ಕರ್ನಾಟಕ

ಎಟಿಎಂ ಘಟಕದಲ್ಲಿ ಮೊಬೈಲ್ ದೋಚಲು ಯತ್ನ: ಆರೋಪಿಗೆ ಹಿಗ್ಗಾಮುಗ್ಗಾ ಥಳಿತ

Pinterest LinkedIn Tumblr

ATM1WEB

ಬೆಂಗಳೂರು: ಎಟಿಎಂ ಘಟಕದಲ್ಲಿ ಯುವತಿಯರಿಗೆ ಚಾಕುವಿನಿಂದ ಬೆದರಿಸಿ, ಮೊಬೈಲ್ ದೋಚಿ ಪರಾರಿಯಾಗಲು ಯತ್ನಿಸಿದ  ಮಹಮದ್ ಮುನಾವರ್ (25) ಎಂಬಾತನನ್ನು ಸಾರ್ವಜನಿಕರೇ ಹಿಡಿದು ಹ್ರೈಗ್ರೌಂಡ್ಸ್ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಶುಕ್ರವಾರ ನಡೆದಿದೆ.

ಖಾಸಗಿ ಆಸ್ಪತ್ರೆಯ ಶುಶ್ರೂಷಕಿ­ಯರಾದ ನಯನಾ ಮತ್ತು ಸವಿತಾ ಎಂಬುವರು, ರಾತ್ರಿ 7.30ರ ಸುಮಾರಿಗೆ ಹಣ ಡ್ರಾ ಮಾಡಲು ವಸಂತನಗರದಲ್ಲಿನ ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ ಎಟಿಎಂ ಘಟಕಕ್ಕೆ ಹೋಗಿದ್ದರು. ಈ ವೇಳೆ ಅವರನ್ನು ಹಿಂಬಾಲಿಸಿ ಘಟಕದೊ­ಳಗೆ ಹೋದ ಆರೋಪಿ, ಚಾಕುವಿ­ನಿಂದ ಬೆದರಿಸಿ ಪರ್ಸ್‌ ಕಿತ್ತುಕೊಂಡಿ­ದ್ದಾನೆ. ಅದರಲ್ಲಿ ಹಣ ಇರದ ಕಾರಣ, ನಯನಾ ಅವರ ಕೈಲಿದ್ದ ಮೊಬೈಲ್‌ ಕಸಿದುಕೊಂಡು ಓಡಿದ್ದಾನೆ.

ಕೂಡಲೇ ಘಟಕದಿಂದ ಹೊರ ಬಂದ ಯುವತಿಯರು, ನೆರವಿಗಾಗಿ ಕೂಗಿಕೊಂಡಿದ್ದಾರೆ. ಅವರ ಚೀರಾಟ ಕೇಳಿದ ಸಾರ್ವಜನಿಕರು, ಆರೋಪಿಯನ್ನು ಬೆನ್ನಟ್ಟಿ ಹಿಡಿದಿ­ದ್ದಾರೆ. ನಂತರ ಹಿಗ್ಗಾಮುಗ್ಗಾ ಥಳಿಸಿ, ಆ ಪ್ರದೇಶದಲ್ಲಿ ಗಸ್ತು ತಿರು­ಗುತ್ತಿದ್ದ ಹೈಗ್ರೌಂಡ್ಸ್‌ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

‘ಅಸ್ಸಾಂ ಮೂಲದ ಮುನಾ­ವರ್‌, ಮೂರು ವರ್ಷಗಳ ಕಾಲ ಆಂಧ್ರ­ಪ್ರದೇಶದಲ್ಲಿ ನೆಲೆಸಿದ್ದ. ಒಂದೂವರೆ ವರ್ಷದ ಹಿಂದೆ ನಗರಕ್ಕೆ ಬಂದ ಈತ, ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಕಿಸೆಗೆ ಕತ್ತರಿ ಹಾಕಿಕೊಂಡು ಬದುಕು­ತ್ತಿದ್ದ. ನಂತರ ಬಚ್ಚನ್‌ ಎಂಬಾತನ ಜತೆ ಸೇರಿಕೊಂಡು ಡಕಾಯಿತಿಗೆ ಇಳಿದಿದ್ದ. ಈ ಪ್ರಕರಣ ಸಂಬಂಧ ಸಂಜಯನಗರ ಪೊಲೀಸರು ಆತ­ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.

ಖರ್ಚಿಗೆ ಕಾಸಿರಲಿಲ್ಲ: ‘1 ವರ್ಷ 3 ತಿಂಗಳ ಕಾಲ ಶಿಕ್ಷೆ ಅನುಭವಿಸಿದ ಮುನಾವರ್, ಐದು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆ­ಯಾಗಿದ್ದ. ಕಾರಾಗೃಹದಲ್ಲಿ ಕೆಲಸ ಮಾಡಿ ಗಳಿಸಿದ್ದ ಹಣ ಖರ್ಚಾಗಿ­ದ್ದರಿಂದ, ಮತ್ತೆ ದರೋಡೆಗೆ ಇಳಿ­ದಿದ್ದ. ಆರೋಪಿಯನ್ನು ನ್ಯಾಯಾ­ಧೀ­ಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

Write A Comment