ಕರ್ನಾಟಕ

ಗೂಸಾ ಕೊಟ್ಟು ಇನಾಮು ಪಡೆದ ದಿಟ್ಟೆ; ಬೀದಿ ಕಾಮಣ್ಣನಿಗೆ ಬೀದಿಯಲ್ಲಿ ಥಳಿಸಿದ ಮೈಸೂರಿನ ಯುವತಿ

Pinterest LinkedIn Tumblr

66

ಮೈಸೂರು: ಚುಡಾಯಿಸಿದ ಪುಂಡರಿಗೆ ಒದೆ ಕೊಟ್ಟು ಬುದ್ಧಿ ಕಲಿಸಿದ ಹರಿಯಾಣಾದ ರೋಹ್ಟಕ್ ಹಾಗೂ ನಮ್ಮದೇ ಬೆಂಗಳೂರಿನ ಯುವತಿಯರ ಮಾದರಿಯಲ್ಲಿಯೇ ಬೀದಿ ಕಾಮಣ್ಣನಿಗೆ ಮೈಸೂರಿನ ಮಹಿಳೆಯೊಬ್ಬರು ಗೂಸಾ ನೀಡಿ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲ, ಪೊಲೀಸರಿಂದ ಶಹಬ್ಬಾಸ್‌ಗಿರಿ ಕೂಡ ಪಡೆದಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಅವರು ಈಕೆಗೆ 1,000 ರೂ. ನಗದು ಬಹುಮಾನದೊಂದಿಗೆ ಪ್ರಶಂಸಾ ಪತ್ರ ನೀಡಿ ಗೌರಿವಿಸಿದ್ದಾರೆ.

ನಗರದ ಚಾಮುಂಡಿಪುರಂ ನಿವಾಸಿ, ನಿವೃತ್ತ ರೈಲ್ವೆ ನೌಕರ ಲೋಕನಾಥ್ ಪುತ್ರಿ ಚೈತ್ರಾ (25)ಗೂಸಾ ನೀಡಿದ ದಿಟ್ಟೆ. ಕಲ್ಯಾಣಗಿರಿ ನಿವಾಸಿ ಮಹಮ್ಮದ್ ಸಮೀರ್(33) ಯುವತಿಯನ್ನು ಕೆಣಕಿ ಒದೆ ತಿಂದ ಆರೋಪಿ. ನಗರ ಪೊಲೀಸರು ಯುವತಿಯ ಸಾಹಸವನ್ನು ಮೆಚ್ಚಿ ಬಹುಮಾನ ನೀಡಿ ಗೌರವಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಕಲಂ 356(ಎ) ಅನ್ವಯ ( ಲೈಂಗಿಕ ಕಿರುಕುಳ) ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆಗಿದ್ದಿಷ್ಟು: ಎಂಬಿಎ ಪದವೀಧರೆ ಚೈತ್ರಾ ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಾಗಿದ್ದಾರೆ. ರಜೆ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ್ದ ಈಕೆ ಸೋಮವಾರ ಮಧ್ಯಾಹ್ನ ಸ್ನೇಹಿತೆಯನ್ನು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿಸಿ, ವಾಪಸ್ ಮನೆಗೆ ತೆರಳಲು ನಗರ ಬಸ್ ನಿಲ್ದಾಣದತ್ತ ಹೊರಟರು. ಮಾರ್ಗ ಮಧ್ಯೆ ದೊಡ್ಡ ಗಡಿಯಾರದ ಬಳಿ ಎಟಿಎಂ ಒಂದರಲ್ಲಿ ಹಣ ತೆಗೆಯಲು ತೆರಳಿದಾಗ ಹಿಂಬಾಲಿಸಿದ ಸಮೀರ್ ಅಶ್ಲೀಲವಾಗಿ ಮಾತನಾಡಿದ್ದಾನೆ. ಕೈ ಹಿಡಿದು ಎಳೆದಾಡಿದ್ದಾನೆ. ಇದರಿಂದ ಕುಪಿತಗೊಂಡ ಚೈತ್ರಾ ಆತನ ಕೆನ್ನೆಗೆ ಬಾರಿಸಿದ್ದಾರೆ. ಆದರೂ ಬಿಡದ ಆರೋಪಿ ಆಕೆಯ ಬೆನ್ನು ಹತ್ತಿದ್ದಾನೆ. ರೋಸಿದ ಆಕೆ, ಆತನ ಕೊರಳಪಟ್ಟಿ ಹಿಡಿದು ಪಕ್ಕದಲ್ಲೇ ಬಿದ್ದಿದ್ದ ನಲ್ಲಿ ಪೈಪ್‌ನಿಂದ ಮನಸೋ ಇಚ್ಛೆ ಥಳಿಸಿದ್ದಾರೆ. ಆತ ಪರಾರಿಯಾಗಿದ್ದಾನೆ. ನಿಟ್ಟುಸಿರು ಬಿಟ್ಟು ಬಸ್ ನಿಲ್ದಾಣದತ್ತ ಚೈತ್ರಾ ತೆರಳುತ್ತಿದ್ದಂತೆ ಮತ್ತೆ ಪ್ರತ್ಯಕ್ಷನಾಗಿ ಅಶ್ಲೀಲವಾಗಿ ನಿಂದಿಸತೊಡಗಿದ್ದಾನೆ. ಮತ್ತಷ್ಟು ಕುಪಿತಗೊಂಡ ಚೈತ್ರಾ ಅವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸುಮಾರು 20 ನಿಮಿಷ ಈ ರಾದ್ಧಾಂತ ನಡೆದರೂ ಸ್ಥಳದಲ್ಲಿದ್ದ ಸಾರ್ವಜನಿಕರು ಯುವತಿ ರಕ್ಷಣೆಗೆ ಬರಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.

ಮಹಿಳೆಯರು ತಮ್ಮ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮುಕ್ತವಾಗಿ ಪ್ರತಿಭಟಿಸಬೇಕು. ಪೊಲೀಸರಿಗೆ ದೂರು ನೀಡಲು ಮುಂದೆ ಬರಬೇಕು. ಚೈತ್ರಾ ತೋರಿರುವ ಧೈರ್ಯವು ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾದರಿಯಾಗಿದೆ. ಅವರು ತೋರಿದ ಸಮಯೋಚಿತ ವರ್ತನೆ, ಧೈರ್ಯ ಹಾಗೂ ಸಾಹಸ ಕಾರ್ಯಗಳನ್ನು ಇತರೆ ಮಹಿಳೆಯರು ಸಹ ತೋರಬೇಕು.
ಡಾ.ಎಂ.ಎ.ಸಲೀಂ. ನಗರ ಪೊಲೀಸ್ ಆಯುಕ್ತ.

ಎಲ್ಲಾ ಸಂದರ್ಭದಲ್ಲಿಯೂ ಬೇರೆಯವರಿಂದ ರಕ್ಷಣೆ ಬಯಸುವುದು ಅಸಾಧ್ಯ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು. ಚಾಮುಂಡಿ ಅವತಾರ ತಾಳಿ ಇಂತಹ ಕಾಮ ಪಿಶಾಚಿಗಳನ್ನು ಸದೆ ಬಡಿಯಬೇಕು.
– ಚೈತ್ರಾ, ಬೀದಿ ಕಾಮುಕನಿಗೆ ಥಳಿಸಿದ ಯುವತಿ.

ಮತ್ತೊಂದು ವಿಡಿಯೊ
ಚಂಡೀಗಢ: ಹರಿಯಾಣಾದ ರೋಹ್ಟಕ್ ನಗರದ ಬಸ್‌ನಲ್ಲಿ ಚುಡಾಯಿಸಿದ ಮೂವರು ಯುವಕರಿಗೆ ಗೂಸಾ ನೀಡಿದ್ದ ಇಬ್ಬರು ಸಹೋದರಿಯರ ಇಂತಹದ್ದೇ ಮತ್ತೊಂದು ಪರಾಕ್ರಮದ ವಿಡಿಯೊ ಸಾಮಾಜಿಕ ಜಾಲತಾಣ, ಸುದ್ದಿ ವಾಹಿನಿಗಳಲ್ಲಿ ಹರಿದಾಡಿದೆ. ಉದ್ಯಾನವೊಂದರಲ್ಲಿ ತಮ್ಮನ್ನು ಚುಡಾಯಿಸಲು ಬಂದ ಯುವಕರಿಗೆ ಆರತಿ ಹಾಗೂ ಪೂಜಾ ಒದೆ ಕೊಟ್ಟ 30 ಸೆಕೆಂಡ್‌ಗಳ ವಿಡಿಯೊ ಇದಾಗಿದೆ. ತಿಂಗಳ ಹಿಂದೆ ನಡೆದ ಘಟನೆ ಇದು ಎಂದು ಸೋದರಿಯರು ಹೇಳಿದ್ದಾರೆ.

Write A Comment