ಕರ್ನಾಟಕ

ತಾತ್ಕಾಲಿಕ ಭಾಷಾ ಮಾಧ್ಯಮ ನೀತಿ ಅಳವಡಿಸಲು ತಯಾರಿ: ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಚಿಂತನೆ

Pinterest LinkedIn Tumblr

pvec05dec2014kimmane

ಬೆಂಗಳೂರು: ಭಾಷಾ ಮಾಧ್ಯಮ ನೀತಿ ವಿಷಯದಲ್ಲಿ ಕಾನೂನು ಹೋರಾಟದ ಎಲ್ಲ ಹಂತಗಳಲ್ಲೂ ಒಂದು ವೇಳೆ ಹಿನ್ನಡೆಯಾದರೆ, ಮುಂದಿನ ಶೈಕ್ಷಣಿಕ ವರ್ಷದಿಂದ ತಾತ್ಕಾಲಿಕ ಭಾಷಾ ನೀತಿ­ಯೊಂದನ್ನು ಅಳವಡಿಸಿಕೊಳ್ಳಲು ಪ್ರಾಥ­ಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಜ್ಜಾಗುತ್ತಿದೆ.

ಕನ್ನಡ ಭಾಷಾ ಮಾಧ್ಯಮ ನೀತಿಗೆ ಸಂಬಂಧಿಸಿದ ಕಾನೂನು ಹೋರಾಟದ ಮುಂದಿನ ಹೆಜ್ಜೆ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಗುರುವಾರ ಹಿರಿಯ ಸಾಹಿತಿಗಳು ಹಾಗೂ ಕನ್ನಡಪರ ಹೋರಾ­ಟ­ಗಾರರ ಜೊತೆ  ಸಮಾ­ಲೋಚನೆ ನಡೆಸಿದರು. ತಾತ್ಕಾಲಿಕ ಭಾಷಾ ನೀತಿ ಅಳವಡಿಕೆ ಅನಿವಾರ್ಯ ಎಂಬ ಇಂಗಿತವನ್ನು ಸಚಿವರು ಈ ಸಭೆಯಲ್ಲಿ  ಹೊರಹಾಕಿದರು.

ಸುಪ್ರೀಂಕೋರ್ಟ್‌ ತೀರ್ಪಿನಂತೆ ರಾಜ್ಯ­ದಲ್ಲಿ ಇಂಗ್ಲಿಷ್‌ ಮಾಧ್ಯಮದ ಶಾಲೆ­ಗಳಿಗೆ ಅವಕಾಶ ನೀಡಲೇಬೇಕಾಗ­ಬಹುದು. ಆಗ ಅಂತಹ ಎಲ್ಲ ಶಾಲೆಗ­ಳಲ್ಲಿ ಮಕ್ಕಳು ಕನ್ನಡವನ್ನು ಒಂದು ಭಾಷೆ­ಯಾಗಿ ಕಲಿಯುವುದನ್ನು ಕಡ್ಡಾಯ ಮಾಡಿ ಹೊಸ ನೀತಿ ರೂಪಿಸ­ಲಾಗುತ್ತದೆ ಎಂಬ ಅನಿಸಿಕೆಯನ್ನು ಸಚಿ­ವರು ಸಭೆಯಲ್ಲಿ ಹಂಚಿಕೊಂಡರು ಎನ್ನಲಾಗಿದೆ.

ರಾಜ್ಯ ಸರ್ಕಾರದ ಪುನರ್‌­ಪರಿ­ಶೀಲನೆ ಅರ್ಜಿಯನ್ನು ‘ಸುಪ್ರೀಂ­’ ಇತ್ತೀಚೆಗೆ ವಜಾಗೊಳಿಸಿದೆ. ಈ ತಿಂಗಳ ಅಂತ್ಯ­ದೊಳಗೆ ಪರಿಹಾರಾ­ತ್ಮಕ (ಕ್ಯುರೇಟಿವ್‌) ಅರ್ಜಿ ಸಲ್ಲಿಸಲಾಗು­ವುದು. ಅಲ್ಲಿಯೂ ಹಿನ್ನಡೆಯಾದರೆ ತಾತ್ಕಾಲಿಕ ಭಾಷಾ ನೀತಿ ರೂಪಿಸು­ವುದು ಅನಿವಾರ್ಯ ಆಗುತ್ತದೆ. 2015ರ ಜೂನ್‌ ವೇಳೆಗೆ ಈ ಕುರಿತು ನಿರ್ಧಾರಕ್ಕೆ ಬರಲಾಗುತ್ತದೆ ಎಂಬು­ದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸದರ ಸಭೆ: ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಸಚಿವ ಕಿಮ್ಮನೆ, ‘ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ ಕಡ್ಡಾಯ­ಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಲು ಸಂಸತ್ತಿನಲ್ಲಿ ಖಾಸಗಿ ನಿರ್ಣಯ ಮಂಡಿ­ಸು­ವಂತೆ ರಾಜ್ಯದ ಎಲ್ಲ ಸಂಸದರಿಗೂ ಮನವಿ ಮಾಡಲಾಗುವುದು’ ಎಂದರು.

ಭಾಷಾ ಮಾಧ್ಯಮ ನೀತಿ ಅಳವಡಿಕೆ ವಿಷಯದಲ್ಲಿ ಇತರೆ ರಾಜ್ಯಗಳ ಶಿಕ್ಷಣ ಸಚಿವರ ಜೊತೆ ಚರ್ಚೆ ನಡೆಸುವುದಕ್ಕೂ ನಿರ್ಧರಿಸಲಾಗಿದೆ. ಇದಕ್ಕಾಗಿ ಬೆಂಗಳೂರಿ­ನಲ್ಲಿ ಎಲ್ಲ ರಾಜ್ಯಗಳ ಶಿಕ್ಷಣ ಸಚಿ­ವರ ಸಮ್ಮೇಳನ ನಡೆಸಲು ತೀರ್ಮಾನಿ­ಸಲಾಗಿದೆ ಎಂದರು.

30ಕ್ಕೂ ಹೆಚ್ಚು ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರಿಗೆ ಸಭೆಗೆ ಆಹ್ವಾನ ನೀಡಲಾಗಿತ್ತು. ಅಡ್ವೊಕೇಟ್‌ ಜನರಲ್‌ ಪ್ರೊ.ರವಿವರ್ಮಕುಮಾರ್‌, ಹಿರಿಯ ಸಾಹಿತಿಗಳಾದ ಡಾ. ಚಂದ್ರ­ಶೇಖರ ಕಂಬಾರ, ಪ್ರೊ. ಕೆ.ಎಸ್‌.­ನಿಸಾರ್‌ ಅಹ್ಮದ್‌, ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ, ಜಿ.ಎಸ್‌.ಸಿದ್ದ­ಲಿಂಗಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾ­ರ ಅಧ್ಯಕ್ಷ ಡಾ.ಎಲ್‌.­ಹನು­ಮಂತಯ್ಯ, ವಕೀಲರಾದ ಹೇಮಲತಾ ಮಹಿಷಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಇ. ರಾಧಾಕೃಷ್ಣ, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವೆ ಕೆ.ಕೆ.ಸೀತಮ್ಮ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಅರ್ಜಿ ಸ್ವೀಕಾರ
‘ಈಗಾಗಲೇ ಅಸ್ತಿತ್ವದಲ್ಲಿರುವ ಶಾಲೆಗಳು ಮತ್ತು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳನ್ನು ಆರಂಭಿ­ಸುವವರು ಇಂಗ್ಲಿಷ್‌ ಮಾಧ್ಯಮಕ್ಕೆ ಅನುಮತಿ ಕೋರಿ ಸಲ್ಲಿಸುವ ಅರ್ಜಿ­ಗಳನ್ನು ಕೋರ್ಟ್‌ ಆದೇಶಕ್ಕೆ ಅನು­ಸಾರ ಸ್ವೀಕರಿಸಲಾ­ಗು­ವುದು’ ಎಂದು ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.

ಮಾತೃಭಾಷೆ ಕಡ್ಡಾಯ
ನೆರೆಯ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಅನುಸರಿ­ಸುತ್ತಿರುವ ಮಾದರಿಯಲ್ಲೇ ತಾತ್ಕಾಲಿಕ ಭಾಷಾ ನೀತಿ ರೂಪಿಸುವ ಯೋಚನೆ ಸರ್ಕಾರದ ಮುಂದಿದೆ. ಆ ರಾಜ್ಯಗಳಲ್ಲಿ ಇಂಗ್ಲಿಷ್‌ ಮಾಧ್ಯಮದ  ಶಾಲೆಗಳಲ್ಲೂ ಆಯಾ ರಾಜ್ಯಗಳ ಮಾತೃಭಾಷೆಯನ್ನು ಕಲಿಯುವುದು ಕಡ್ಡಾಯ.
– ಕಿಮ್ಮನೆ ರತ್ನಾಕರ,
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಇಂಗ್ಲಿಷ್‌ ಅನಿವಾರ್ಯ
ಇಂಗ್ಲಿಷ್‌ ಹೊರತಾಗಿ ನಾವು ಬದುಕಲು ಸಾಧ್ಯ­ವಿಲ್ಲ ಎಂಬುದನ್ನು  ಒಪ್ಪಿಕೊಳ್ಳುತ್ತೇನೆ. ಆದರೆ, ನಮ್ಮ ಮಾತೃಭಾಷೆಯನ್ನು ನಾವು ಗೌರವಿಸ­ಬೇಕು. ಇದಕ್ಕಾಗಿ ಒಂದರಿಂದ ಐದನೆ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡು­ವು­ದನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ನಿಲುವನ್ನು ಬೆಂಬಲಿಸುತ್ತೇನೆ.
– ಪ್ರೊ.ಕೆ.ಎಸ್‌.ನಿಸಾರ್‌ ಅಹ್ಮದ್‌

Write A Comment