ಕರ್ನಾಟಕ

ಸಾರಂಗದ ಜಿಗಿತ; ಹಕ್ಕಿಯ ಪ್ರೇಮ ನಿವೇದನೆ!: ಜಾಗತಿಕ ನಿಸರ್ಗ ಛಾಯಾಚಿತ್ರ ಪ್ರದರ್ಶನದಲ್ಲಿ ಪ್ರಕೃತಿಯ ರಸದೌತಣ

Pinterest LinkedIn Tumblr

pvec2decsFIAP 7

ಬೆಂಗಳೂರು: ಅಲ್ಲಿ ಬಾನೆತ್ತರಕ್ಕೆ ಬೆಳೆದು ನಿಂತ ಮರ­ದಿಂದ ಚಿರತೆಯೊಂದು ಲಂಬಕೋನದಲ್ಲಿ ಕೆಳ­ಮುಖ­ವಾಗಿ ನಡೆಯುತ್ತಿದೆ. ಪಕ್ಕದಲ್ಲೇ ಜಿಂಕೆ­ಯೊಂದು ತನ್ನ ಪುಟ್ಟ ಮರಿಗೆ ಮೊಲೆ ಉಣಿಸು­ತ್ತಿದ್ದರೆ, ಬಂಡೆಯ ಮೇಲೆ ‘ಲ್ಯಾಂಡ್‌’ ಆಗುತ್ತಿರುವ ಅಮ್ಮನ ಕೊಕ್ಕಿನಿಂದ ‘ಊಟ’ ಪಡೆಯಲು ಮರಿಗಳ ನಡುವೆ ಭಾರಿ ಪೈಪೋಟಿ!

ಫೆಡರೇಷನ್‌ ಆಫ್‌ ಇಂಡಿಯನ್‌ ಫೋಟೊಗ್ರಫಿ ವತಿಯಿಂದ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಸೋಮ­ವಾರ­ದಿಂದ ಏರ್ಪಡಿಸಿರುವ ಛಾಯಾಚಿತ್ರ ಪ್ರದರ್ಶನ­ದಲ್ಲಿ ಕಂಡುಬಂದ ನೋಟಗಳಿವು. ನಗರ­ದಲ್ಲೇ ನಡೆದ 17ನೇ ಎಫ್‌ಐಎಸಿ ದ್ವೈವಾರ್ಷಿಕ ನಿಸರ್ಗ ವಿಶ್ವಕಪ್‌  ಸ್ಪರ್ಧೆಯಲ್ಲಿ ಬಹುಮಾನ ಪಡೆದ ಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಕೆಂಪುಬಣ್ಣದ ಕಲ್ಲುಬಂಡೆಗಳ ಮೇಲೆ ಎರಡು ಮರಿಗಳನ್ನು ಬೆನ್ನಮೇಲೆ ಹೊತ್ತ ಕರಡಿಯೊಂದು ಅರಾಮವಾಗಿ ಹೆಜ್ಜೆ ಹಾಕುತ್ತಿರುವ ನೋಟ ನೋಡುಗರಿಗೆ ಕಚಗುಳಿ ಇಡುತ್ತದೆ. ಹೌದು, ಅದು ದರೋಜಿ ಕರಡಿ ಧಾಮದಲ್ಲಿ ತೆಗೆದ ಚಿತ್ರ. ಇನ್ನೊಂದು ಚಿತ್ರದಲ್ಲೂ ಚಿರತೆಯದ್ದೇ ದರ್ಬಾರು. ಮರದ ಟೊಂಗೆ ಮೇಲೆ ಕಾಲು–ಬಾಲಗಳನ್ನು  ಇಳಿಬಿಟ್ಟು ಕುಳಿತಿದ್ದನ್ನು ನೋಡಿದರೆ ಅದು ಬೇಟೆಯನ್ನು ‘ಗುಳುಂ’ ಮಾಡಿಯೇ ವಿಶ್ರಾಂತಿ ಪಡೆಯುತ್ತಿರುವಂತೆ ಭಾಸವಾಗುತ್ತಿದೆ.

ಪಕ್ಷಿಗಳ ಲೋಕವೂ ಅಚ್ಚರಿಗಳನ್ನು ಮೊಗೆ ಮೊಗೆದು ಕೊಡುತ್ತದೆ. ಪುಟ್ಟ ಹಕ್ಕಿಯೊಂದು ಬಾಯಲ್ಲಿ ತಹರೇವಾರಿ ಹೂವು ಹಿಡಿದು ಮಾಡಿದ ಪ್ರೇಮ ನಿವೇದನೆಗೆ ಮನಸೋತ ಇನ್ನೊಂದು ಬಾನಾಡಿ ಹತ್ತಿರ ಬಂದು ಹಾಡು ಹೇಳುತ್ತಿದೆ. ಸಾರಂಗವೊಂದು ಎತ್ತರ ಜಿಗಿತದಲ್ಲಿ ತೊಡಗಿದ ದೃಶ್ಯವಂತೂ ರೋಮಾಂಚನಕಾರಿ ಆಗಿದೆ. ಮುತ್ತು­ಗಳನ್ನು ಪೋಣಿಸಿ ಇಟ್ಟಂತೆ ತತ್ತಿಗಳನ್ನು ಇಡುತ್ತಾ ಹೊರಟಿರುವ ಕೀಟ, ‘ನಿಸರ್ಗದ ಚಮತ್ಕಾರ ನಿಮಗೆಷ್ಟು ಗೊತ್ತು’ ಎಂಬ ಪ್ರಶ್ನೆ ಮುಂದಿಡುತ್ತದೆ.

ವರ್ಣಮಯವಾದ ಈ ಲೋಕದಿಂದ ಮುದ­ಗೊ­ಳ್ಳುತ್ತಾ ಹೊರಟಂತೆ ಎದುರಾಗುವ ‘ಕಾಡಿನ ಕಾಳಗ’ ಹಾಗೂ ‘ಬೇಟೆಯ ಜಪ’ದ ನೋಟಗಳು ಮೈಯಲ್ಲಿ ನಡುಕ ಉಂಟು ಮಾಡುತ್ತವೆ. ಗಿಡ–ಮರ, ಹೂವುಗಳ ಸೊಬಗು, ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ನಡೆಯುವ ರಂಗಿ­ನಾಟ ಎಲ್ಲವೂ ಅಲ್ಲಿನ ಚಿತ್ರ ಚೌಕಟ್ಟುಗಳಲ್ಲಿ ಬಂಧಿಯಾಗಿವೆ.
ಛಾಯಾಚಿತ್ರ ಪ್ರದರ್ಶನಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಚಾಲನೆ ನೀಡಿದರು. ‘ಕಾಡಿನಲ್ಲಿ ನಡೆಯುವ ಈ ವಿದ್ಯ­­ಮಾನಗಳನ್ನು ನಗರದ ಜನ ನೋಡುವ ಅವ­ಕಾಶ ಸಿಕ್ಕಿದ್ದೇ ಒಂದು ಅದೃಷ್ಟ’ ಎಂದು ಅವರು ಮೆಚ್ಚುಗೆಯಿಂದ ಹೇಳಿದರು. ಖ್ಯಾತ ಛಾಯಾ­ಗ್ರಾಹಕ­­ರಾದ ಕೃಪಾಕರ–ಸೇನಾನಿ ಕಾಡಿನ ತೋಳ­ಗಳ ಕಥೆಯನ್ನು ಹೇಳಿ ಕುತೂಹಲ ಕೆರಳಿಸಿದರು.

‘ತೋಳಗಳ ಕಥೆ ಕುತೂಹಲ ಕೆರಳಿಸಿದೆಯೇ?  ಹಾಗಾದರೆ ಶನಿವಾರ (ಡಿ.6) ಸಂಜೆ 6ಕ್ಕೆ ನೀವೆಲ್ಲ ಇಲ್ಲಿಗೆ ಬನ್ನಿ. ‘ವಾಕಿಂಗ್‌ ವಿತ್‌ ವೂಲ್ವ್ಸ್’ ಸಾಕ್ಷ್ಯ ಚಿತ್ರ ತೋರಿಸುತ್ತೇವೆ ಎಂಬ ಆಹ್ವಾನವನ್ನೂ ನೀಡಿದರು.

ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಟಿ.ಎನ್‌.ಎ ಪೆರುಮಾಳ್‌, ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌. ಶಂಕರ್‌ ಹಾಜರಿದ್ದರು. 17ನೇ ಎಫ್‌ಐಎಸಿ ದ್ವೈವಾರ್ಷಿಕ ನಿಸರ್ಗ ವಿಶ್ವಕಪ್‌ ಸ್ಪರ್ಧೆಯಲ್ಲಿ 24 ದೇಶಗಳು ಪಾಲ್ಗೊಂಡಿದ್ದವು. ಪ್ರಿಂಟ್‌ ವಿಭಾಗದಲ್ಲಿ ಇಟಲಿಗೆ ವಿಶ್ವಕಪ್‌ ದೊರೆ­ತರೆ, ಭಾರತಕ್ಕೆ ಸ್ವರ್ಣ ಪದಕ ಲಭಿಸಿತ್ತು. ಪ್ರೊಜೆ­­ಕ್ಟೆಡ್‌ ಇಮೇಜ್‌ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ವಿಶ್ವ­ಕಪ್‌ ಪಡೆದರೆ, ಇಟಲಿ ಸ್ವರ್ಣ ಪದಕ ಪಡೆದಿತ್ತು.

ಭಾರತ, ಇಟಲಿ, ದಕ್ಷಿಣ ಆಫ್ರಿಕಾ, ಫ್ರಾನ್ಸ್‌, ಸ್ಲೋವಾಕಿಯಾ, ಇಂಗ್ಲೆಂಡ್‌, ಆಸ್ಟ್ರಿಯಾ, ಸೆಬ್ರಿಯಾ, ಹಾಲೆಂಡ್‌ ಮತ್ತಿತರ ದೇಶಗಳ ಛಾಯಾಚಿತ್ರಗಳು ಪ್ರದರ್ಶನಕ್ಕಿವೆ. ಡಿಸೆಂಬರ್‌ 7ರವರೆಗೆ ಪ್ರದರ್ಶನ ನಡೆಯಲಿದ್ದು, ಬೆಳಿಗ್ಗೆ 11.30ರಿಂದ ರಾತ್ರಿ 7.30ರವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

Write A Comment