ಕರ್ನಾಟಕ

ಗುಂಡು ಸ್ಫೋಟಿಸಿ ಮಕ್ಕಳಿಗೆ ಗಾಯ: ಪೊಲೀಸರ ಅಣಕು ಪ್ರದರ್ಶನದಲ್ಲಿ ಅಚಾತುರ್ಯ

Pinterest LinkedIn Tumblr

pvec02dec2014tm16

ತುಮಕೂರು: ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಸೋಮ­ವಾರ ಇಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗಾಗಿ ಪೊಲೀಸರು ಆಯೋಜಿಸಿದ್ದ ಅಣಕು ಪ್ರದರ್ಶನದ ವೇಳೆ, ಗಾಳಿ­­ಯಲ್ಲಿ ಹಾರಿಸಿದ ರಬ್ಬರ್‌ ಗುಂಡು ಕೆಳಗೆ ಬಿದ್ದು ಸ್ಫೋಟಿಸಿ ಚೂರುಗಳು ಸಿಡಿದು 7 ಮಕ್ಕಳು ಗಾಯಗೊಂಡರು.

ಪೊಲೀಸ್‌ ಮೈದಾನದಲ್ಲಿ ಈ ಕಾರ್ಯಕ್ರಮಕ್ಕೆ ಬಂದಿದ್ದ ಮಕ್ಕಳನ್ನೇ ಅಣಕು ಪ್ರತಿಭಟನೆಗೆ ಬಳಸಿಕೊಂಡ ಪೊಲೀಸರು ಮೊದಲಿಗೆ ಅವರತ್ತ ಅಶ್ರುವಾಯು ಶೆಲ್ ಸಿಡಿಸುವ ನಾಟಕ ಆಡಿದರು. ಉತ್ತೇಜಿತರಾದ ಮಕ್ಕಳು ಪೊಲೀಸರತ್ತ ಮಣ್ಣು ತೂರಿ ಖುಷಿಪಟ್ಟರು. ಅದೇ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಕೂಡಲೇ ಮೈದಾನದ ಕೊನೆಯಿಂದ ವಿದ್ಯಾರ್ಥಿಗಳಿಂದ ಹಾಹಾಕಾರ ಕೇಳಿಬಂತು.

ನೋಡಿದಾಗ ಗುಂಡಿನ ಚೂರುಗಳು ತಗುಲಿ ೭ ವಿದ್ಯಾರ್ಥಿಗಳ ಬಟ್ಟೆಗಳು ರಕ್ತಸಿಕ್ತಗೊಂಡಿದ್ದವು. ಶಬ್ದಕ್ಕೆ ಹೆದರಿದ ಕೆಲ ವಿದ್ಯಾರ್ಥಿಗಳು ಅರೆಪ್ರಜ್ಞಾಹೀನರಾದರು. ಬಹುಪಾಲು ವಿದ್ಯಾರ್ಥಿನಿಯರು ಅಳತೊಡಗಿದರು. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು.

ಈ ಅಚಾತುರ್ಯದಲ್ಲಿ ಬಾಪೂಜಿ ಪ್ರೌಢಶಾಲೆ 8ನೇ ತರಗತಿ ವಿದ್ಯಾರ್ಥಿನಿ ಮೋನಿಕಾಗೆ ಹೆಚ್ಚಿನ ಗಾಯವಾಗಿದ್ದು ಕೈ ಹೆಬ್ಬೆರಳಿನ ಮೂಳೆ ಮುರಿದಿದೆ. ಒಂದು ಕಾಲು ಸಣ್ಣ­ಪ್ರಮಾಣ­ದಲ್ಲಿ ಸುಟ್ಟಿದೆ. ಆಕೆಗೆ ನಗರದ ಖಾಸಗಿ ಆಸ್ಪತ್ರೆ­ಯೊಂದರಲ್ಲಿ ಮಧ್ಯಾಹ್ನ ಶಸ್ತ್ರಚಿಕಿತ್ಸೆ ಮಾಡಲಾಯಿತು.

ವರದರಾಜ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿನಿ ಟೇಸಿ ಅವರ ಕಾಲಿನ ಮೀನಖಂಡ ಹರಿದು ಹೋಗಿದ್ದು 6 ಹೊಲಿಗೆ ಹಾಕಲಾಗಿದೆ. ಬಾಪೂಜಿ ಶಾಲೆ ಎಂಟನೇ ತರಗತಿಯ ಕಾವ್ಯಾಗೆ ಕಾಲಿನೊಳಗೆ ತೂತು ಬಿದ್ದಿದೆ. ಇದೇ ಶಾಲೆಯ ರಾಧಾ, ಹರ್ಷಿತಾ, ಮಾಣಿಕ್ಯಾ, ವರದರಾಜ ಕಾಲೇಜಿನ ರೇಷ್ಮಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಾಪೂಜಿ ಅನಾಥಾಶ್ರಮದ ವಿದ್ಯಾ ಶಬ್ದದಿಂದ ಪ್ರಜ್ಞೆ ಕಳೆದುಕೊಂಡಿದ್ದಳು. ಲಕ್ಷ್ಮಿ ಅರೆಪ್ರಜ್ಞಾವಸ್ಥೆ ತಲುಪಿದ್ದಳು.

ಭವಿಷ್ಯದ ಗತಿಯೇನು?

ಪೊಲೀಸರ ನಿರ್ಲಕ್ಷ್ಯದಿಂದ ಹೀಗಾಗಿದೆ. ಮಗುವಿನ ಹೆಬ್ಬೆರಳು ಸರಿಯಾಗುವುದಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಆಕೆಯ ಭವಿಷ್ಯದ ಗತಿಯೇನು?
– ಬಸವರಾಜ್‌ (ಮೋನಿಕಾಳ ಮಾವ)

ಇದು ಸಣ್ಣ ಘಟನೆ. ಚಿಕಿತ್ಸಾ ವೆಚ್ಚ ಭರಿಸುತ್ತೇವೆ
– ಐಜಿಪಿ ಸೈಯದ್ ಉಲ್ಫತ್ ಹುಸೇನ್

Write A Comment