ಕರ್ನಾಟಕ

ಬಿಎಸ್‌ವೈ ಸೋದರಳಿಯ ಬಂಧನ: ಜಮೀನು ಡಿನೋಟಿಫೈ ಮಾಡಿಸುವುದಾಗಿ ವಂಚನೆ

Pinterest LinkedIn Tumblr

hand_cuff_arrest_AP_Photo_0ಬೆಂಗಳೂರು/ ಮೈಸೂರು: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನ­ಪಡಿಸಿಕೊಂಡಿದ್ದ ಜಮೀನನ್ನು ಡಿನೋಟಿಫೈ ಮಾಡಿಸು­ವುದಾಗಿ ಉದ್ಯಮಿಯೊಬ್ಬರಿಂದ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಸಂಸದ ಬಿ.ಎಸ್‌.ಯಡಿಯೂರಪ್ಪ ಅವರ ಸಹೋದರಿಯ ಮಗ ಎಸ್‌.ಸಿ.ರಾಜೇಶ್‌ ಎಂಬುವರನ್ನು ಬೆಂಗಳೂರಿನ ಹನುಮಂತನಗರ ಪೊಲೀಸರು ಮೈಸೂರಿನಲ್ಲಿ ಸೋಮವಾರ ಬಂಧಿಸಿದ್ದಾರೆ.

ಮೈಸೂರಿನ ಆಲನಹಳ್ಳಿ ಬಳಿಯ ನಂದಿನಿ ಬಡಾವಣೆಯಲ್ಲಿ ವಾಸವಿರುವ ರಾಜೇಶ್‌ ಅವರು ಹನುಮಂತನಗರದ ಕೆ.ಜಿ.ಕೃಷ್ಣ ಎಂಬ ಉದ್ಯಮಿಗೆ ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೈಸೂರಿನ ಕೆಆರ್‌ಎಸ್‌ ರಸ್ತೆಯಲ್ಲಿ ಕೃಷ್ಣ ಅವರಿಗೆ ಸೇರಿದ 11 ಎಕರೆ ಜಮೀನು ಇದ್ದು, ಅದನ್ನು ಕೆಐಎಡಿಬಿ 2007ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. 2011ರಲ್ಲಿ ರಾಜೇಶ್‌ ಅವರು ಆ ಜಮೀನನ್ನು ಡಿನೋಟಿಫೈ ಮಾಡಿಸುವುದಾಗಿ ಹೇಳಿ ಕೃಷ್ಣ ಅವರಿಂದ ರೂ. 40 ಲಕ್ಷ ಮತ್ತು ರೂ. 10 ಲಕ್ಷ ಮೌಲ್ಯದ ಕಾರು ಪಡೆದುಕೊಂಡು ವಂಚಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ­ಯಾಗಿದ್ದರು. ಕೆಲಸ ಆಗದೇ ಇದ್ದುದರಿಂದ ಕೃಷ್ಣ ಅವರು ಹಣ ವಾಪಸ್‌ ಕೇಳಿದರು. ಇದರ ಬೆನ್ನಲ್ಲೇ ರಾಜೇಶ್‌ ಅವರು ಕೃಷ್ಣ ವಿರುದ್ಧ ಕೊಲೆ ಬೆದರಿಕೆ ಆರೋಪ ಹೊರಿಸಿ ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ವರ್ಗಾಯಿಸಲಾಗಿತ್ತು. ನಂತರ ಕೃಷ್ಣ ಅವರು ರಾಜೇಶ್‌ ವಿರುದ್ಧ 2011ರ ಸೆಪ್ಟೆಂಬರ್‌ನಲ್ಲಿ ಹನುಮಂತನಗರ ಠಾಣೆಗೆ ದೂರು ಕೊಟ್ಟಿದ್ದರು.

ಇದರ ತನಿಖೆ ನಡೆಸಿದ ಸಿಸಿಬಿ ಅಧಿಕಾರಿಗಳು, ಕೃಷ್ಣ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿ­ದ್ದರು. ಆದರೆ ಕೃಷ್ಣ ಅವರು ದಾಖಲಿಸಿದ್ದ ಪ್ರಕರಣದ ತನಿಖೆ ನಡೆಸಿರಲಿಲ್ಲ. ಈ ಸಂಬಂಧ ಕೃಷ್ಣ  ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌, ಕೃಷ್ಣ ಅವರ ದೂರಿನ ತನಿಖೆ ನಡೆಸಿ ಆರೋಪಿಯನ್ನು ಬಂಧಿಸು­ವಂತೆ ಹನುಮಂತನಗರ ಪೊಲೀಸರಿಗೆ ಆದೇಶಿಸಿತ್ತು.

‘ಹೈಕೋರ್ಟ್‌ನ ಆದೇಶದ ಅನ್ವಯ ಸಿಬ್ಬಂದಿ ಸೋಮವಾರ ಸಂಜೆ ಮೈಸೂರಿಗೆ ಹೋಗಿ ರಾಜೇಶ್‌ ಅವರನ್ನು ಬಂಧಿಸಿ, ಕಾರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಮಂಗಳವಾರ ಬೆಳಿಗ್ಗೆ ನಗರಕ್ಕೆ ಕರೆದುಕೊಂಡು ಬರಲಾಗುತ್ತದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Write A Comment