ಕರ್ನಾಟಕ

ಎಚ್.ಡಿ.ಕೋಟೆ: ಕಾಡಂಚಿನ ಗ್ರಾಮಗಳ ಮೇಲೆ ದಾಳಿ: ಬೋನಿಗೆ ಬಿದ್ದ ಹೆಣ್ಣು ಹುಲಿ

Pinterest LinkedIn Tumblr

pvec18dec14rj-hdk-09

ಎಚ್.ಡಿ.ಕೋಟೆ/ಮೈಸೂರು: ನಾಗರ­ಹೊಳೆ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮಗಳಲ್ಲಿ ಜಾನು­ವಾರುಗಳನ್ನು ಬೇಟೆ­ಯಾಡುತ್ತಿದ್ದ ಹುಲಿ ಸೆರೆ ಹಿಡಿ­ಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಜಿಯಾರ (ಹಿರೇಹಳ್ಳಿ) ಗ್ರಾಮದ ಬಾಳೆ ತೋಟದಲ್ಲಿ ಇಟ್ಟಿದ್ದ ಬೋನಿಗೆ ಬುಧವಾರ ನಸುಕಿನಲ್ಲಿ ಹುಲಿ ಬಿದ್ದಿದೆ. ಸೆರೆಯಾದ ಹೆಣ್ಣು ಹುಲಿಯ ಆರೋಗ್ಯ ತಪಾಸಣೆ ನಡೆಸಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ತರ­ಲಾಗಿದೆ. ಗಾಯಗೊಂಡಿರುವ ವ್ಯಾಘ್ರ ಬೇಟೆಯಾಡಲು ಶಕ್ತವಾಗಿರದ ಕಾರಣ ಜನವಸತಿ ಪ್ರದೇಶಗಳತ್ತ ಬಂದು ಜಾನು­ವಾರುಗಳ ಮೇಲೆ ದಾಳಿ ನಡೆಸುತ್ತಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ಜಾನುವಾರು ಬಲಿ:  ನಾಲ್ಕು ದಿನಗಳಲ್ಲಿ ಮೂರು ಜಾನು­ವಾರುಗಳ ಮೇಲೆ ದಾಳಿ ನಡೆಸಿದೆ. ಇದರಿಂದ  ಕಾಡಂಚಿನ ಗ್ರಾಮಗಳಲ್ಲಿ ಆತಂಕ ಮನೆಮಾಡಿತ್ತು. ಹುಲಿಯನ್ನು ಸೆರೆ ಹಿಡಿಲು ಗ್ರಾಮಸ್ಥರು ಒತ್ತಾಯಿ­ಸಿದ್ದರು.

ಮಂಗಳವಾರ ಜಿಯಾರ ಗ್ರಾಮದ ಕೆಂಪೇಗೌಡರ ಜಮೀನಿನಲ್ಲಿ ಜಾನು­ವಾರು­ವೊಂದನ್ನು ಕೊಂದು ಹಾಕಿತ್ತು. ಮಾಂಸವನ್ನು ತಿನ್ನಲು ಸಾಧ್ಯವಾಗದೆ ಸ್ಥಳದಿಂದ ಕಾಲ್ಕಿತ್ತಿತ್ತು. ಮಾಂಸಕ್ಕಾಗಿ ಮರಳಿ ಬರುತ್ತದೆ ಎಂಬುದನ್ನು ಅರಿತ ಅರಣ್ಯ ಇಲಾಖೆ ಸಿಬ್ಬಂದಿ ಮೃತ ಜಾನುವಾರುವಿನ ಮಾಂಸ ಹಾಗೂ ಮೇಕೆಯೊಂದನ್ನು ಬೋನಿನಲ್ಲಿ ಬಿಟ್ಟಿದ್ದರು. ಮಂಗಳವಾರ ರಾತ್ರಿ ಬೇಟೆಯಾಡಿದ ಸ್ಥಳಕ್ಕೆ ಬಂದ ಹುಲಿ ಜಾನುವಾರುವಿನ ಮಾಂಸವನ್ನು ತಿನ್ನಲು ಮುಂದಾದಾಗ ಬೋನಿಗೆ ಬಿದ್ದಿದೆ.

ಬುಧವಾರ ಬೆಳಿಗ್ಗೆ ಸ್ಥಳಕ್ಕೆ ದೌಡಾ­ಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯ ಆರೋಗ್ಯವನ್ನು ಪರಿಶೀಲಿಸಿ, ಮೃಗಾಲಯಕ್ಕೆ ಸ್ಥಳಾಂತರಿಸಿದರು. ಪ್ರತಿಭಟನೆ: ಬೋನಿನಲ್ಲಿ ಬಂದಿಯಾದ ಹುಲಿ­ಯನ್ನು ನೋಡಲು ಗ್ರಾಮಸ್ಥರಿಗೆ ಅವಕಾಶ ನೀಡಲಿಲ್ಲ. ಇದರಿಂದ ಅಸಮಾ­ಧಾನಗೊಂಡ ಜಿಯಾರ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಕಿಡಿಕಾರಿ­ದರು.

ಹುಲಿಯ ದರ್ಶನ ಮಾಡಿಸು­ವಂತೆ ಪಟ್ಟುಹಿಡಿದರು. ಇದಕ್ಕೆ ಮಣಿ­ಯದೇ ಮೇಟಿಕುಪ್ಪೆ ಅರಣ್ಯ ಇಲಾಖೆಯ ಕಚೇರಿಗೆ ಹುಲಿಯನ್ನು ವಾಹನದಲ್ಲಿ ಸಾಗಿಸಲಾಯಿತು. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಪ್ರತಿಭಟನೆಯನ್ನು ತೀವ್ರ­ಗೊಳಿ­ಸಿ­ದರು. ಬಳಿಕ ಹುಲಿಯನ್ನು ವಾಹನ­ದಲ್ಲಿ ಮರಳಿ ಕರೆತಂದು ಗ್ರಾಮಸ್ಥರಿಗೆ ತೋರಿಸಿದರು.

‘ಹುಲಿಯನ್ನು ಬೆಳಿಗ್ಗೆ 11ಕ್ಕೆ ಮೃಗಾ­ಲಯಕ್ಕೆ ತರಲಾಯಿತು. ಅದರ ದೇಹದ ಮೇಲೆ ಕೆಲ ಗಾಯದ ಗುರುತುಗಳು ಪತ್ತೆಯಾಗಿವೆ. ಹೀಗಾಗಿ, ಅದರ ಆರೋ­ಗ್ಯ­ವನ್ನು ಮೃಗಾಯಲದ ಪಶುವೈದ್ಯಾಧಿ­ಕಾರಿಗಳು ಪರಿಶೀ­ಲಿಸುತ್ತಿ­ದ್ದಾರೆ’ ಎಂದು ಚಾಮರಾಜೇಂದ್ರ ಮೃಗಾ­ಲಯದ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.

Write A Comment