ಕನ್ನಡ ವಾರ್ತೆಗಳು

ಹಟ್ಟಿಕುದ್ರುವಿನಲ್ಲಿ ಹೆಚ್ಚುತ್ತಿರುವ ಮರಳುಗಾರಿಕೆ : ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ದೂರು

Pinterest LinkedIn Tumblr

ಕುಂದಾಪುರ: ಕರಾವಳಿಯಲ್ಲಿ ಸ್ಯಾಂಡ್ ಮಾಫಿಯಾ ದಿನೇ ದಿನೇ ಹೆಚ್ಚುತ್ತಿದೆ. ತಾಲೂಕಿನ ಹಟ್ಟಿಯಂಗಡಿ, ಹೇರಿಕುದ್ರು, ಕಂಡ್ಲುರು, ಬಸ್ರೂರು, ಬಳ್ಕೂರು ಹೀಗೆ ನದೀಪಾತ್ರಗಳಲ್ಲಿ ಹೆಚ್ಚುತ್ತಿರುವ ಮರಳು ಮಾಫಿಯಾಗಳಿಂದ ಸ್ಥಳೀಯ ನದೀತೀರದ ಜನ ಕಂಗಾಲಾಗಿದ್ದಾರೆ, ನಿರಂತರ ಮರಳೆತ್ತುವಿಕೆಯಿಂದ ಭೂಮಿ ನೀರುಪಾಲಾಗುತ್ತಿದ್ದು, ಈಗಾಗಲೇ ಹಲವರು ಭಾಗಶಃ ಭೂಮಿ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿ ಹಟ್ಟುಕುದ್ರು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟಿದ್ದಾರೆ.

Hattikudru_Sand-Maphia

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರೂ, ಗಣಿ ಅಧಿಕಾರಿಗಳು ಮರಳು ಮಾಫಿಯಾದ ಜೊತೆ ಕೈಜೋಡಿಸುತ್ತಿರುವ ಅನುಮಾನಕ್ಕೆ ಪುಷ್ಟಿ ನೀಡುವಂತೆ ಕಲೆದ ಹದಿನೈದು ತಿಂಗಳಿಂದ ಮತ್ತೆ ಕಲವು ಕಡೆ ಹೆಚ್ಚುವರಿಯಾಗಿ ಮರಳು ತೆಗೆಯುವ ಕೇಂದ್ರ(ಕಡು)ಗಳು ಹುಟ್ಟಿಕೊಳ್ಳುತ್ತಿವೆ. ಅಲ್ಲದೇ ಉತ್ತರಪ್ರದೇಶದ ಕಾರ್ಮಿಕರು ಇಲ್ಲಿ ನೆಟ್ ಹಾಗೂ ಏಣಿ ಬಳಸಿ ಆಳ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಕುಂದಾಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ದೂರು ಪರಿಶೀಲಿಸಿದ ಕುಂದಾಪುರ ಎಸ್ಸೈ ನಾಸಿರ್ ಹುಸೇನ್, ಮಂಗಳವಾರ ಸಂಜೆ ಇತ್ತಂಡಗಳನ್ನು ಠಾಣೆಗೆ ಕರೆಯಿಸಿ ಮಾತುಕತೆ ನಡೆಸಿದ್ದಾರೆ, ಮರಳು ತೆಗೆಯುವವರಿಗೆ ಶರತ್ತು ವಿಧಿಸಿ ಸ್ಥಳೀಯರು ಮಾತ್ರವೇ ಮರಳು ತೆಗೆಯಬೇಕು. ನೆಟ್ ಹಾಗೂ ಏಣಿ ಬಳಸುವಂತಿಲ್ಲ ಎನ್ನುವ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಈ ಸಂದರ್ಭ ಗ್ರಾಮಸ್ಥರ ಪರವಾಗಿ ಕೃಷ್ಣ ಪೂಜಾರಿ, ರತ್ನಾಕರ ಪೂಜಾರಿ, ಶೇಸು ಪೂಜಾರಿ, ರವಿ ಪೂಜಾರಿ, ಶಂಕರ ಪೂಜಾರಿ, ನಾರಾಯಣ ಪೂಜಾರಿ, ಶೇಖರ ಪೂಜಾರಿ, ಬಾಬು ಪೂಜಾರಿ ಮೊದಲಾದವರಿದ್ದರು.

ಇತ್ತೀಚೆಗೆ ಅಪಾಯಕಾರಿ ರೀತಿಯಲ್ಲಿ ಮರಳು ಎತ್ತುವ ಪ್ರಕ್ರಿಯೆಗಳು ನಡೆಯುತ್ತಿವೆ. ಮೊದಲು ನೆಟ್ ಬಳಸಿ ಆಳ ನೀರಿನಲ್ಲಿ ಮರಳು ತೆಗೆಯಲಾಗುತ್ತಿತ್ತು. ಇದೀಗ ಉತ್ತರ ಪ್ರದೇಶದ ಕಾರ್ಮಿಕರನ್ನೇ ಮರಳು ಮಾಫಿಯಾ ತಂಡ ಬಳಸಿಕೊಳ್ಳುತ್ತಿದ್ದು, ಏಣಿ ಬಳಸಿ ಆಳ ಮರಳೆತ್ತುತ್ತಿರುವುದರಿಂದ ಸ್ಥಳೀಯ ಭೂಮಿ ನದೀ ಪಾತ್ರವಾಗುತ್ತಿದೆ. ಇದನ್ನು ತಕ್ಷಣ ನಿಲ್ಲಿಸದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುತ್ತದೆ. – ಕೃಷ್ಣ ಪೂಜಾರಿ, ಹಟ್ಟಿಕುದ್ರು ನಿವಾಸಿ

Write A Comment