ಕರ್ನಾಟಕ

ತಿರುಪತಿ ಮಾದರಿ ಮ.ಬೆಟ್ಟ ಅಭಿವೃದ್ಧಿ: ಸಿಎಂ

Pinterest LinkedIn Tumblr

sidduಮಲೆ ಮಹಾದೇಶ್ವರಬೆಟ್ಟ: ಇತಿಹಾಸ ಪ್ರಸಿದ್ಧ ಮಲೆ ಮಹಾದೇಶ್ವರಬೆಟ್ಟದ ಸಮಗ್ರ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡು ರಚಿಸಲಾಗಿರುವ ಮಲೆ ಮಹಾದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಲೋಕಾರ್ಪಣೆ ಮಾಡಿದರು.

ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಸಿಎಂ, ” ತಿರುಪತಿ ಮಾದರಿಯಲ್ಲಿ ಮಹದೇಶ್ವರ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ರೂಪುರೇಷೆ ಸಿದ್ಧಪಡಿಸಿ” ಎಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಚೊಚ್ಚಲ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಮೊದಲ ಹಂತದಲ್ಲಿ 40 ಕೋಟಿ ರೂ. ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಭಕ್ತರ ಅನುಕೂಲಕ್ಕಾಗಿ ನಿರ್ಮಿಸಲು ಉದ್ದೇಶಿಸಿರುವ 512 ಕೊಠಡಿಗಳ ವಸತಿ ಸಮುಚ್ಚಯದ ಪೈಕಿ 96 ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿದರು.

ಪ್ರಾಧಿಕಾರ ನಿರ್ವಹಣೆ: ರಾಜ್ಯ ಸರಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದಿತ್ತು. ವಾರ್ಷಿಕ ಸುಮಾರು 35ರಿಂದ 40 ಕೋಟಿ ರೂ. ಆದಾಯ ಇರುವ ಮಾದಪ್ಪನ ದೇವಾಲಯವು ಇನ್ನು ಮುಜರಾಯಿ ಇಲಾಖೆ ವ್ಯಾಪ್ತಿಯಿಂದ ಹೊರ ಬರಲಿದ್ದು, ಪ್ರಾಧಿಕಾರದ ನಿರ್ವಹಣೆಯಲ್ಲಿರುತ್ತದೆ. ”ಪ್ರಾಧಿಕಾರ ರಚನೆ ಮೂಲಕ ಪ್ರತ್ಯೇಕ ಕಾನೂನನ್ನೇ ಮಾಡಲಾಗಿದೆ. ಮುಖ್ಯಮಂತ್ರಿಯೇ ಅಧ್ಯಕ್ಷರಾಗಿರುವ ಕಾರಣ ಹೆಚ್ಚಿನ ಮಹತ್ವ ಬಂದಿದೆ. ಆಡಳಿತವೂ ಬಿಗಿಗೊಳ್ಳಲಿದ್ದು, ಅಧಿಕಾರಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ಬೆಟ್ಟದ ಸರ್ವಾಂಗೀಣ ಅಭಿವೃದ್ಧಿ ಕಾರ್ಯಕ್ಕೆ ಇಂದಿನಿಂದಲೇ ಚಾಲನೆ ಕೊಡಲಾಗಿದೆ ”ಎಂದು ಸಿಎಂ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹಾದೇವಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನೂರು ಶಾಸಕ ಆರ್. ನರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಸಚಿವ ಎಚ್.ಸಿ. ಮಹಾದೇವಪ್ಪ, ಸಂಸದ ಆರ್. ಧ್ರುವನಾರಾಯಣ ಮತ್ತಿತರರು ಇದ್ದರು.

ವೀರಪ್ಪನ್ ನನ್ನ ಮೇಲೂ ಕಣ್ಣಿಟ್ಟಿದ್ದ…
”ನಾನು ಮಹಾದೇಶ್ವರಬೆಟ್ಟಕ್ಕೆ ಬಂದು ಬಹಳ ವರ್ಷಗಳಾಗಿತ್ತು. 1998ರಲ್ಲೇ ಕೊನೆ ಅನಿಸುತ್ತೆ . ಆ ನಂತರ ಸಾಕಷ್ಟು ಸಲ ಇಲ್ಲಿಗೆ ಬರಬೇಕು ಎಂದುಕೊಂಡಿದ್ದೆ. ಆದರೆ ವೀರಪ್ಪನ್ ಹಾವಳಿಯಿಂದಾಗಿ ಸಾಧ್ಯವಾಗಿರಲಿಲ್ಲ. ಡಾ. ರಾಜ್ ಅಪಹರಣ, ಅವರಿಗೆ ನೀಡಿದ ಕಿರುಕುಳ ಎಂಥವರಿಗೂ ಭಯ ಹುಟ್ಟಿಸಿತ್ತು. ಆತ ನನ್ನ ಮೇಲೂ ಕಣ್ಣಿಟ್ಟಿದ್ದನಂತೆ. ಹೀಗಾಗಿ ನಾನು ಬೆಟ್ಟಕ್ಕೆ ಬರಲು ಸಾಧ್ಯವಾಗಿರಲಿಲ್ಲ” ಎಂದರು ಸಿಎಂ. ”ನಾನು ಚಿಕ್ಕವನಿದ್ದಾಗ ನಮ್ಮವ್ವನ ಜತೆಯಲ್ಲಿ ಇಲ್ಲಿಗೆ ಬರುತ್ತಿದ್ದೆ. ಹೈಸ್ಕೂಲಿನಲ್ಲಿದ್ದಾಗ ಬೆಟ್ಟಕ್ಕೆ ಬಂದು ತಲೆಬೋಳಿಸಿಕೊಂಡಿದ್ದೆ ”ಎಂದು ತಮ್ಮ ಬಾಲ್ಯದ ಬೆಟ್ಟದ ಭೇಟಿಯನ್ನು ಸ್ಮರಿಸಿಕೊಂಡರು.

ನಾಡಗೀತೆ: ಜನಾಭಿಪ್ರಾಯದ ನಂತರ ಅಂತಿಮ ನಿರ್ಧಾರ
ಮಲೆ ಮಹಾದೇಶ್ವರಬೆಟ್ಟ: ”ನಾಡಗೀತೆ ಪರಿಷ್ಕರಣೆ ಸಂಬಂಧ ಚನ್ನವೀರ ಕಣವಿ ನೇತೃತ್ವದ ಸಮಿತಿ ಸಲ್ಲಿಸಿರುವ ಶಿಫಾರಸ್ಸಿನ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು”ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಟ್ಟದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,”ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿ ತೊಂದರೆ ಆಗಲ್ಲ. ಅವರಿಗೆ ಕೊಡಬೇಕಾದಷ್ಟು ನೀರನ್ನು ಕೊಟ್ಟೆ ಕೊಡುತ್ತೇವೆ. ಹೀಗಿರುವಾಗ ಅವರಿಗೆಂಥ ತೊಂದರೆ ಹೇಳಿ?” ಎಂದು ಪ್ರಶ್ನಿಸಿದರು.

Write A Comment