ಕರ್ನಾಟಕ

ಇಸ್ಲಾಮಿಕ್ ಸ್ಟೇಟ್‌ನ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿದ್ದ ಆರೋಪ: ಏಳು ತಾಸು ಮೆಹದಿ ಮಸ್ರೂರ್ ಬಿಸ್ವಾಸ್‌ನ ಪೋಷಕರ ವಿಚಾರಣೆ

Pinterest LinkedIn Tumblr

pvec18dec14rjMamtazBiswas

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್‌ ಭಯೋತ್ಪಾ­ದನಾ ಸಂಘಟನೆ ಕುರಿತ ‘@shami witness’ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿರುವ ಮೆಹದಿ ಮಸ್ರೂರ್ ಬಿಸ್ವಾಸ್‌ನ ಪೋಷಕರನ್ನು ಪೊಲೀಸರು ಬುಧವಾರ ಸುಮಾರು ಏಳು ತಾಸು ವಿಚಾರಣೆಗೆ ಒಳಪಡಿಸಿದರು.

ಮಂಗಳವಾರ ರಾತ್ರಿಯೇ ನಗರಕ್ಕೆ ಬಂದು ಹೋಟೆಲ್‌ನಲ್ಲಿ ತಂಗಿದ್ದ ಮೆಹದಿಯ ತಂದೆ ಮಿಖಾ­ಯೆಲ್‌, ತಾಯಿ ಮುಮ್ತಾಜ್‌ ಬೇಗಂ ಮತ್ತು ಕುಟುಂಬ ಸದಸ್ಯರು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಅವರನ್ನು ಭೇಟಿಯಾ­ಗುವ ಉದ್ದೇ­ಶ­ದಿಂದ ಬುಧವಾರ ಬೆಳಿಗ್ಗೆ 8.45ರ ಸುಮಾರಿಗೆ ಇನ್‌ಫೆಂಟ್ರಿ ರಸ್ತೆಯಲ್ಲಿನ ಕಮಿಷನರ್‌ ಕಚೇರಿಗೆ ಬಂದರು.

ನಂತರ ಪೊಲೀಸರು ಅವರನ್ನು ಮಡಿ­ವಾಳದ ವಿಶೇಷ ವಿಚಾರಣಾ ಕೊಠಡಿಗೆ ಕರೆ­ದೊಯ್ದು, ಮಗನ ಭೇಟಿಗೆ ಅವಕಾಶ ಮಾಡಿಕೊ­ಟ್ಟರು. ಪೊಲೀಸರ ಸಮ್ಮುಖದಲ್ಲೇ ಪೋಷಕರು ಸುಮಾರು 15 ನಿಮಿಷ ಮಗನೊಂದಿಗೆ ಮಾತ­ನಾಡಿ­ದರು.  ಆಗ ಮೆಹದಿ ಪೋಷಕರ ಬಳಿಯೂ ತಾನು ಅಮಾಯಕನೆಂದು ಹೇಳಿಕೊಂಡ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಳಿಕ ಪೋಷಕರನ್ನು ಆಡು­ಗೋಡಿಯ ಸಿಎಆರ್‌ ಮೈದಾನಕ್ಕೆ ಕರೆ­ದೊಯ್ಯಲಾಯಿತು. ಅಲ್ಲಿ ಕಮಿಷನರ್  ರೆಡ್ಡಿ, ಅಪರಾಧ ವಿಭಾಗದ ಜಂಟಿ ಪೊಲೀಸ್‌ ಕಮಿಷನರ್‌ ಹೇಮಂತ್‌ ನಿಂಬಾಳ್ಕರ್‌, ಡಿಸಿಪಿ ಅಭಿಷೇಕ್‌ ಗೋಯಲ್‌ ಮತ್ತಿತರ ಅಧಿಕಾರಿಗಳು ಸಂಜೆ ಆರು ಗಂಟೆವರೆಗೂ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಮೆಹದಿಯ ಬಾಲ್ಯಜೀವನ, ಶಿಕ್ಷಣ, ಕಾಲೇಜು ದಿನಗಳು, ಸ್ನೇಹಿತರು ಮತ್ತಿತರ ವೈಯಕ್ತಿಕ ವಿಷಯಗಳ ಬಗ್ಗೆ ಕುಟುಂಬ ಸದಸ್ಯರ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಪಡೆದುಕೊಂಡರು.

‘ಮಗ ಭಯೋತ್ಪಾದನಾ ಸಂಘಟನೆ ಪರ ಕೆಲಸ ಮಾಡಿರಲು ಸಾಧ್ಯವಿಲ್ಲ. ಪೊಲೀಸರು ತುರ್ತಾಗಿ ಹಾಗೂ ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಸಬೇಕು ಎಂದು ಮೆಹದಿ ಪೋಷಕರು ಮನವಿ ಮಾಡಿದ್ದಾರೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಿ ಮಾಹಿತಿ ಪಡೆಯಲಾಗುತ್ತಿದೆ’ ಎಂದು ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

‘ಇದೊಂದು ವಿಶೇಷ ಪ್ರಕರಣವಾಗಿದ್ದು, ತನಿಖೆ ಕೂಡ ಸವಾಲಾಗಿ ಪರಿಣಮಿಸಿದೆ. ಪ್ರಕರಣದ ತನಿಖೆಗಾಗಿ ವಿದೇಶದಿಂದ ಯಾವುದೇ ಪೊಲೀಸ್ ಅಧಿಕಾರಿಗಳು ನಗರಕ್ಕೆ ಬಂದಿಲ್ಲ. ಮೆಹದಿಯ ಟ್ವೀಟ್‌ಗಳನ್ನು ಪರಮಾರ್ಶಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ’ ಎಂದರು.

ಕುಸಿದ ತಾಯಿ
‘ಬೆಳಿಗ್ಗೆ 9.45ಕ್ಕೆ ವಿಶೇಷ ತನಿಖಾ ಕೊಠಡಿಗೆ ಬಂದ ಮುಮ್ತಾಜ್‌ ಬೇಗಂ, ಮಗನನ್ನು ನೋಡುತ್ತಿದ್ದಂತೆ ಕುಸಿದು ಕುಳಿ­ತರು. ನಂತರ ಆತನನ್ನು ತಬ್ಬಿ­ಕೊಂಡು, ಕೆಲ ಕಾಲ ಕಣ್ಣೀರಿ­ಟ್ಟರು. ಬಂಗಾಳಿ ಭಾಷೆಯಲ್ಲಿ ಮಾತು ಆರಂಭಿಸಿದ ಅವರು, ಬಂಧನದ ಬಗ್ಗೆ ವಿವರಣೆ ಪಡೆದು­ಕೊಂಡರು. ಈ ವೇಳೆ ಮಿಖಾ­ಯೆಲ್‌ ಅವರು ಮೌನಕ್ಕೆ ಶರಣಾಗಿ­ದ್ದರು’ ಎಂದು ತನಿಖಾಧಿಕಾರಿಗಳು ತಿಳಿಸಿದರು.

ಕಸ್ಟಡಿ ವಿಸ್ತರಣೆಗೆ ಚಿಂತನೆ
‘ಮೆಹದಿ ಪೊಲೀಸ್ ಕಸ್ಟಡಿ ಅವಧಿ ಗುರುವಾರಕ್ಕೆ (ಡಿ.18) ಕೊನೆಗೊಳ್ಳಲಿದೆ. ತನಿಖೆಗೆ ಅಗತ್ಯ­ವಿದ್ದರೆ ಸಿಬ್ಬಂದಿಯೊಂದಿಗೆ ಚರ್ಚಿಸಿ ಆತನ ಪೊಲೀಸ್‌ ಕಸ್ಟಡಿ ಅವಧಿ ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ರೆಡ್ಡಿ ಹೇಳಿದ್ದಾರೆ.

Write A Comment