ಕರ್ನಾಟಕ

ಆಹಾರ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ: ಲೋಕಾಯುಕ್ತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

Pinterest LinkedIn Tumblr

 

pvec02dec14rjAnganvadi-1

ಬೆಂಗಳೂರು: ಮಂಡ್ಯ, ಚಿತ್ರದುರ್ಗ ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಪೂರಕೆ ಮಾಡುವ  ಪೌಷ್ಟಿಕ ಅಹಾರ ಸಾಮಗ್ರಿ ಖರೀದಿಯಲ್ಲಿ ನಡೆದಿ­ರುವ ಅವ್ಯವಹಾರದ ತನಿಖೆಯನ್ನು ಲೋಕಾ­ಯುಕ್ತಕ್ಕೆ ವಹಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ಸದಸ್ಯರು ಪುರ­ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಮಹಾಮಂಡಳಿಯ ಅಧ್ಯಕ್ಷ ಜಿ.ಆರ್. ಶಿವಶಂಕರ್‌ ಮಾತನಾಡಿ, ‘ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ, ಮಂಡ್ಯ ನಗರ ಹಾಗೂ ಪಾಂಡವಪುರ­ದಲ್ಲಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಮತ್ತು ತರಬೇತಿ ಕೇಂದ್ರಗಳ ಮೂಲಕ  ಜಿಲ್ಲೆಯ 2,525 ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಕೆ  ಮಾಡಲಾಗುತ್ತಿದೆ. ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾಗಿದ್ದ ಚಂದ್ರಶೇಖರಯ್ಯ ಅವರು ಅಂಗನವಾಡಿ ಕೇಂದ್ರಗಳಿಗೆ ಹೆಸರು ಬೇಳೆ ಬದಲಿಗೆ  ಮೋಟ್‌ದಾಲ್‌ ಎಂಬ ಧಾನ್ಯ ಪೂರೈಕೆ ಮಾಡಿ ಅವ್ಯವಹಾರ ನಡೆಸಿದ್ದಾರೆ’ ಎಂದು ದೂರಿದರು.

ಮಾರುಕಟ್ಟೆಯಲ್ಲಿ ಹೆಸರು ಬೇಳೆ ಬೆಲೆ ಕೆ.ಜಿ.ಗೆ ರೂ. 98 ಇದೆ. ಮೋಟ್‌­ದಾಲ್‌ ಕೆ.ಜಿ.ಗೆ ರೂ. 28 ಇದೆ. ಬೆಲೆ ಕಡಿಮೆ ಎನ್ನುವ ಕಾರಣಕ್ಕೆ ಕಳಪೆ ಆಹಾರ ಪೂರೈಸಿ ಪ್ರತಿ ತಿಂಗಳು ರೂ. 20 ಲಕ್ಷಕ್ಕೂ ಹೆಚ್ಚು ಹಣ ಲೂಟಿ ಮಾಡಿದ್ದಾರೆ. ಒಂದೂ­ವರೆ ವರ್ಷದಿಂದ ಈ ಅವ್ಯವ­ಹಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಅದೇ ರೀತಿ ಚಿತ್ರದುರ್ಗ ಜಿಲ್ಲೆಯ  ಉಪ ನಿರ್ದೇಶಕರಾಗಿದ್ದ ನಂಜೇಗೌಡ ಅವರು ಸಹ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಧಾನ್ಯ ಪೂರೈಕೆ ಮಾಡಿದ್ದಾರೆ.  ಇಲಾಖೆಯ ಸಮಗ್ರ ಬಾಲ ವಿಕಾಸ ಯೋಜನೆಯ ಜಂಟಿ ನಿರ್ದೇಶಕ ಓಬಳಪ್ಪ ಅವರು  ಅವರು ಇತ್ತೀಚೆಗೆ ಪರಿಶೀಲನೆ ನಡೆಸಿ ಅದನ್ನು ದೃಢಪಡಿಸಿದ್ದಾರೆ. ಆದರೆ, ಈವರೆಗೂ  ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

ಕೂಡಲೇ ಈ ಅವ್ಯವಹಾರದ ತನಿಖೆ­ಯನ್ನು ಲೋಕಾಯುಕ್ತಕ್ಕೆ ವಹಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Write A Comment