ಕರ್ನಾಟಕ

‘ಮಾದಿಗ, ಹೊಲೆಯ’ನಿಷೇಧ ಕಷ್ಟ: ಸಮಾಜ ಕಲ್ಯಾಣ ಸಚಿವ ಆಂಜನೇಯ ಸ್ಪಷ್ಟನೆ

Pinterest LinkedIn Tumblr

pvec05BRYo H Anjaneya

ಬೆಂಗಳೂರು: ‘ಮಾದಿಗ, ಹೊಲೆಯ ಮುಂತಾದ ಪದಗಳು ಪರಿಶಿಷ್ಟ ಜಾತಿ ಮತ್ತು ಪಂಗಡದ ಪಟ್ಟಿಯಲ್ಲೇ ಇವೆ. ಹೀಗಾಗಿ ಅವುಗಳ ನಿಷೇಧ ಸಾಧ್ಯವಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.

ಗುರುವಾರ ಇಲ್ಲಿ ಜಾತಿ ಸಮೀಕ್ಷೆಯ ಪೂರ್ವ­ಭಾವಿ ಸಮಾ­ಲೋ­ಚನಾ ಸಭೆ­ಯಲ್ಲಿ ಮಾತನಾಡಿದ ಅವರು, ‘ಹಜಾಮ, ದರ್ಬೇಸಿ, ಕಳ್ಳ­ವಡ್ಡ ಮುಂತಾದ ಪದಗಳು ನಿಂದನೆಯ ಪದ­­ಗ­ಳಾ­ಗಿದ್ದು, ಇವುಗಳಿಗೆ ಪರ್ಯಾಯ ಪದ­ಗಳೂ ಇರುವ ಕಾರಣ ಈ ಹೆಸರುಗಳನ್ನು ಕೈಬಿಡಲು ಆಯೋಗಕ್ಕೆ ಸೂಚಿಸ­ಲಾಗಿದೆ’ ಎಂದು ಅವರು  ಸ್ಪಷ್ಟಪಡಿಸಿದರು.

‘ಜಾತಿ ಜನಗಣತಿಯ ಸಂದರ್ಭ­ದಲ್ಲಿ ನಿಜವಾದ ಜಾತಿಯನ್ನು ಬಹಿ­ರಂಗ­­­ಪಡಿ­ಸದೇ ಇದ್ದವರು ಸೌಲಭ್ಯ ವಂಚಿತರಾಗಲಿ­ದ್ದಾರೆ. ಸ್ವಾಭಿಮಾನ ಬದಿಗಿಟ್ಟು ಎಲ್ಲರೂ ಸರಿ­ಯಾದ ಮಾಹಿತಿ ನೀಡಿ ಸಾಮಾಜಿಕ ನ್ಯಾಯದ ಪರ ಕೆಲಸಕ್ಕೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಬ್ರಾಹ್ಮಣ, ಒಕ್ಕಲಿಗ ಸೇರ್ಪಡೆ: ಜನ­ಗಣ­ತಿಯ ಜಾತಿಗಳ ಪಟ್ಟಿಯ 3(ಎ) ಯಲ್ಲಿ ಒಕ್ಕ­ಲಿಗ ಮತ್ತು ಬ್ರಾಹ್ಮಣ ಜಾತಿ ಸೇರಿಸಿರುವುದರಲ್ಲಿ ಯಾರ ಕೈವಾಡವೂ ಇಲ್ಲ. ಅದು ಆಯೋಗ ತಯಾ­ರಿಸಿದ ಪಟ್ಟಿ ಎಂದು ಪ್ರಶ್ನೆ­ಯೊಂದಕ್ಕೆ ಉತ್ತರಿಸಿದರು.

ವೀರಶೈವ ಲಿಂಗಾಯತ ಪಂಚಮ­ಸಾಲಿ ಮಹಾಸಭಾದ ಅಧ್ಯಕ್ಷ ಬಸವ­ರಾಜ ತಿಂಡೂರ ಮಾತನಾಡಿ, ‘ವೀರ­ಶೈವ ಲಿಂಗಾಯತ ಜಾತಿ ಅಲ್ಲ. ಅದನ್ನು ಧರ್ಮ ಎಂದು ಜಾತಿಪಟ್ಟಿ ಯಲ್ಲಿ ಸೇರಿಸ­ಬೇಕು. ಜಾತಿ ಪಟ್ಟಿಯಲ್ಲಿ  ವೀರಶೈವ ಲಿಂಗಾ­ಯತ ಎಂದು ಬರೆ­ಯ­­ಲಾಗಿದೆ. ಅದನ್ನು ವೀರಶೈವ ಲಿಂಗಾಯತ ಪಂಚಮ­ಸಾಲಿ ಎಂದು ಬದಲಾಯಿಸ­ಬೇಕು’ ಎಂದು ಮನವಿ ಮಾಡಿದರು.

‘ನಾನೇ ಮಾದಿಗ ಎನ್ನುತ್ತಿದ್ದೇನೆ…’
ಮಾಜಿ ಸಚಿವೆ ಬಿ.ಟಿ.­ಲಲಿತಾ ನಾಯಕ್‌ ಅವರು, ‘ಕೊರಗ ಮತ್ತು ಕೊರಚ ಪದ­­­ವನ್ನು ಕೈ ಬಿಡ­ಬೇಕು’ ಎಂದು ಸಲಹೆ ನೀಡಿ­ದಾಗ, ‘ನಾನೇ ಮಾದಿಗ ಎಂದು ಹೇಳಿ­ಕೊ­ಳ್ಳು­ತ್ತಿ­ದ್ದೇನೆ. ಹೀಗಿರುವಾಗ ಕೊರಗ, ಕೊರಚ ಎಂದು ಹೇಳಿಕೊಳ್ಳಲು ಹಿಂಜರಿಕೆ ಏಕೆ’ ಎಂದು ಸಚಿವ ಆಂಜನೇಯ ಪ್ರಶ್ನಿಸಿದರು.

ವಿಭಿನ್ನ ಅನಿಸಿಕೆ ನನಗೇ ಒಂಬತ್ತಾಗಿದೆ
ಇತ್ತೀಚೆಗೆ ದೃಶ್ಯ ಮಾಧ್ಯಮವೊಂದು ರಾಜ್ಯದಲ್ಲಿ 25 ಸಾವಿರ ಮುಸಲ್ಮಾನರಿದ್ದಾರೆ ಎಂದು ವರದಿ ಮಾಡಿತ್ತು. ನನಗೇ ಒಂಬತ್ತು ಮಕ್ಕಳಾಗಿವೆ. ಅದು ಹೇಗೆ 25 ಸಾವಿರ ಜನಸಂಖ್ಯೆ ಎಂದು ಹೇಳುತ್ತಾರೆ. ಇದು ಸಮೀಕ್ಷೆಯಿಂದ ಬಯಲಾಗಲಿ.
–ಸಿ.ಎಂ.ಇಬ್ರಾಹಿಂ

ಗುಳೆ ಹೋದವರ ಸಮೀಕ್ಷೆ
ಹಾಡಿ, ತಾಂಡ, ಗೊಲ್ಲರಹಟ್ಟಿಯಿಂದ ಗುಳೆ ಹೋದವರು ದೀಪಾವಳಿ ಸಮಯದಲ್ಲಿ ವಾಪಸ್‌ ಊರಿಗೆ ಬರುತ್ತಾರೆ. ಆ ಸಮಯದಲ್ಲಿ ಸಮೀಕ್ಷೆ ನಡೆಸುವುದು ಸೂಕ್ತ.
–ಬಿ.ಟಿ.ಲಲಿತಾನಾಯಕ್‌, ಸಾಹಿತಿ

ನೀವು ಹೇಳಿದ್ದೇ ಜಾತಿ
ಜಾತಿ ಸಮೀಕ್ಷೆಗೆ ಬರುವಾಗ ಪ್ರತಿಯೊಬ್ಬರು ನೀಡಿದ ಜಾತಿಯೇ ಅಂತಿಮ. ಹಾಗಾಗಿ ಸರಿಯಾದ ಜಾತಿ ಹೇಳಿ ಸಹಕರಿಸಬೇಕು.  ಜಾತಿಪಟ್ಟಿಯನ್ನು  ಸಾರ್ವಜನಿಕರ ಮಾಹಿತಿಯಂತೆ ಸಿದ್ಧಪಡಿಸಲಾಗಿದೆ.
–ಎಚ್‌. ಕಾಂತರಾಜ್‌, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ

ಮತಾಂತರಕ್ಕೆ ಕಾರಣ ತಿಳಿಯಿರಿ
ಶೋಷಿತರು ಮತಾಂತರ ಹೊಂದಲು ಕಾರಣ­ವೇನು ಎಲ್ಲರೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ನಾಯಿ– ನರಿಗೆ ನೀಡುವ ಬೆಲೆ ನಮ್ಮ ಧರ್ಮ ಮನುಷ್ಯರಿಗೆ ನೀಡಿಲ್ಲ. ಹಿಂದೂ ಧರ್ಮ­ದಲ್ಲಿನ ನ್ಯೂನತೆಯಿಂದಾಗಿ ಅಪಮಾನ­ದಿಂದಾಗಿ, ಸಾಮಾಜಿಕ ಗೌರವಕ್ಕೋಸ್ಕರ ಮತಾಂತರ­ವಾಗುತ್ತಿದ್ದಾರೆ.
–ಎಚ್. ಆಂಜನೇಯ

ಸೌಲಭ್ಯ ಕೊಳ್ಳೆಗೆ ಕತ್ತರಿ
ಸಮೀಕ್ಷೆಯಿಂದ ಜಾತಿ ಜನಸಂಖ್ಯೆಯ ನಿಜವಾದ ಲೆಕ್ಕ ಸಿಗಲಿದೆ. ಸುಳ್ಳು ಜಾತಿ ಪ್ರಮಾಣಪತ್ರ ಮಾಡಿಸಿ ಸೌಲಭ್ಯ ಕೊಳ್ಳೆ ಹೊಡೆಯುವುದನ್ನು ತಡೆಯಬಹುದು.
–ಆರ್‌.ವಿ. ಸುದರ್ಶನ್‌

ನಿಮ್ಮ ಜಾತಿಯೇ ನಮ್ಮದು
‘ನಿಮ್ಮ ಜಾತಿ ಯಾವುದು’ ಎಂದು ಕೇಳಿದರೆ, ಹಿಂಜರಿಕೆಯಿಂದ ‘ನಿಮ್ಮದು ಯಾವುದು ಎಂದು ಮರುಪ್ರಶ್ನೆ ಹಾಕಿ, ಅದೇ ನಮ್ಮದು’ ಎಂದು ಹೇಳುವ ಸ್ಥಿತಿಯಲ್ಲಿ ದಲಿತರಿದ್ದಾರೆ. ಇದು ಬದಲಾಗಬೇಕಾದರೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ತರಬೇಕು. ಆಗ ಜಾತಿ ನಾಶವಾಗುತ್ತದೆ.
–ಸಿದ್ದಲಿಂಗಯ್ಯ, ಕವಿ

Write A Comment