದ್ದರೂ ಸುಳ್ಳು ಮಾಹಿತಿ ಕೊಟ್ಟು ಸಚಿವ ಮಹದೇವ ಪ್ರಸಾದ್ ಕೆಎಚ್‌ಬಿಯಿಂದ ನಿವೇಶನ ಪಡೆದಿದ್ದಾರೆ. ಅವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕ್ರಿಯಾ­ಲೋಪ ಎತ್ತಿದ ಸಭಾನಾಯಕ ಎಸ್.ಆರ್. ಪಾಟೀಲ, ‘ವಿಷಯ ನ್ಯಾಯಾ­­ಲಯದಲ್ಲಿ ಬಾಕಿ ಇದ್ದು, ನ್ಯಾಯಾಂಗ ನಿಂದನೆಯಾಗುತ್ತದೆ’ ಎಂದರು. ಆದರೂ ಈಶ್ವರಪ್ಪ ಮಾತು ಮುಂದು­ವರಿಸಲು ಯತ್ನಿಸಿದರು. ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಖಮರುಲ್ ಇಸ್ಲಾಂ ವಿರುದ್ಧದ ಆರೋಪಗಳ ಬಗ್ಗೆ ಅಶ್ವತ್ಥ­ನಾರಾಯಣ ಹಾಗೂ ಗೋ.ಮಧು­ಸೂದನ ಪ್ರಸ್ತಾಪಿಸಿದರು.

ಈಶ್ವರಪ್ಪ ಮಾತಿಗೆ ಅಡ್ಡಿಪಡಿಸಿದ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರು, ಕ್ರಿಯಾಲೋಪ ಎತ್ತಿರುವ ಸಂದರ್ಭದಲ್ಲಿ ಇತರರಿಗೆ ಮಾತ­ನಾಡಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

‘ಸ್ಥಳೀಯ ಶಾಸಕ ಕತ್ತೆಗೆ ಸಮ!’
ಅಕ್ರಮ ಮರಳು ಸಾಗಣೆ ಕುರಿತು ವಿಧಾನಸಭೆ­ಯಲ್ಲಿ ಮಾತನಾಡಿದ ಬಿಜೆಪಿಯ ಡಿ.ಎನ್. ಜೀವರಾಜ್ ಅವರು, ‘ನನ್ನ ಕ್ಷೇತ್ರದಲ್ಲಿ (ಶೃಂಗೇರಿ) ತುಂಗಾ ಮತ್ತು ಭದ್ರಾ ನದಿ ಪಾತ್ರದಿಂದ ಕತ್ತೆಯ ಮೇಲೆ ಮರಳು ಸಾಗಿಸುತ್ತಿದ್ದಾರೆ. ಲಾರಿ ಮೇಲೆ ಮರಳು ಸಾಗಿಸಿದ್ದರೆ ಪ್ರಕರಣ ದಾಖಲಿಸಬಹುದಿತ್ತು. ಕತ್ತೆ ಮೇಲೆ ಪ್ರಕರಣ ದಾಖಲಿಸಲು ಆಗುತ್ತದೆಯೇ? ಏನು ಮಾಡೋಣ ಹೇಳಿ’ ಎಂದು ಅಳಲು ತೋಡಿ­ಕೊಂಡರು.

ಇದಾದ ಅರೆ ಕ್ಷಣಕ್ಕೆ ಎದ್ದು ನಿಂತ ಕಾಂಗ್ರೆಸ್ಸಿನ ರಮೇಶಕುಮಾರ್, ‘ಸ್ಥಳೀಯ ಶಾಸಕ ಕತ್ತೆಗೆ ಸಮ. ಕತ್ತೆ ಮೇಲೆ ಮರಳು ಸಾಗಿಸಿದ್ದಕ್ಕೆ ಸ್ಥಳೀಯ ಶಾಸಕನ ಮೇಲೆ ಪ್ರಕರಣ ದಾಖಲಿಸ­ಬಹುದು’ ಎಂದು ಸಲಹೆ ನೀಡಿದರು. ಅವರು ಹೀಗೆ ಹೇಳುತ್ತಿದ್ದಂತೆಯೇ, ಗಂಭೀರ ಚರ್ಚೆಯಲ್ಲಿ ತೊಡಗಿದ್ದ ಸದನದಲ್ಲಿ ಕೆಲ ಕ್ಷಣ ನಗೆಯ ಅಲೆ ಎದ್ದಿತು.

Write A Comment