ಕರ್ನಾಟಕ

ನಗರದ ನಿರಾಶ್ರಿತರಿಗೆ 12,500 ಮನೆಗಳ ಮಂಜೂರು: ರಾಮಲಿಂಗಾ ರೆಡ್ಡಿ

Pinterest LinkedIn Tumblr

ramalinga____

ಬೆಂಗಳೂರು, ಡಿ.8: ನಗರದ ನಿರಾಶ್ರಿತರಿಗೆ 12 ಸಾವಿರದ 500 ಮನೆಗಳು ಮಂಜೂರಾಗಿದ್ದು, 6,700 ಕೋಟಿ ರೂ.ವೆಚ್ಚದಲ್ಲಿ ಹಂತ ಹಂತವಾಗಿ ಮನೆಗಳನ್ನು ನಿರ್ಮಿಸಲಾಗುವುದೆಂದು ಸಾರಿಗೆ ಹಾಗೂ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಗರದ ಗೋಪಾಲಪುರದಲ್ಲಿ ನೂತನವಾಗಿ ನಿರ್ಮಿಸಲಿರುವ ನೂರು ಮನೆಗಳ ಶಂಕುಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತೀ ಮನೆಗೆ ಸುಮಾರು ನಾಲ್ಕೂವರೆ ಲಕ್ಷ ರೂ. ವೆಚ್ಚವಾಗಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳು ಶೇ.10ರಷ್ಟು ಹಾಗೂ ಇತರ ವರ್ಗಗಳ ಜನರು ಶೇ.12ರಷ್ಟನ್ನು ಹಣ ಪಾವತಿ ಮಾಡಿದರೆ ಸಾಕು. ಉಳಿದ ಹಣವನ್ನು ಸರಕಾರವೇ ಭರಿಸಲಿದೆ ಎಂದು ತಿಳಿಸಿದರು.

ಫಲಾನುಭವಿಗಳಿಗೆ ಶೇ.10 ಮತ್ತು 12ರಷ್ಟು ನಿಗದಿಯಾದ ಹಣವನ್ನು ಒಂದೇ ಬಾರಿಗೆ ಪಾವತಿಸಲು ಸಾಧ್ಯವಾಗದಿದ್ದರೆ 2 ಕಂತುಗಳಲ್ಲಿ ಮನೆ ನಿರ್ಮಾಣ ಮಾಡುವುದರೊಳಗೆ ನೀಡಿ ಮನೆಯನ್ನು ತಮ್ಮದಾಗಿಸಿಕೊಳ್ಳಬಹುದು. ಸರಕಾರದ ಈ ಯೋಜನೆಯನ್ನು ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಗೋಪಾಲಪುರದಲ್ಲಿ 100 ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದರ ಜೊತೆಗೆ ಇನ್ನು 128 ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಒಟ್ಟಾರೆ ಗಾಂಧಿನಗರ ಕ್ಷೇತ್ರಕ್ಕೆ 1,033 ಮನೆಗಳು ಮಂಜೂರಾಗಿವೆ ಎಂದು ಮಾಹಿತಿ ನೀಡಿದರು.

ಗುತ್ತಿಗೆದಾರರು ಗುಣಮಟ್ಟದ ಮನೆಗಳನ್ನು ಕಟ್ಟುವಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಈ ಮನೆಗಳಿಗೆ ಸಮರ್ಪಕವಾದ ನೀರಿನ ವ್ಯವಸ್ಥೆ ಕಲ್ಪಿಸಲು ಸಚಿವ ರಾಮಲಿಂಗಾರೆಡ್ಡಿಯವರು ಜಲ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದೆಂದು ಅವರು ತಿಳಿಸಿದರು.

ಕೊಳಚೆ ನಿರ್ಮೂಲನಾ ಮಂಡಳಿಯ ಅಧ್ಯಕ್ಷ ಪಿ.ಆರ್.ರಮೇಶ್, ಪಾಲಿಕೆ ಸದಸ್ಯರಾದ ಕ್ವೀನ್ ಎಲಿಝಬೆತ್, ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಪತ್, ಗುತ್ತಿಗೆದಾರ ದಿನೇಶ್, ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment