ಕರ್ನಾಟಕ

ಜೈನರ ಜನಸಂಖ್ಯೆಯಲ್ಲಿ ಕುಸಿತ: ಪಟ್ಟಾಚಾರ್ಯ ಸ್ವಾಮೀಜಿಗಳ ಸಮಾವೇಶದಲ್ಲಿ ಕಳವಳ

Pinterest LinkedIn Tumblr

jain

ಬೆಂಗಳೂರು: ‘ಜೈನರ ಸಂಖ್ಯೆಯಲ್ಲಿ ಕುಸಿತ ಉಂಟಾಗುತ್ತಿದ್ದು, ದೇಶದ ಜನಸಂಖ್ಯೆಯಲ್ಲಿ ಜೈನರ ಪ್ರಮಾಣ   ಶೇ 2ಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ’ ಎಂದು ಧರ್ಮ­ಸ್ಥಳದ ಧರ್ಮಾಧಿಕಾರಿ  ಡಿ.ವೀರೇಂದ್ರ ಹೆಗ್ಗಡೆ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಜೈನ ಭವನದಲ್ಲಿ ಕರ್ನಾಟಕ ಜೈನ ಅಸೋಸಿಯೇಷನ್‌ ಹಾಗೂ ಬೆಂಗಳೂರಿನ ಸಕಲ ದಿಗಂಬರ ಜೈನ ಸಮಾಜ ಮಂಗಳವಾರ ಆಯೋಜಿಸಿದ್ದ ಸಮಸ್ತ ಜೈನ ಮಠಗಳ ಪಟ್ಟಾಚಾರ್ಯ ಸ್ವಾಮೀಜಿಗಳ ಸಮಾವೇಶ ಮತ್ತು ಧರ್ಮೋಪದೇಶ ಸಮಾರಂಭದಲ್ಲಿ ಮಾತನಾಡಿದರು.

‘ಜೈನರು ಅಲ್ಪ ಸಂಖ್ಯಾತರಲ್ಲಿ ಅಲ್ಪ ಸಂಖ್ಯಾತರಾಗಿದ್ದಾರೆ. ಹಾಗೆಂದು ಸಮುದಾ­ಯದವರು ಧರ್ಮದ ಆಚರಣೆ ಹಾಗೂ ಅನುಷ್ಠಾನದಲ್ಲಿ ಹಿಂದೆ ಬೀಳಬಾರದು. ಮೂಢನಂಬಿಕೆ ವಿರುದ್ಧ ಹೋರಾಡಬೇಕು. ಯುವಕರಲ್ಲಿ ಜಾಗೃತಿ ಹಾಗೂ ಗೌರವ ಭಾವನೆ ಮೂಡಿಸಬೇಕು’ ಎಂದರು.

‘ಸಮುದಾಯಕ್ಕೆ ಸರ್ಕಾರದಿಂದ ಹಲವು ಸೌಲಭ್ಯಗಳು ಸಿಗುತ್ತಿವೆ. ಆದರೆ, ಹೆಚ್ಚಿನವರಿಗೆ ಈ ಬಗ್ಗೆ ಅರಿವು ಇಲ್ಲ. ಈ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಮಠಗಳು ಜನರಲ್ಲಿ ತಿಳಿವಳಿಕೆ ಮೂಡಿಸಬೇಕು. ಸೌಲಭ್ಯವನ್ನು ಭಿಕ್ಷೆ ಎಂದು ಭಾವಿಸಬಾರದು, ಹಕ್ಕಿನಿಂದ ಪಡೆಯಬೇಕು’ ಎಂದು ನುಡಿದರು.
ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ  ಅವರು ಸಮಾ­ವೇಶದಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು.

ಸಮಾವೇಶದಲ್ಲಿ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ (ಹುಂಚ), ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ (ಕಾರ್ಕಳ), ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ (ಸೋಂದ), ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ (ಕನಕಗಿರಿ), ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ (ಅರಹಂತಗಿರಿ), ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ (ಕಂಬದಹಳ್ಳಿ), ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ (ಮೂಡಬಿದಿರೆ), ವೃಷಭಸೇನ ಭಟ್ಟಾರಕ ಸ್ವಾಮೀಜಿ (ಲಕ್ಕವಳ್ಳಿ), ಧರ್ಮಸೇನ ಭಟ್ಟಾರಕ ಸ್ವಾಮೀಜಿ (ವರೂರು), ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ (ಕೊಲ್ಹಾಪುರ), ಜಿನಸೇನ ಭಟ್ಟಾರಕ ಸ್ವಾಮೀಜಿ (ನಾಂದಣಿ), ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ (ಮೇಲ್‌ಚಿತ್ತಾಮೂರು) ಇದ್ದರು.

ಶಾಸ್ತ್ರಿಗಳ ಕೊರತೆ
‘ಜೈನ ಧರ್ಮದಲ್ಲಿ ಶಾಸ್ತ್ರಿಗಳ ಪರಂಪರೆ ನಶಿಸಿ ಹೋಗಿದೆ. ಹಾಗಾಗಿ ಪ್ರತಿಯೊಂದಕ್ಕೂ ಭಟ್ಟಾರಕರನ್ನು ಅವಲಂಬಿಸ­ಬೇಕಾ­ಗಿದೆ. ಶಾಸ್ತ್ರಿಗಳ ಪರಂಪರೆ ಬೆಳೆಸುವತ್ತ ಸಮುದಾಯ ಗಮನ ಹರಿಸಬೇಕು. ಅದಕ್ಕೆ ಬೇಕಾದ ಸೌಲಭ್ಯ ಕಲ್ಪಿಸಬೇಕು’ ಎಂದು ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.

ಸಮಾವೇಶದ ಪ್ರಮುಖ ನಿರ್ಣಯಗಳು
* ಧಾರ್ಮಿಕ, ಸಂಸ್ಕೃತ, ಪ್ರಾಕೃತ ಪಾಠಶಾಲೆ ಮತ್ತು ಲೌಕಿಕ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುವುದು.

* ಮಠದ ವ್ಯಾಪ್ತಿಗೆ ಬರುವ ಕ್ಷೇತ್ರಗಳಿಗೆ ಹಾಗೂ ಶಾಖಾ­ಮಠ­­ಗ­ಳಿಗೆ ಪಟ್ಟಾಚಾರ್ಯ­ರನ್ನು ನೇಮಿಸುವುದು.
* ಧರ್ಮಪ್ರಚಾರಕ್ಕೆ ಕನಿಷ್ಠ 100 ಮಂದಿ ಶಾಸ್ತ್ರಿಗಳ ಅಗತ್ಯವಿದೆ. ಅದಕ್ಕಾಗಿ ಪ್ರಯತ್ನಿಸುವುದು ಹಾಗೂ ವೇತನ ಹೆಚ್ಚಳ.
* ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ಅನು­ದಾನ ಪಡೆದು ಮಹಾವೀರ ಭವನ ನಿರ್ಮಾಣ.
* ಜಿನಧರ್ಮ ಪ್ರಭಾವನೆಗಾಗಿ ಚಿಕ್ಕ ಮಕ್ಕಳಿಗೆ ಸಂಸ್ಕಾರ ನೀಡುವುದು.
* ಉನ್ನತ ಶಿಕ್ಷಣ ವ್ಯಾಸಂಗಕ್ಕೆ ವಿದ್ಯಾರ್ಥಿಗಳಿಗೆ ನೆರವು ನೀಡುವುದು.

Write A Comment