ಕರ್ನಾಟಕ

ಮಳೆಯಲ್ಲೇ ಶರಣ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Pinterest LinkedIn Tumblr

141212kpn84

ವಿಜಯಪುರ: ಮುಂಜಾನೆಯಿಂದಲೂ ಮೋಡ ಕವಿದ ವಾತಾವರಣ. ಆಗಾಗ್ಗೆ ತುಂತುರು ಮಳೆ. ಕೆಲವೊಮ್ಮೆ ಜೋರು ಮಳೆ. ಇದ್ಯಾವುದೂ ಶರಣ ಸಾಹಿತ್ಯ ಸಮ್ಮೇಳನದ ಸಂಭ್ರಮಕ್ಕೆ ಅಡ್ಡಿಯಾಗಲಿಲ್ಲ. ನಗರದ ಬಿಎಲ್‌ಡಿಇ ಸಂಸ್ಥೆ ಆವರಣದಲ್ಲಿ ಶುಕ್ರವಾರ ಮುಂಜಾನೆ­ಯಿಂದಲೇ ಶರಣರ ಕಲರವ. ಭಾರಿ  ಸಂಖ್ಯೆಯಲ್ಲಿ ನೆರೆದಿದ್ದ ಶರಣ ಸಂಸ್ಕೃತಿ ಆರಾಧಕರು, ಶರಣ ಸಾಹಿತ್ಯ ಪ್ರೇಮಿ­ಗಳು, ವಿವಿಧ ಮಠಾಧೀಶರು, ಶರಣರು ಸೇರಿದಂತೆ ಜನಸ್ತೋಮವೇ ಇಲ್ಲಿ ಜಮಾಯಿಸಿತ್ತು.

ಚಾರಿತ್ರಿಕ ನೆಲೆಗಟ್ಟಿನ ಬಸವ ನಾಡಿನಲ್ಲಿ ಇದೇ ಮೊದಲ ಬಾರಿಗೆ ಶರಣ ಸಾಹಿತ್ಯ ಸಮ್ಮೇಳನ ನಡೆಯು­ತ್ತಿದೆ. ಇದು ಬಹುತೇಕರ ಮೇಲೆ ಪ್ರಭಾವ ಬೀರಿದ್ದು, ನಾಡಿನ ವಿವಿಧ ಭಾಗಗಳ ಶರಣರು ಪಾಲ್ಗೊಂಡಿದ್ದಾರೆ. ಮುಖ್ಯಮಂತ್ರಿ ತಡವಾಗಿ ಕಾರ್ಯ­ಕ್ರಮಕ್ಕೆ ಬರು­ತ್ತಾರೆ ಎಂಬುದು ಮೊದಲೇ ಸಂಘಟಕರಿಗೆ ಗೊತ್ತಾದ ಕಾರಣ ಉದ್ಘಾಟನೆಗೂ ಮುನ್ನವೇ ಚಿಂತನಾ ಗೋಷ್ಠಿಗೆ ಚಾಲನೆ ನೀಡಲಾಯಿತು.

ಮುಖ್ಯಮಂತ್ರಿ ಬರುವ ವೇಳೆಗೆ ಮಳೆ ಆರ್ಭಟ ಸ್ವಲ್ಪ ಹೆಚ್ಚಿದ್ದರೂ, ಜನ­ಸ್ತೋಮ ಕಡಿಮೆ ಆಗಲಿಲ್ಲ. ಸಭಾಂಗಣ ಭರ್ತಿಯಾಗಿದ್ದರಿಂದ ಎರಡೂ ಕಡೆ ಮಳೆಯಲ್ಲೇ ನೆನೆಯುತ್ತಾ ನಿಂತು ಎರಡು ಗಂಟೆಗೂ ಅಧಿಕ ಕಾಲ ಉದ್ಘಾಟನಾ ಸಮಾರಂಭವನ್ನು ಜನರು ಕಣ್ತುಂಬಿಕೊಂಡರು.

ಸಾನ್ನಿಧ್ಯ ವಹಿಸಿದ್ದ ಉತ್ತರ ಕರ್ನಾಟಕದ ಜನತೆಯ ಆರಾಧ್ಯ ಗುರು, ಸರಳತೆಯ ಪ್ರತಿಪಾದಕ ಸಿದ್ಧೇಶ್ವರ ಸ್ವಾಮೀಜಿ, ಸಮ್ಮೇಳನ ಉದ್ಘಾಟನೆಯಾಗುತ್ತಿ­ದ್ದಂತೆಯೇ ವೇದಿಕೆಯಿಂದ ಕೆಳಗಿಳಿದು ಪಕ್ಕದಲ್ಲಿ ಕುಳಿತು, ಶರಣರ ಚಿಂತನೆ ಆಲಿಸಿದರು. ಸಮ್ಮೇಳನ ಆರಂಭಗೊಳ್ಳುವ ಮುನ್ನವೇ ಅಪಾರ ಜನಸ್ತೋಮ ವೇದಿಕೆ ಮುಂಭಾಗ ಜಮಾಯಿಸಿತ್ತು. ಸುರಿವ ಮಳೆಯನ್ನೂ ಲೆಕ್ಕಿಸದೆ ಜನರು ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ, ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಖರೀದಿಸಿದರು.

ಜಗತ್ತಿಗೇ ಪಸರಿಸಲಿ: ‘ಶರಣ ಸಾಹಿತ್ಯ, ಸಂಸ್ಕೃತಿ ಬೆಳೆಯ­ಬೇಕು. ನಿತ್ಯ ಎಲ್ಲರ ಜೀವನದಲ್ಲಿ ಅಡಕ­ಗೊಂಡು, ಜಗತ್ತಿಗೇ ಪಸರಿಸಬೇಕು’ ಎಂದು ಸಮ್ಮೇಳನದ ಅಧ್ಯಕ್ಷ ಡಾ.ಎಸ್.ಆರ್. ಗುಂಜಾಳ ನಾಡಿನ ಜನತೆಗೆ ಮನವಿ ಮಾಡಿದರು. ಮುದ್ರಿತ ಭಾಷಣ ಓದದೇ, ವಚನದ ಮೂಲಕ ಭಾಷಣ ಆರಂಭಿ­ಸಿದ ಅವರು, ‘ವಚನ ಸಾಹಿತ್ಯ ಎಲ್ಲ ಭಾಷೆಗಳಿಗೂ ಭಾಷಾಂತರ­ಗೊಂಡು ಎಲ್ಲರ ಮನ ಮುಟ್ಟುವ ಜತೆಗೆ ಅನುಕರಿ­ಸಲು ಸಹಾಯವಾಗಲಿ’       ಎಂದರು.

‘ಶರಣ ಸಾಹಿತ್ಯ, ವಚನ ಈಗಾಗಲೇ ನಾಡಿನ ಮನೆ ಮನೆ ತಲುಪಿದೆ. ಧಾರಾ­ವಾಹಿ, ನಾಟಕ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕವೂ ತಲುಪು­ತ್ತಿದೆ. ಆದರೆ ಆಚರಣೆಗೆ ಬರುತ್ತಿಲ್ಲ. ಇದು ತಪ್ಪಬೇಕು. ಪ್ರತಿಯೊಬ್ಬರೂ ಶರಣರ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು. ‘ವಚನ ಸಾಹಿತ್ಯ ಜನರ ನಡೆ, ನುಡಿಯಲ್ಲಿ ನಿತ್ಯ ಬರಬೇಕು. ವಚನ ಸಾಹಿತ್ಯದ ಮೂಲಕ ಜನರ ನಡೆ, ನುಡಿ ತಿದ್ದುವಂಥ ಕೆಲಸವಾಗಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಗುಂಜಾಳ, ವಚನದ ಮೂಲಕವೇ ತಮ್ಮ ಭಾಷಣ ಕೊನೆಗೊಳಿಸಿದರು.

ಸಮ್ಮೇಳನಕ್ಕೆ ಚಾಲನೆ: ಅಖಿಲ ಭಾರತ 12ನೇ ಶರಣ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಮಾತನಾಡಿದರು.

ಕ್ಷಮೆ ಕೋರಿದ ಸಿಎಂ: ಒಂದೂವರೆ ತಾಸು ವೇದಿಕೆಯಲ್ಲಿ ಕುಳಿತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನಾ ಭಾಷಣ ಮಾಡುವ ಸಂದರ್ಭ ವೇದಿಕೆ ಮೇಲಿದ್ದ ಎಲ್ಲ ಗಣ್ಯರ ಹೆಸರು ಪ್ರಸ್ತಾಪಿಸಿದರು. ಆದರೆ ಸಮ್ಮೇಳನದ ಅಧ್ಯಕ್ಷ ಎಸ್‌.ಆರ್‌. ಗುಂಜಾಳ ಅವರ ಹೆಸರು ಪ್ರಸ್ತಾಪಿಸಲಿಲ್ಲ. ತಕ್ಷಣವೇ ತಮ್ಮ ತಪ್ಪಿನ ಅರಿವಾಗಿ, ಅಧ್ಯಕ್ಷರ ಕ್ಷಮೆ ಕೋರಿ ಸುದೀರ್ಘ ಭಾಷಣ ಮಾಡಿದರು.

Write A Comment