ಕರ್ನಾಟಕ

ಕೂಡಗಿ: ಸಿ.ಎಂ –ರೈತರ ಸಭೆ ವಿಫಲ

Pinterest LinkedIn Tumblr

8wu0ca4v

ಬೆಂಗಳೂರು: ವಿಜಯಪುರ ಜಿಲ್ಲೆಯ ಕೂಡಗಿ ಶಾಖೋತ್ಪನ್ನ ವಿದ್ಯುತ್‌ ಘಟಕದ ನಿರ್ಮಾಣ ಕಾಮಗಾರಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ. ಈ ಹೇಳಿಕೆಯಿಂದ ಬೇಸತ್ತಿರುವ ರೈತ ಮುಖಂಡರು ಪ್ರತಿಭಟನೆ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಸರ್ಕಾರ ಮತ್ತು ರೈತರ ನಡುವೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಮಾತುಕತೆ ವಿಫಲವಾಯಿತು.

‘ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮ (ಎನ್‌ಟಿಪಿಸಿ) ಕೂಡಗಿಯಲ್ಲಿ ಈಗಾಗಲೇ ರೂ. 600 ಕೋಟಿಗೂ ಹೆಚ್ಚು ಮೊತ್ತದ ಹಣ ಖರ್ಚು ಮಾಡಿದ್ದು, ಈ ಸಂದರ್ಭದಲ್ಲಿ ಯೋಜನೆ­ಯಿಂದ ಹಿಂದೆ ಸರಿಯಲು ಸಾಧ್ಯ ಇಲ್ಲ’ ಎಂದು ಸಿದ್ದರಾಮಯ್ಯ ಅವರು ರೈತ ಮುಖಂಡರಿಗೆ ತಿಳಿಸಿದರು. ‘ಈ ಯೋಜನೆಯಿಂದ ಪರಿಸರದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಜನ ಜೀವನಕ್ಕೂ ಅಪಾಯ ಇಲ್ಲ’ ಎಂಬುದನ್ನು ಮನವರಿಕೆ ಮಾಡಲು ಅವರು ಪ್ರಯತ್ನಿಸಿದರು.

ಆದರೆ, ರೈತ ಸಂಘದ ಪ್ರತಿನಿಧಿಗಳು ಕೂಡ ಈ ಯೋಜನೆ­ಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲು ತಜ್ಞರನ್ನು ಕರೆತಂದಿದ್ದರು. ಅವರು ಎಳೆಎಳೆಯಾಗಿ ಪರಿಣಾಮಗಳನ್ನು ಬಿಡಿಸಿಟ್ಟರೂ ಮುಖ್ಯಮಂತ್ರಿ ಸೇರಿದಂತೆ ಎನ್‌ಟಿಪಿಸಿ ಅಧಿಕಾರಿಗಳು ‘ಈಗಾಗಲೇ ಹಣ ಖರ್ಚು ಮಾಡಿರುವ ಕಾರಣ ಅದರಿಂದ ಹಿಂದೆ ಸರಿಯಲು ಸಾಧ್ಯ ಇಲ್ಲ’ ಎಂದು ಸಮಜಾಯಿಷಿ ನೀಡಿದರು. ‘ವಿದ್ಯುತ್‌ ಕೊರತೆ ಹೆಚ್ಚು ಇರುವ ಕಾರಣ ಇಂತಹ ಯೋಜನೆಗಳು ಅನಿವಾರ್ಯ’ ಎಂದು ರೈತರನ್ನೇ ಮನವೊಲಿಸುವ ಪ್ರಯತ್ನ ನಡೆಸಿದರು.

ಪ್ರವಾಸ: ಎನ್‌ಟಿಪಿಸಿ ಇದೇ ರೀತಿಯ ವಿದ್ಯುತ್‌ ಘಟಕಗಳನ್ನು ದೇಶದ ಹಲವು ಕಡೆ ಸ್ಥಾಪಿಸಿದ್ದು, ಅನುಮಾನ ಇರುವವರು ಅಲ್ಲಿಗೆ ಹೋಗಿ ಬರಬಹುದು. ಅದಕ್ಕೆ ಸರ್ಕಾರದ ಕಡೆಯಿಂದ ಸಾರಿಗೆ ವ್ಯವಸ್ಥೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದರು.
ಇದನ್ನು ಒಪ್ಪದ ರೈತ ಮುಖಂಡರು ‘ಹಾನಿ ಆಗುವುದನ್ನು ಅಲ್ಲಿಗೆ ಹೋಗಿ ನೋಡಬೇಕಾಗಿಲ್ಲ’ ಎನ್ನುವ ಉತ್ತರ ನೀಡಿದರು ಎಂದು ಗೊತ್ತಾಗಿದೆ.

ಮತ್ತೆ ಸಭೆ: ಪ್ರವಾಸ ಹೋಗಿ ಬರುವವರೆಗೂ ಪ್ರತಿಭಟನೆ ಕೈಬಿಡಬೇಕು ಎಂದು ಮುಖ್ಯಮಂತ್ರಿ ಮಾಡಿದ ಮನವಿಯನ್ನೂ ರೈತ ಮುಖಂಡರು ತಿರಸ್ಕರಿಸಿದರು. ವಿಧಾನ ಮಂಡಲ ಅಧಿವೇಶನದ ನಂತರ ಮತ್ತೆ ಸಭೆ ನಡೆಸಲು ನಿರ್ಧರಿಸಲಾಯಿತು.

ರೈತ ಸಂಘದ ಪರವಾಗಿ ಪರಿಸರವಾದಿಗಳಾದ ಹೈದರಾಬಾದ್‌ ಮೂಲದ ಸಾಗರದಾರ್‌, ದಕ್ಷಿಣ ಕನ್ನಡ ಜಿಲ್ಲೆಯ ವಿಜಯಕುಮಾರ್‌ ಹೆಗಡೆ ಅವರು ಈ ಘಟಕದಿಂದ ಆಗುವ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದರು.

ರೈತ ಮುಖಂಡ ಕೆ.ಎಸ್‌.ಪುಟ್ಟಣ್ಣಯ್ಯ, ವಿಜಯಪುರ ಜಿಲ್ಲಾ ರೈತ ಸಂಘದ ಅಧ್ಯಕ್ಷ ರುದ್ರಪ್ಪ ರಂಜಣಗಿ ಸೇರಿದಂತೆ ಇತರರು ಭಾಗವಹಿಸಿದ್ದರು. ಪುಟ್ಟಣ್ಣಯ್ಯ ಮಾತನಾಡಿ, ‘ರೈತರ ಜತೆ ಚರ್ಚೆ ನಡೆಸಿದ ನಂತರ ಮುಂದಿನ ತೀರ್ಮಾನ ಪ್ರಕಟಿಸಲಾಗುವುದು’ ಎಂದರು.

ಸಚಿವರಾದ ಡಿ.ಕೆ.ಶಿವಕುಮಾರ್‌, ಎಂ.ಬಿ.ಪಾಟೀಲ್‌, ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರು ಸಭೆಯಲ್ಲಿ ಹಾಜರಿದ್ದರು.

Write A Comment