ಕರ್ನಾಟಕ

ರಕ್ಷಿತ ಯುವತಿ ಮರಳಿ ವೇಶ್ಯಾವಾಟಿಕೆ ಅಡ್ಡೆಗೆ!: ಸಿಸಿಬಿ ಅಧಿಕಾರಿಗಳ ತಂಡಕ್ಕೆ ಆಘಾತ

Pinterest LinkedIn Tumblr

prostitution

ಬೆಂಗಳೂರು: ವೇಶ್ಯಾವಾಟಿಕೆ ಅಡ್ಡೆಯಲ್ಲಿ ಸಿಸಿಬಿ ಪೊಲೀಸರಿಂದ ರಕ್ಷಿಸಲ್ಪಟ್ಟು ಸರ್ಕಾರಿ ಪುನರ್ವಸತಿ ಕೇಂದ್ರಕ್ಕೆ ಸೇರಿದ್ದ ಯುವತಿ ಮತ್ತೆ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಆಘಾತಕಾರಿ ಪ್ರಕರಣ ಭಾನುವಾರ ಬೆಳಕಿಗೆ ಬಂದಿದೆ.

ಭಾನುವಾರ ಸಿಸಿಬಿ ಮಹಿಳಾ ಮತ್ತು ಮಾದಕದ್ರವ್ಯ ನಿಗ್ರಹ ಘಟಕ ಅಧಿಕಾರಿಗಳ ತಂಡ ಇಂದಿರಾನಗರ ಡಬ್ಬಲ್ ರಸ್ತೆ, 13ನೇ ಕ್ರಾಸ್‌ನಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದಕ್ಕೆ ದಾಳಿ ನಡೆಸಿತ್ತು. ದಾಳಿ ವೇಳೆ ಪಶ್ಚಿಮ ಬಂಗಾಳ ಮೂಲದ ಮೂವರು ಯುವತಿಯರನ್ನು ರಕ್ಷಿಸಿತ್ತು. ಆದರೆ, ಓರ್ವ ಯುವತಿಯನ್ನು ಕಂಡು ಸಿಸಿಬಿ ಪೊಲೀಸರೇ ಆಘಾತಗೊಂಡರು. ಏಕೆಂದರೆ, ಕಳೆದ ಅಕ್ಟೋಬರ್ 28ರಂದು ಇಂದಿರಾನಗರ 9ನೇ ಮುಖ್ಯರಸ್ತೆಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ವೇಳೆ ಆಕೆಯನ್ನು ರಕ್ಷಿಸಲಾಗಿತ್ತು. ಆ ಯುವತಿಯೇ ಮತ್ತೆ ವೇಶ್ಯಾವಾಟಿಕೆ ಜಾಲಕ್ಕೆ ವಾಪಸಾಗಿದ್ದಳು.

ಕಾನೂನಿನ ಪ್ರಕಾರ ವೇಶ್ಯಾವಾಟಿಕೆಯಲ್ಲಿ ಸಿಕ್ಕಿ ಬೀಳುವ ಮಹಿಳೆಯರು ಹಾಗೂ ಯುವತಿಯರನ್ನು ನೊಂದವರು(ಬಲಿಪಶು) ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುನರ್ವಸತಿ ಕೇಂದ್ರಕ್ಕೆ ಬಿಡಲಾಗುತ್ತದೆ. ಅಲ್ಲಿ ಅವರಿಗೆ ಕೌನ್ಸೆಲಿಂಗ್ ಮಾಡಿ ಸ್ವಂತ ಊರಿಗೆ ಹೋಗಲು ಅವಕಾಶ ಕೊಡಲಾಗುತ್ತದೆ.

ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿದ್ದು ಹೇಗೆ, ಯಾರು ಕರೆ ತಂದರು, ಹೀಗೆ ಹಲವು ವಿಷಯಗಳ ಬಗ್ಗೆ ರಕ್ಷಿಸಲ್ಪಟ್ಟ ಯುವತಿಯರಿಂದ ಮಾಹಿತಿ ಕಲೆ ಹಾಕಲಾಗುತ್ತದೆ. ಬಳಿಕ ಅವರ ಮನ ಪರಿವರ್ತಿಸಿ ಪೋಷಕರನ್ನು ಹುಡುಕಾಡಿ ಅವರ ಸುಪರ್ದಿಗೆ ಒಪ್ಪಿಸಲಾಗುತ್ತದೆ. ಅಲ್ಲಿವರೆಗೂ ಸರ್ಕಾರವೇ ಎಲ್ಲವನ್ನು ನೋಡಿಕೊಳ್ಳುತ್ತದೆ.

ಆದರೆ, 18 ವರ್ಷ ದಾಟಿರುವುದರಿಂದ ಅವರನ್ನು ಹೆಚ್ಚಾಗಿ ಪ್ರಶ್ನಿಸಲು ಆಗುವುದಿಲ್ಲ. ಪಾಲಕರನ್ನು ಸೇರಲು ಹೋಗುವುದಾಗಿ ಹೇಳಿ ಯುವತಿ ಮತ್ತೆ ವೇಶ್ಯಾವಾಟಿಕೆ ಜಾಲವನ್ನು ಸೇರಿಕೊಂಡಿದ್ದಾಳೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ತಲೆಮರೆಸಿಕೊಂಡ ಆರೋಪಿ: ಇಂದಾರನಗರದಲ್ಲಿ ದಂಧೆ ನಡೆಸುತ್ತಿದ್ದ ಮುಖ್ಯ ಆರೋಪಿ ಕುಮಾರ್ ಅಲಿಯಾಸ್ ಸಂಜಯ್ ತಲೆಮರೆಸಿಕೊಂಡಿದ್ದಾನೆ.

Write A Comment