ಕರ್ನಾಟಕ

ಪ್ರಾಣಿಗೂ ಮೂಳೆ ಮುರಿತಕ್ಕೆ ಹೋಮಿಯೊಪಥಿ: ಅಡಿಕೆ ಹಾಳೆಯ ಬ್ಯಾಂಡೇಜ್‌

Pinterest LinkedIn Tumblr

kdec02-revanna1_0

ಪಂಪ್‌ವೆಲ್‌ನ ಸಿಲ್ವೆಸ್ಟರ್‌ ಅವರು ಚೀಲವೊಂದರಲ್ಲಿ ಗಿರಿರಾಜ ಕೋಳಿ ಮರಿಯೊಂದನ್ನು ತಂದು ವೈದ್ಯರ ತಪಾಸಣಾ ಮೇಜಿನ ಮೇಲೆ ಇಟ್ಟರು. ಅವರ ಮುಖದಲ್ಲಿ ಆತಂಕವೂ ಇತ್ತು. ವೈದ್ಯರು ಕೋಳಿಗೆ ಏನಾಗಿದೆ? ಎಂದು ಕೇಳುತ್ತಲೇ ‘ನೋಡಿ ಡಾಕ್ಟರ್‌, ಮೊನ್ನೆ ತಂದ ಈ ಕೋಳಿ ಮರಿ ನಿನ್ನೆ ಬೆಳಿಗ್ಗೆಯಿಂದ ಏನೂ ತಿನ್ನುತ್ತಿಲ್ಲ. ನೀರನ್ನು ಮಾತ್ರ ಕುಡಿಯುತ್ತಿದೆ. ಕ್ವಾಕ್‌ ಕ್ವಾಕ್‌ ಎಂಬ ವಿಚಿತ್ರ ಸದ್ದು ಬೇರೆ ಮಾಡುತ್ತಿದೆ…’ ಎಂದು ಒಂದೇ ಉಸಿರಿನಲ್ಲಿ ಉಸುರಿದರು.

ಕೋಳಿಯ ಸಮಸ್ಯೆಯನ್ನು ಸಾವಧಾನವಾಗಿ ಕೇಳಿಸಿಕೊಂಡ ವೈದ್ಯರು ಕಪಾಟಿನಲ್ಲಿದ್ದ ಸೀಸೆಯಿಂದ ಎರಡು ಬಿಳಿಯ ಗುಳಿಗೆಗಳನ್ನು ತಂದು ಕೋಳಿಯ ಗಂಟಲಲ್ಲಿ ಹಾಕಿದರು. ‘ಇನ್ನು ಕೋಳಿಯ ಆರೋಗ್ಯ ಸರಿ ಆಗುತ್ತದೆ’ ಎಂದು ಸಮಾಧಾನ ಹೇಳಿ ಅದರ ಮೈಯನ್ನು ಒಂದು ಬಾರಿ ನೀವಿದರು…

‘ನಮ್ಮ ಈ ನಾಯಿ ಬೆಳಿಗ್ಗೆಯಿಂದ ಯಾವುದೇ ಆಹಾರ ತಿನ್ನುತ್ತಿಲ್ಲ. ಕೆಮ್ಮುತ್ತಾ ಇದೆ. ಕೆಲವೊಮ್ಮೆ ವಾಂತಿಯನ್ನೂ ಮಾಡುತ್ತಿದೆ. ಆರೋಗ್ಯವಾಗಿಯೇ ಇತ್ತು. ನಾವು ಇದನ್ನು ಹೊರಗಡೆ ಬಿಡುವುದೂ ಇಲ್ಲ’ ಎಂದು ಬುಲ್‌ಮಾಸ್ಟಿಫ್‌ ತಳಿಯ ನಾಯಿಯನ್ನು ತಂದು ವೈದ್ಯರ ಮುಂದೆ ನಿಲ್ಲಿಸಿದರು.

‘ಅದಕ್ಕೆ ಹೋಮಿಯೊಪಥಿ ಮಾತ್ರೆ ಕೊಡುತ್ತೇನೆ’ ಎಂದು ಹೇಳಿ ಬೀರುವಿನಲ್ಲಿದ್ದ ಸೀಸೆಯಿಂದ ಎರಡು ಮಾತ್ರೆಗಳನ್ನು ತೆಗೆದು ನಾಯಿಯ ಬಾಯಿ ಅಗಲಿಸಿ ಗಂಟಲಲ್ಲಿ ಹಾಕಿದರು. ಅವರಿಗೂ ಅದೇ ಧೈರ್ಯದ ಮಾತು ಹೇಳಿ ಇನ್ನೇನೂ ಸಮಸ್ಯೆ ಆಗದು ಎಂದರು…
ಇದು ಮಂಗಳೂರಿನ ಮರೋಳಿಯ ಪಶು ವೈದ್ಯರೊಬ್ಬರು ಸಾಕು ಪ್ರಾಣಿ–ಪಕ್ಷಿಗಳಿಗೆ ಹೋಮಿಯೊಪಥಿ ಔಷಧಿಯನ್ನು ನೀಡುತ್ತಿರುವ ಚಿತ್ರಣ.

ಹೌದು… ಸುಮಾರು 18 ವರ್ಷಗಳಿಂದ ಪಶು ವೈದ್ಯಕೀಯ ಕ್ಷೇತ್ರದಲ್ಲಿ ಹೋಮಿಯೊಪಥಿ ವಿಧಾನವನ್ನು ಅಳವಡಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ ಡಾ.ಪಿ.ಮನೋಹರ ಉಪಾಧ್ಯ ಅವರು. ಇದಷ್ಟೇ ಅವರ ವೈಶಿಷ್ಟ್ಯ ಅಲ್ಲ; ಜತೆಗೆ ಗಿಡ ಮೂಲಿಕೆ, ಜನಪದ ಚಿಕಿತ್ಸೆಗಳನ್ನೂ, ಚಿಕಿತ್ಸಾ ವಿಧಾನದಲ್ಲಿ ಭಿನ್ನತೆ, ಹೊಸತನವನ್ನೂ  ಅಳವಡಿಸಿಕೊಂಡಿದ್ದಾರೆ.

ಮೂಳೆ ಮುರಿತಕ್ಕೆ ಹೋಮಿಯೊಪಥಿ
ಮೂಳೆ ಮುರಿತ ಆದರೆ ಹೋಮಿಯೊಪಥಿ ಔಷಧಿಗಳಿಂದ ಪರಿಣಾಮಕಾರಿಯಾಗಿ ವಾಸಿ ಮಾಡಬಹುದು. ಏಕೆಂದರೆ ಪ್ರಾಣಿಗಳು ಬಹಳ ಸೂಕ್ಷ್ಮವಾಗಿರುವುದರಿಂದ ಅವುಗಳಿಗೆ ನೋವು ನಿವಾರಕಗಳನ್ನು ಕೊಡುವಂತಿಲ್ಲ. ನೋವು ನಿವಾರಕ ನೀಡಿದರೆ ಅವುಗಳ ಚಲನವಲನದಿಂದ ಗಾಯ ಗುಣ ಆಗುವುದು ನಿಧಾನವಾಗುತ್ತದೆ. ಪ್ರಾಣಿಗಳನ್ನು ಚಲಿಸದಂತೆ ಮಾಡುವುದೂ ಕಷ್ಟದ ಕೆಲಸವೇ. ಈ ಎಲ್ಲ ಕಾರಣಗಳನ್ನು ಗಮನಿಸಿಕೊಂಡು ಹೋಮಿಯೊಪಥಿ ಔಷಧಿಯನ್ನೇ ನಾವು ಶಿಫಾರಸು ಮಾಡುತ್ತೇವೆ.

ಸರಳ ಮುರಿತಕ್ಕೆ ಹೋಮಿಯೊಪಥಿ ಔಷಧಿ ಹೆಚ್ಚು ಪರಿಣಾಮಕಾರಿ ಎಂಬುದು ಅನುಭವದಿಂದ ತಿಳಿದಿದೆ ಎಂದು ಅವರು ಹೋಮಿಯೊಪಥಿ ಚಿಕಿತ್ಸಾ ವಿಧಾನ ಅನುಸರಿಸಲು ಆರಂಭಿಸಿದ್ದನ್ನು ವಿವರಿಸಿದರು. ಶೇ 70ರಷ್ಟು ಸಮಸ್ಯೆಗಳಿಗೆ ಹೋಮಿಯೊಪಥಿ ಔಷಧಿಯನ್ನೇ ನೀಡುತ್ತಿದ್ದೇವೆ. ಮೂಳೆ ಮುರಿತಕ್ಕೊಳಗಾದ ಸಮಸ್ಯೆಗೆ ಈ ಚಿಕಿತ್ಸಾ ಪದ್ಧತಿ ಅನುಸರಿಸಿದ 5ನೇ ದಿನಕ್ಕೇ ಮೂಳೆ ಕೂಡುವ ಪ್ರಕ್ರಿಯೆ ಆರಂಭ ಆಗುತ್ತದೆ.

ಶೀಘ್ರ ಮತ್ತು ಹದವಾಗಿ ವಾಸಿಯಾಗುವ ಗುಣ ಹೊಂದಿರುವ ಹೋಮಿಯೊಪಥಿಯಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲ. ಕೆಲವು ತೊಂದರೆಗಳಿಗೆ ಅಡ್ಡ ಪರಿಣಾಮಗಳಾಗದಂತೆ ಎಚ್ಚರ ವಹಿಸಿ ಹೋಮಿಯೊಪಥಿ ಮತ್ತು ಅಲೋಪಥಿ ಔಷಧಿಯನ್ನೂ ನೀಡುತ್ತೇವೆ. ನೋವು ಶಮನ ಆಗುವುದಕ್ಕೆ ಬೇಕಾದ ಅಂಶಗಳನ್ನು ದೇಹದಲ್ಲಿ ಉಳಿಸಿಕೊಂಡು ನೋವನ್ನು ಕಡಿಮೆ ಮಾಡುವುದೇ ಹೋಮಿಯೊಪಥಿಯ ವಿಶೇಷತೆ ಎಂದು ಅವರು ಮಾಹಿತಿ ನೀಡಿದರು. ಕೆಲವು ಚಿಕಿತ್ಸಾ ಪದ್ಧತಿಗಳನ್ನು ವೈಜ್ಞಾನಿಕವೇ ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ. ಅದು ವೈಜ್ಞಾನಿಕವೇ ಎಂಬುದನ್ನು ಚರ್ಚೆ ಮಾಡುವುದಕ್ಕಿಂತ ಮುನ್ನ ಅದು ರೋಗವನ್ನು ಗುಣಪಡಿಸುತ್ತದೆಯೇ ಎಂಬುದನ್ನು ಗಮನಿಸಬೇಕು ಎಂಬುದು ಉಪಾಧ್ಯ ಅವರ ಕಾಳಜಿ.

ಹೋಮಿಯೊಪಥಿ ಔಷಧಿಯನ್ನು ಒಂದು ವಾರ ತೆಗೆದುಕೊಂಡು ಬಿಟ್ಟರೂ ಸಮಸ್ಯೆ ಇಲ್ಲ. ಕಾಯಿಲೆ ಗುಣ ಆಗುತ್ತದೆ ಎಂಬ ಭರವಸೆಯ ಮಾತು ಅವರದು. ಮನುಷ್ಯರಲ್ಲಾದರೆ ಹೋಮಿಯೊಪಥಿ ಚಿಕಿತ್ಸೆಗೆ ಮುನ್ನ ಮನಸ್ಸು– ದೇಹ ಪ್ರಕೃತಿಯ ಅಧ್ಯಯನ ಮಾಡಬೇಕಾಗುತ್ತದೆ. ಆದರೆ ಪ್ರಾಣಿಗಳಲ್ಲಿ ಅಧ್ಯಯನ ಮಾಡಲು ಕಷ್ಟ. ಅದರ ಜತೆಗೇ 24 ಗಂಟೆ ಇರಲು ಅಸಾಧ್ಯವಾದುದರಿಂದ ಪ್ರಾಣಿಗಳ ರೋಗ ಚಿಹ್ನೆಗೆ ಅನುಗುಣವಾಗಿ ಮದ್ದು ನೀಡಲಾಗುತ್ತದೆ.

ಹೋಮಿಯೊಪಥಿಯಲ್ಲಿ ನೀಡುವ ಗುಳಿಗೆಗಳು ಸಿಹಿಯಾಗಿದ್ದು, ಪ್ರಾಣಿಗಳು ನೇರವಾಗಿ ತಿನ್ನುತ್ತವೆ. ಔಷಧಿಯ ಅಂಶವನ್ನು ಮಾತ್ರೆಗಳಿಗೆ ಹಾಕಿ ಕೊಡುವುದರಿಂದ ಮಾತ್ರೆಗಳನ್ನು ಅವುಗಳು ನುಂಗಲೇ ಬೇಕೆಂದೇನಿಲ್ಲ. ಬಾಯಿಗೆ ಹಾಕಿ ಉಗುಳಿದರೂ ಮಾತ್ರೆಯಲ್ಲಿರುವ ‘ವೈಟಲ್‌ ಫೋರ್ಸ್‌’ನಿಂದ ಔಷಧಿಯ ಗುಣ ದೇಹವನ್ನು ಕೂಡಲೇ ಸೇರುತ್ತದೆ. ಅಲೋಪಥಿಯಲ್ಲಿ ದೇಹಕ್ಕೆ ವಿಟಮಿನ್‌ಗಳನ್ನು ನೀಡಲಾಗುತ್ತದೆ. ದೇಹಕ್ಕೆ ವಿಶ್ರಾಂತಿ ನೀಡಿ ದೇಹವೇ ರೋಗ ವಾಸಿಯಾಗವಂತೆ ಮಾಡಲಾಗುತ್ತದೆ.

ಹೋಮಿಯೊಪಥಿಯಲ್ಲಿ ರೋಗ ನಿವಾರಣೆ ಆಗಲು ಬೇಕಾದ ಅಂಶಗಳನ್ನು ದೇಹದಲ್ಲಿಯೇ ಹೆಚ್ಚು ಮಾಡುವಂತಹ ಔಷಧಿ ಕೊಡಲಾಗುತ್ತದೆ. ಒಟ್ಟಿನಲ್ಲಿ ಅಲೋಪಥಿ ಕಾಯಿಲೆಯ ಲಕ್ಷಣವನ್ನೇ ವಾಸಿ ಪಡಿಸುತ್ತದೆ. ಹೋಮಿಯೊಪಥಿ ರೋಗ ನಿರೋಧಕತೆ ಹೆಚ್ಚಿಸಿ ಶೀಘ್ರವಾಗಿ ಚೇತರಿಸುವಂತೆ ಮಾಡುತ್ತದೆ.

ಗಿಡಮೂಲಿಕಾ ಉತ್ಪನ್ನಗಳ ತಯಾರಿ
ಉಪಾಧ್ಯ ಅವರ ಮನೆಯ ಮಹಡಿಯೂ ಒಂದು ಪ್ರಯೋಗ ಶಾಲೆಯೇ. ಅಲ್ಲಿ ವಿವಿಧ ಬಗೆಯ ಮೂಲಿಕಾ ಮಿಶ್ರಣಗಳನ್ನು ತಯಾರಿಸಿ ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುವ ಕೆಲವು ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.
ಕೋಳಿ, ದನ, ಕುರಿ, ಆಡು, ಹಂದಿಗಳಿಗೆ ಆಹಾರ ಮಿಶ್ರಣ (ಹರ್ಬಲ್‌ ಮೆಡಿಸಿನ್‌, ಮಿನರಲ್‌ ಫೀಡ್‌ ಸಪ್ಲಿಮೆಂಟ್‌)ಗಳನ್ನು ಅವರೇ ಸಿದ್ಧಪಡಿಸುತ್ತಾರೆ. ಇವುಗಳು ಕಾಯಿಲೆಯ ತೀವ್ರತೆ ಕಡಿಮೆ ಮಾಡಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತವೆ.

‘ನಮ್ಮಲ್ಲಿ 11 ಬಗೆಯ ದ್ರಾವಣಗಳೂ, 5 ಬಗೆಯ ಪುಡಿ ರೂಪದ ಫೀಡ್‌ ಸಪ್ಲಿಮೆಂಟ್‌ಗಳೂ ಇವೆ’ ಎಂದು ಅವರು ಮಾಹಿತಿ ನೀಡಿದರು.
ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದಾಗ ಪ್ರಕೃತಿಯೇ ನಮ್ಮ ಕಾರ್ಯಕ್ಕೆ ನೆರವಾಗುತ್ತದೆ ಎಂದು ನಂಬಿರುವ ಅವರು ಹೋಮಿಯೊಪಥಿ ವಿಫಲ ಅಲ್ಲ; ಔಷಧಿಯ ಆಯ್ಕೆಯಲ್ಲಿ ತೊಡಕಾದಾಗ ಮಾತ್ರ ಅದು ವಿಫಲ ಎನ್ನುವ ಭಾವನೆ ಬರುತ್ತದೆ ಎನ್ನುತ್ತಾರೆ. ಡಾ.ಪಿ.ಮನೋಹರ ಉಪಾಧ್ಯ ಅವರ ದೂರವಾಣಿ ಸಂಖ್ಯೆ– 9343 345603 (ರಾತ್ರಿ 8 ರಿಂದ 10).

ಅಡಿಕೆ ಹಾಳೆಯ ಬ್ಯಾಂಡೇಜ್‌
ಮನುಷ್ಯರಲ್ಲಿ ಇರಲಿ, ಪ್ರಾಣಿಗಳಲ್ಲೇ ಆಗಲಿ ಮೂಳೆ ಮುರಿತ ಉಂಟಾದರೆ ಅದು ಕೂಡುವುದಕ್ಕಾಗಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಬಳಕೆ ಸಾಮಾನ್ಯ. ಆದರೆ ಮನೋಹರ ಉಪಾಧ್ಯ ಅವರು 15 ವರ್ಷಗಳಿಂದ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಬಳಕೆ ಮಾಡುತ್ತಿಲ್ಲ!. ಇದು ಅಚ್ಚರಿಯಾದರೂ ನಿಜ. ಇದಕ್ಕೆ ಪರ್ಯಾಯವಾಗಿ ಅವರು ಅನುಸರಿಸುತ್ತಿರುವ ವಿಧಾನ ರಟ್ಟು ಅಥವಾ ಅಡಿಕೆ ಮರದ ಹಾಳೆ. ಪ್ಲಾಸ್ಟರ್ ಆಫ್‌ ಪ್ಯಾರಿಸ್‌ ಹಾಕಿದರೆ ಪ್ರಾಣಿಗಳು ಅಲ್ಲಾಡಲು ಆಗುವುದಿಲ್ಲ.

ಅಡಿಕೆ ಹಾಳೆಯನ್ನು ಮೂಳೆ ಮುರಿತಕ್ಕೆ ಸುತ್ತುತ್ತಾರೆ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನ ದುಷ್ಪರಿಣಾಮ ಮನಗಂಡು ಈ ಪರ್ಯಾಯ ವಿಧಾನ ಹುಡುಕಬೇಕು ಎಂದಾಗ ಅಡಿಕೆ ಹಾಳೆ, ರಟ್ಟು ಸುತ್ತುವ ಈ ವಿಧಾನ ನೆರವಾಯಿತು. ಪ್ಲಾಸ್ಟರ್ ಆಫ್‌ ಪ್ಯಾರಿಸ್‌ನಿಂದ ಸೆಖೆ ಹೆಚ್ಚಾಗುತ್ತದೆ. ಆದರೆ ಅಡಿಕೆ ಹಾಳೆ, ರಟ್ಟಿನಿಂದ ಈ ತೊಂದರೆ ಎದುರಾಗದು. ಮೂಳೆ ಮುರಿತದಿಂದ ಗಾಯ ಆಗಿದ್ದರೆ ಅಡಿಕೆ ಹಾಳೆ, ರಟ್ಟಿನಲ್ಲಿ ತೂತು ಕೊರೆದು ಔಷಧಿಯನ್ನೂ ಹಚ್ಚಬಹುದು.

ಅಡಿಕೆ ಹಾಳೆ ಮನೆಯಲ್ಲೇ ಸಿಗುವುದರಿಂದ ಮಾಲೀಕರೆ ಪ್ರಾಣಿಗಳಿಗೆ ಸುತ್ತಬಹುದು. ಹಸುಗಳಿಗೆ ರಟ್ಟು ಆಗದಿದ್ದರೂ ಹಾಳೆ ಪರಿಣಾಮಕಾರಿ. ನಾಯಿ ಸೇರಿದಂತೆ ಸಣ್ಣ ಪ್ರಾಣಿಗಳಿಗೆ ರಟ್ಟು ಹೆಚ್ಚು ಸೂಕ್ತ. ದೊಡ್ಡ ಹಸುಗಳಿಗಾದರೆ ನಾವು ಅಡಿಕೆ ಹಾಳೆಯನ್ನು ಸುತ್ತಿ ಕಬ್ಬಿಣದ ತಗಡನ್ನೂ ಅಳವಡಿಸುತ್ತೇವೆ. ತೊಡೆ ಮುರಿತಕ್ಕೆ ಯಾವುದೇ ಬ್ಯಾಂಡೇಜ್‌ ಬೇಕಾಗಿರುವುದಿಲ್ಲ. ಮಾಂಸ ಖಂಡವೇ ಅದಕ್ಕೆ ರಕ್ಷಣೆ. ಅದು ಗುಣ ಆಗಲು ಹೋಮಿಯೊಪಥಿ ಮದ್ದು ಕೊಟ್ಟರೆ ಆಯಿತು. ನೋವಿನ ಗುಳಿಗೆ ಕೊಟ್ಟರೆ ಪ್ರಾಣಿಗಳು ಓಡಾಡಿ ಮಾಂಸ ಅಲ್ಲಾಡುತ್ತದೆ. ಮುರಿದ ಮೂಳೆ ಬೇಗ ಕೂಡುವುದೂ ಇಲ್ಲ ಎಂದು ಅವರು ವಿವರಿಸಿದರು.

Write A Comment