ಕರ್ನಾಟಕ

ಎಂಟು ಯುವ ಲೇಖಕರಿಗೆ ಕಟ್ಟಿಮನಿ ಸಾಹಿತ್ಯ ಪುರಸ್ಕಾರ: ಲೇಖಕನಿಗೆ ಟೀಕೆಯೇ ಜೀವದ್ರವ್ಯವಾಗಲಿ; ಕವಿ ಡಾ. ಎಚ್‌.ಎಸ್‌. ವೆಂಕಟೇಶ­­ಮೂರ್ತಿ

Pinterest LinkedIn Tumblr

pvec08BRYo-bg2

ಬೆಳಗಾವಿ: ‘ಲೇಖಕನಿಗೆ ಪ್ರಶಸ್ತಿಗಳಿಗಿಂತ ತಿರ­ಸ್ಕಾರ­ಗಳೇ ಜೀವದ್ರವ್ಯ ಇದ್ದಂತೆ. ತಿರಸ್ಕಾರ ಮತ್ತು ಟೀಕೆ– ಟಿಪ್ಪಣಿಗಳು ಲೇಖಕನ ಬರ­ವಣಿಗೆ ಶೈಲಿಯನ್ನು ಜಾಗೃತ­­ಗೊಳಿಸು­ತ್ತವೆ’ ಎಂದು ಕವಿ ಡಾ. ಎಚ್‌.ಎಸ್‌. ವೆಂಕಟೇಶ­­ಮೂರ್ತಿ ಅಭಿ­ಪ್ರಾಯಪಟ್ಟರು.

ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಆಶ್ರ­ಯ­ದಲ್ಲಿ ಭಾನುವಾರ ನಡೆದ ಯುವ ಸಾಹಿತ್ಯ ಪುರಸ್ಕಾರ ಸಮಾರಂಭ­ದಲ್ಲಿ ಎಂಟು ಜನ ಯುವ ಲೇಖಕರಿಗೆ ಪುರಸ್ಕಾರ ನೀಡಿ ಅವರು ಮಾತನಾಡಿದರು. ‘ಸುಲಭವಾಗಿ ಸಿಗುವ ಪ್ರಶಸ್ತಿಗಳು ತುಂಬಾ ಅಪಾಯಕಾರಿ. ಇವು ಲೇಖಕನ ಬೆಳ­ವ­ಣಿಗೆ­ಯನ್ನು ಕುಂಠಿತಗೊಳಿಸುತ್ತವೆ. ಪ್ರಶಸ್ತಿ­ಗಳಿ­ಗಿಂತ ಟೀಕೆಗಳೇ ಉತ್ತಮ. ಟೀಕೆಗಳು ಲೇಖ­ಕನಲ್ಲಿ ಆತ್ಮ­ವಿಶ್ವಾಸ, ಛಲ ಮೂಡಿ­ಸು­ವುದರ ಜೊತೆಗೆ ಸದೃಢ­ವ­­ನ್ನಾಗಿಸುತ್ತವೆ. ಹೀಗಾಗಿ ಯುವ ಲೇಖ­ಕರು ಟೀಕೆಗಳ ತಿರಸ್ಕಾರಗಳಿಂದ ಕುಗ್ಗದೇ, ಆತ್ಮವಿಶ್ವಾಸ­ದಿಂದ ಮುನ್ನಡೆ­ಯಬೇಕು’ ಎಂದರು.

‘ಲೇಖಕನಿಗೆ ಬರವಣಿಗೆ ಶೈಲಿಗಿಂತ ಅತ್ಯುತ್ತಮ ಶಬ್ದ ಭಂಡಾರ ಅಗತ್ಯ. ಲೇಖಕ ಒಮ್ಮೆ ಶಬ್ದಕೋಶದ ಮೇಲೆ ಹಿಡಿತ ಸಾಧಿಸಿ­ದರೆ, ಶಾಶ್ವತವಾಗಿ ಸಾಹಿತ್ಯ ನೆಲೆ ಕಂಡು­ಕೊಳ್ಳ­ಬಹುದು. ಹೀಗಾಗಿಯೇ ಕವಿ ಗೋಪಾಲ­ಕೃಷ್ಣ ಅಡಿಗರು ಶಬ್ದಕೋಶ ಇಟ್ಟು­ಕೊಂಡು, ಕೃತಿಗಳನ್ನು ಓದುತ್ತಿದ್ದರು. ಈ ದಿಸೆಯಲ್ಲಿ ಯುವ ಲೇಖಕರು ಗಮನ ಹರಿಸಬೇಕು’ ಎಂದರು.

ಸುನಿಲ್‌ ರಾವ್‌, ಶ್ರೀನಿವಾಸ ದೊಡ್ಡ­ಮನಿ, ಶ್ರೀದೇವಿ ಕೆರೆಮನೆ, ಪ್ರಕಾಶ ಗಿರಿ­ಮಲ್ಲ­ನ­ವರ, ಹುಲಿಕುಂಟೆ ಮೂರ್ತಿ, ಇಂದ್ರ­ಕುಮಾರ ಎಚ್‌.ವಿ., ಕಾತ್ಯಾಯಿನಿ ಕುಂಜಿ­ಬೆಟ್ಟು ಹಾಗೂ ಮೌನೇಶ ಬಡಿಗೇರ ಅವರ ಕೃತಿ­ಗ­ಳಿಗೆ ಯುವ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು. ಈ ಪುರಸ್ಕಾರವು ತಲಾ ₨ 10 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಎಂ. ಕಲಬುರ್ಗಿ ಅಧ್ಯಕ್ಷತೆ ವಹಿಸಿದ್ದರು.

Write A Comment