ಕರ್ನಾಟಕ

ರಾತ್ರಿಪೂರ್ತಿ ಅರಚಾಟ, ನಿದ್ದೆಯಿಲ್ಲ: ಈಜಿಪುರದ ನಿವಾಸಿಗಳ ಗೋಳು: ‘ಕತ್ತಲಾದರೆ 30 ನಾಯಿಗಳು ಆಚೆ ಬರ್ತಾವೆ’

Pinterest LinkedIn Tumblr

pvec11dogs

ಬೆಂಗಳೂರು: ‘ಪ್ರತಿದಿನ ಸಂಜೆ ನಾಯಿದೊಡ್ಡಿ ಬಾಗಿಲು ತೆರೆದು 20–30 ನಾಯಿಗಳನ್ನು ಹೊರಕ್ಕೆ ಬಿಡುತ್ತಾರೆ. ಹೆಜ್ಜೆಗೊಂದು ಬೀದಿ ನಾಯಿ ಇಟ್ಟುಕೊಂಡು ನಾವು ಸಂಸಾರ ಮಾಡುವುದು ಹೇಗೆ? ಅಷ್ಟೊಂದು ನಾಯಿಗಳು ಓಡಾಡುವಾಗ ಮಕ್ಕಳನ್ನು ಬೀದಿಗೆ ಬಿಡಲು ಸಾಧ್ಯವೇ?’

–ಈಜಿಪುರದ ನಿವಾಸಿಗಳು ಬುಧವಾರ ಮೇಯರ್‌ ಎನ್‌.ಶಾಂತಕುಮಾರಿ ಅವರ ಮುಂದಿಟ್ಟ ಪ್ರಶ್ನೆ ಇದು. ಈಜಿಪುರದ ನಾಯಿ­ದೊಡ್ಡಿ­ಯಲ್ಲಿ ನಡೆದಿರುವ ಚಟುವಟಿಕೆ ಪರಿಶೀಲಿ­ಸಲು ಬಂದಿದ್ದ ಅವರನ್ನು ಸ್ಥಳೀಯರು ಸುತ್ತು­ವರಿದು ದೂರುಗಳ ಮಳೆಯನ್ನೇ ಸುರಿಸಿದರು.
‘ಪ್ರತಿದಿನ ಕತ್ತಲು ಕವಿದೊಡನೆ ನಾಯಿದೊಡ್ಡಿ ಬಾಗಿಲು ತೆರೆದು ಶಸ್ತ್ರಚಿಕಿತ್ಸೆಗೆ ತಂದ ಬೀದಿ ನಾಯಿ­ಗಳನ್ನೆಲ್ಲ ಹೊರಗೆ ಬಿಡಲಾಗುತ್ತದೆ.

ಒಂದು ನಾಯಿ ಕೂಗಿದರೆ 30 ನಾಯಿಗಳು ಅಟ್ಟಿಸಿಕೊಂಡು ಬರು­ತ್ತವೆ. ಮಿಕ್ಕ ಕಡೆ ಬೈಕ್‌ ಸವಾರರಿಗೆ ಗುಂಡಿ ತಪ್ಪಿಸು­ವುದು ಸವಾಲಾದರೆ, ಇಲ್ಲಿ ನಾಯಿಗಳಿಂದ ತಪ್ಪಿಸಿ­ಕೊಳ್ಳುವ ಸವಾಲು ಎದುರಾಗುತ್ತದೆ’ ಎಂದು ನಿವಾಸಿಗಳು ದೂರಿದರು. ‘ರಾತ್ರಿ ಪೂರ್ತಿ ನಾಯಿಗಳ ಕೂಗಾಟವನ್ನು ಕೇಳ­ಬೇಕಿದೆ. ಅವುಗಳು ಒಂದೇ ಸಮನೆ ಬೊಗಳುವುದ­ರಿಂದ ನಿದ್ದೆಯೇ ಅಪರೂಪವಾಗಿದೆ. ರಾತ್ರಿ ಬೀದಿ­ಯಲ್ಲಿ ಓಡಾಡುವುದು ತುಂಬಾ ಕಷ್ಟವಾಗಿದೆ. ಘಟಕದ ಸಿಬ್ಬಂದಿಗೆ ಇದನ್ನೆಲ್ಲ ಹೇಳಲು ಹೋದರೆ ಕಿವಿಮೇಲೆ ಹಾಕಿಕೊಳ್ಳುತ್ತಿಲ್ಲ. ನಮ್ಮ ಬಡಾವಣೆ­ಯಲ್ಲಿ ಈ ಘಟಕದ ಸಹವಾಸವೇ ಬೇಡ’ ಎಂದು ಒತ್ತಾಯಿಸಿದರು.

‘ಸ್ವಚ್ಛತೆ ಕಾಪಾಡದ ಕಾರಣ ಗಬ್ಬುವಾಸನೆ ಹರಡಿ­­ರುತ್ತದೆ. ಇವತ್ತು ನೀವು ಬಂದಿರುವ ಕಾರಣ ದೊಡ್ಡಿಯನ್ನು ಸ್ವಚ್ಛಗೊಳಿಸಲಾಗಿದೆ’ ಎಂದು ಸಿಟ್ಟಿನಿಂದ ಹೇಳಿದರು. ‘ಗುತ್ತಿಗೆ ಪಡೆದ ಸಂಸ್ಥೆಗಳ ಮುಖ್ಯಸ್ಥರು ಎ.ಸಿ ರೂಮ್‌ಗಳಲ್ಲಿ ಆರಾಮವಾಗಿ ನಿದ್ದೆ ಮಾಡುತ್ತಾರೆ. ನಮ್ಮ ಗೋಳು ಕೇಳುವವರು ಯಾರು’ ಎಂದು ಪ್ರಶ್ನಿಸಿದರು.

ನಿವಾಸಿಗಳನ್ನು ಸಮಾಧಾನಪಡಿಸಿದ ಮೇಯರ್‌, ‘ನಾಯಿದೊಡ್ಡಿಯನ್ನು ನಿರ್ಮಿಸಿದಾಗ ಈ ಪ್ರದೇಶ ಅಭಿವೃದ್ಧಿ ಆಗಿರಲಿಲ್ಲ. ಈಗ ಸುತ್ತಲೂ ಮನೆ­ಗಳಾಗಿದ್ದು, ತುಂಬಾ ಬೆಳೆದಿದೆ. ಹೆಬ್ಬಾಳಕ್ಕೆ ಎಲ್ಲ ಘಟಕಗಳನ್ನು ಸ್ಥಳಾಂತರಿಸಲು ಚಿಂತಿಸಲಾಗು­ತ್ತಿದೆ’ ಎಂದು ವಿವರಿಸಿದರು.

ದೊಡ್ಡಿಯಲ್ಲಿ ಸುಮಾರು 40 ನಾಯಿಗಳಿದ್ದವು. ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಲು ಅವುಗಳಿಗೆಲ್ಲ ಅರಿವಳಿಕೆ ಚುಚ್ಚುಮದ್ದು ನೀಡಲಾ­ ಗಿತ್ತು. ಕೆಲವಂತೂ ನಿಸ್ತೇಜವಾಗಿ ಮಲಗಿದ್ದವು. ‘ಶಸ್ತ್ರ ಚಿಕಿತ್ಸೆಗೆ ಒಳಗಾದ ನಾಯಿಗಳನ್ನು ಎರಡು ದಿನ ಇಟ್ಟುಕೊಂಡು ಬಳಿಕ ಅವುಗಳನ್ನು ಹಿಡಿದ ಸ್ಥಳಗಳಲ್ಲಿ ಬಿಡಲಾಗುತ್ತದೆ’ ಎಂದು ಕ್ಯೂಪಾ ವ್ಯವಸ್ಥಾಪಕರು ಹೇಳಿದರು.

ಜಯನಗರದ ಸೌತ್‌ ಎಂಡ್‌ ವೃತ್ತದ ಬಳಿ­ಇರುವ ಮತ್ತೊಂದು ಘಟಕಕ್ಕೂ ಮೇಯರ್‌ ಭೇಟಿ ನೀಡಿದರು. ಅಲ್ಲಿ ನಾಯಿಗಳನ್ನು ಬಾಗಿಲು ತೆರೆದು ಬೀದಿಗೆ ಬಿಡುವ ಯಾವುದೇ ದೂರುಗಳು ಇರ­ಲಿಲ್ಲ. ಆದರೆ, ಶಸ್ತ್ರಚಿಕಿತ್ಸೆ ಮಾಡಿದ ದಿನವೇ ನಾಯಿ­­ಗಳನ್ನು ಅವುಗಳ ಸ್ಥಾನಗಳಿಗೆ ಹೋಗಿ ಬಿಡಲಾ­ಗುತ್ತದೆ ಎಂದು ಘಟಕದ ಮುಖ್ಯಸ್ಥೆ ಡಾ. ರಿಚಾ ಅಗರ­ವಾಲ್‌ ತಿಳಿಸಿದರು.

ಇದನ್ನು ಕೇಳಿ ಅಸಮಾಧಾ­ನ­ಗೊಂಡ ಮೇಯರ್‌, ‘ಶಸ್ತ್ರಚಿಕಿತ್ಸೆ ನಡೆಸಿದ ದಿನವೇ ಅವುಗಳನ್ನು ಹೊರಗೆ ಬಿಟ್ಟರೆ ಚೇತರಿಸಿಕೊಳ್ಳು­ವುದು ಹೇಗೆ’ ಎಂದು ಪ್ರಶ್ನಿಸಿ­ದರು. ‘ಮೂರು ದಿನ ಇಟ್ಟುಕೊಂಡು ಆರೈಕೆ ಮಾಡಿದ ಬಳಿಕವೇ ಬಿಡ ಬೇಕು’ ಎಂದು ಸೂಚಿಸಿ­ದರು. ಉಪ ಮೇಯರ್‌ ಕೆ.ರಂಗಣ್ಣ, ಜಂಟಿ ಆಯುಕ್ತ (ಪಶು ಸಂಗೋಪನೆ) ಡಾ.ಶಿವರಾಂ ಭಟ್‌ ಹಾಜರಿದ್ದರು.

ನಾಯಿಗಳ ಸಂತಾನಶಕ್ತಿ ಹರಣ ಗುತ್ತಿಗೆದಾರರು
ಸರ್ವೋದಯ ಸೇವಾಭಾವಿ ಸಂಸ್ಥೆ, ಕಂಪ್ಯಾಷನ್‌ ಅನ್‌ಲಿಮಿಟೆಡ್‌ ಪ್ಲಸ್‌ ಆ್ಯಕ್ಷನ್‌ (ಕ್ಯೂಪಾ), ರಿಚಾ ಅಗರವಾಲ್‌ ಪ್ರತಿಷ್ಠಾನ, ಎನಿಮಲ್‌ ರೈಜ್‌ ಫಂಡ್‌ (ಎಆರ್‌ಎಫ್‌) ಮತ್ತು ಕರುಣಾ ಸಂಸ್ಥೆ

Write A Comment