ಕರ್ನಾಟಕ

ಐಜಿಪಿ ವಿರುದ್ಧ ಲೈಂಗಿಕ ಕಿರುಕುಳ ದೂರು; ಆರೋಪ ನಿರಾಧಾರ: ಐಜಿಪಿ ಪರಶಿವಮೂರ್ತಿ

Pinterest LinkedIn Tumblr

pvec07BRYo dg2ep

ದಾವಣಗೆರೆ: ಪೂರ್ವ ವಲಯದ ಐಜಿಪಿ ಡಾ.ಎಸ್.ಪರಶಿವಮೂರ್ತಿ ಹಾಗೂ ಇಲಾಖೆಯ ಹಿರಿಯ ಅಧಿ­ಕಾರಿ­ಗಳು ಲೈಂಗಿಕ ಕಿರುಕುಳ ನೀಡಿ­ದ್ದಾರೆ ಎಂದು ಆರೋಪಿಸಿ ಇಲ್ಲಿನ ನಗರದ ಮಹಿಳಾ ಪೊಲೀಸ್‌ ಇನ್‌­ಸ್ಟೆಕ್ಟರ್‌ ಒಬ್ಬರು ಪೊಲೀಸ್ ಮಹಾ­ನಿರ್ದೇ­­ಶಕರಿಗೆ (ಡಿಜಿಪಿ) ದೂರು ಸಲ್ಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಲ್ಪಸಂಖ್ಯಾತರ ಆಯೋಗ, ಮಹಿಳಾ ಆಯೋಗ, ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗಕ್ಕೂ ಅವರು ದೂರಿನ ಪ್ರತಿ ಕಳಿಸಿದ್ದಾರೆ.

ಪ್ರಕರಣ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂ­ಕಿನ ಬೊಮ್ಮನಕಟ್ಟೆ ನಿವಾಸಿ­ಯಾ­ಗಿರುವ ಈ ಮಹಿಳಾ ಸಿಪಿಐ, ತಮ್ಮ ಮಗಳ ವಿದ್ಯಾಭ್ಯಾಸಕ್ಕಾಗಿ ಆದಾಯ ಪ್ರಮಾಣ ಪತ್ರ ಪಡೆದಿದ್ದರು. ಅದರಲ್ಲಿ ತಾವು ಗೃಹಿಣಿಯೆಂದು ಉಲ್ಲೇಖಿಸಿ, ವಾರ್ಷಿಕ ಆದಾಯ ರೂ.17 ಸಾವಿರ ಎಂಬ ದೃಢೀಕರಣ ಪತ್ರ ಸಲ್ಲಿಸಿದ ಆರೋಪ ಅವರ ಮೇಲಿತ್ತು.

ಐಜಿಪಿ ಸ್ಪಷ್ಟನೆ: ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ­ಯಡಿ ವ್ಯಕ್ತಿ­ಯೊ­ಬ್ಬರು ಮಾಹಿತಿ ಪಡೆದು ಐಜಿಪಿ ಪರ­ಶಿವಮೂರ್ತಿ ಅವ­ರಿಗೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ಅಂದಿನ ಹೆಚ್ಚುವರಿ ಪೊಲೀಸ್ ವರಿಷ್ಠಾ­ಧಿಕಾರಿ ರವಿನಾರಾಯಣ್ ತನಿಖೆ ಕೈಗೊಂಡಿ­ದ್ದರು. ಅವರು ನಿವೃತ್ತ­ರಾದ ಬಳಿಕ ನಗರ ಡಿವೈಎಸ್‌ಪಿ ತಿಮ್ಮಪ್ಪ ತನಿಖೆ ಮುಂದು­ವರಿಸಿದ್ದರು.

ಅಮಾನತು: ಅವರ ವರದಿ ಆಧರಿಸಿ ಮಹಿಳಾ ಸಿಪಿಐ ಅವರನ್ನು ಐಜಿಪಿ ಅಮಾ­ನತು ಮಾಡಿದ್ದರು. ಒಂದು ತಿಂಗಳ ಹಿಂದೆ  ಕೆಎಟಿ ಇದಕ್ಕೆ ತಡೆ ನೀಡಿ ಅವರಿಗೆ ಕರ್ತವ್ಯಕ್ಕೆ ಹಾಜರಾಗಲು ಅನುವು ಮಾಡಿತ್ತು. ಬಳಿಕ ಅವರು ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ದೂರು ಸಲ್ಲಿಸಿದ್ದರು.

ಈ ಬಗ್ಗೆ ಶನಿವಾರ ಪತ್ರಿಕಾ­ಗೋಷ್ಠಿ­ಯಲ್ಲಿ ಮಾತನಾಡಿದ ಐಜಿಪಿ ಪರಶಿವ­ಮೂರ್ತಿ, ‘ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿ ಸಿಕ್ಕಿಬಿದ್ದು ಅಮಾನತು­ಗೊಂಡಿದ್ದ ಕಾರಣಕ್ಕೆ ನನ್ನ ಹಾಗೂ ಡಿವೈ­ಎಸ್‌ಪಿ ತಿಮ್ಮಪ್ಪ ವಿರುದ್ಧ ಅವರು ಲೈಂಗಿಕ ಕಿರುಕುಳ ಆರೋಪ ಮಾಡುತ್ತಿ­ದ್ದಾರೆ. ನಮ್ಮ ವಿರುದ್ಧ ಮಾಡಿರುವ ಎಲ್ಲ ಆರೋಪಗಳೆಲ್ಲವೂ ಸುಳ್ಳು’ ಎಂದು ಸ್ಪಷ್ಟಪಡಿಸಿದರು.

‘ಜುಲೈ 31, ಆಗಸ್ಟ್ 1ರಂದು ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿ­ಸಿ­ದ್ದಾರೆ. ಅವರು ಅಂದೇ ಪೊಲೀಸ್ ಠಾಣೆಗೆ ದೂರು ನೀಡುವ ಬದಲು ನ. 1ರಂದು ಅಂಚೆ ಮೂಲಕ ಎಸ್‌ಪಿಗೆ ದೂರು ಸಲ್ಲಿಸಿದ್ದಾರೆ. ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿದ ವಿಚಾರದಲ್ಲಿ ನಾನು ಅವರ ವಿರುದ್ಧ ಕ್ರಮ ಕೈಗೊಂಡೆ ಎಂಬ ಕಾರಣದಿಂದಲೇ ಡಿಜಿಪಿಗೆ ಸುಳ್ಳು ದೂರು ನೀಡಿದ್ದಾರೆ’ ಎಂದರು.

ಡಿವೈಎಸ್‌ಪಿ ತಿಮ್ಮಪ್ಪ ಮಾತನಾಡಿ, ‘ನಮ್ಮ ವಿರುದ್ಧ ಮಾಡಿರುವ ಆಪಾದನೆ­ಗಳು ಕಟ್ಟುಕಥೆಗಳು. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’ ಎಂದು ಹೇಳಿದರು.

‘ಸುಳ್ಳು ಪ್ರಮಾಣ ಪತ್ರ ನೀಡಿಲ್ಲ’
‘ನಾನು ಯಾವುದೇ ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿಲ್ಲ. ಮಗಳಿಗೆ ಸಾಮಾನ್ಯ ವರ್ಗ ಕೋಟಾದಡಿ ಎಂಜಿನಿಯರಿಂಗ್ ಸೀಟು ಸಿಕ್ಕಿದೆ’ ಎಂದು ದೂರು ನೀಡಿರುವ ಮಹಿಳಾ ಸಿಪಿಐ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಭದ್ರಾವತಿ ತಹಶೀಲ್ದಾರ್ ಕಚೇರಿಯಿಂದ ಯಾವುದೇ ಪ್ರಮಾಣ ಪತ್ರ ಪಡೆದಿಲ್ಲ ಎಂದು ಅಲ್ಲಿನ ತಹಶೀಲ್ದಾರ್ ಆಗಸ್ಟ್ 5ಕ್ಕೆ ಸ್ಪಷ್ಟಪಡಿಸಿದ್ದಾರೆ. ಆ ವರದಿಯನ್ನು ಯಾಕೆ ಮುಚ್ಚಿಟ್ಟಿದ್ದಾರೆ? ಅ.16ರಂದು ನನ್ನನ್ನು ಅಮಾನತುಗೊಳಿಸಿದ್ದಾರೆ. ನ.5ರಂದು ನಾನು ಕೆಎಟಿಯಿಂದ ತಡೆಯಾಜ್ಞೆ ತಂದಿದ್ದೇನೆ. ಅದನ್ನು ತಿಳಿಯುತ್ತಿದ್ದಂತೆಯೇ ನ. 6ರಂದು ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಲಾಖಾ ತನಿಖೆಗೆ ಆದೇಶವಾಗಿ, ನ.11ರಂದು ವಿಚಾರಣೆಗೆ ಕರೆಸಿದರು. ಅಷ್ಟೊಂದು ವಿಳಂಬ ಯಾಕೆ ಮಾಡಿದರು?’ ಎಂದು ಪ್ರಶ್ನಿಸಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ವೀರೇಶ್ ಎಂಬ ಹೆಸರು ಇದೆ. ಆದರೆ, ಆ ಹೆಸರಿನ ವ್ಯಕ್ತಿ ಅರ್ಜಿಯನ್ನೇ ಹಾಕಿಲ್ಲ ಎಂದು ತಹಶೀಲ್ದಾರ್ ಸ್ಪಷ್ಟಪಡಿಸಿದ್ದಾರೆ.

Write A Comment