ಕರ್ನಾಟಕ

ದಿಂಬಂ: ಚಿರತೆಗೆ ಟೆಂಪೊ ಕ್ಲೀನರ್‌ ಬಲಿ

Pinterest LinkedIn Tumblr

Leoperd

ಚಾಮರಾಜನಗರ: ತಮಿಳುನಾಡಿನ ದಿಂಬಂ ಅರಣ್ಯ ಪ್ರದೇಶದ ಬಳಿ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿಯ ಟೆಂಪೊ ಕ್ಲೀನರ್‌ ಚಿರತೆ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ. ಶ್ರೀನಿವಾಸ್‌ (24) ಮೃತಪಟ್ಟವರು.

ಶ್ರೀನಿವಾಸ್‌ ಸಾವಿನೊಂದಿಗೆ ದಿಂಬಂ ಬಳಿ ಚಿರತೆ ದಾಳಿಗೆ ಈ ವರ್ಷ ಬಲಿಯಾದವರ ಸಂಖ್ಯೆ ಮೂರಕ್ಕೇರಿದೆ.

ಬುಧವಾರ ಬೆಳಿಗ್ಗೆ ಚಾಲಕ ರಮೇಶ್‌ ಹಾಗೂ ಶ್ರೀನಿವಾಸ್‌ ಲೊಕ್ಕನ­ಹಳ್ಳಿ­­ಯಿಂದ ಟೆಂಪೊದಲ್ಲಿ ತರಕಾರಿ ತುಂಬಿಕೊಂಡು ಸತ್ಯಮಂಗಲದ ಮಾರು­ಕಟ್ಟೆಗೆ ಹೊರಟಿದ್ದರು. ದಿಂಬಂ ಅರಣ್ಯ ಪ್ರದೇಶದ ಬಳಿ ಟೆಂಪೊ ಕೆಟ್ಟು ಹೋಗಿತ್ತು.  ಸತ್ಯಮಂಗಲದಿಂದ ಮತ್ತೊಂದು ವಾಹನ ತರಿಸಿಕೊಂಡು ತರಕಾರಿಯನ್ನು ತುಂಬಿ ಮಾರುಕಟ್ಟೆಗೆ ಸಾಗಿಸಿದರು. ರಾತ್ರಿಯಾದ  ಕಾರಣ ಚಾಲಕ ಮತ್ತು ಕ್ಲೀನರ್‌ ಟೆಂಪೊದಲ್ಲಿಯೇ ನಿದ್ರೆಗೆ ಜಾರಿದರು.

ಗುರುವಾರ ಬೆಳಿಗ್ಗೆ ಕ್ಲೀನರ್‌ ಶ್ರೀನಿವಾಸ್‌ ಮೂತ್ರ ವಿಸರ್ಜನೆಗಾಗಿ ಟೆಂಪೊದಿಂದ ಕೆಳಗೆ ಇಳಿದು ರಸ್ತೆಬದಿಗೆ ಸಾಗಿದ್ದಾರೆ. ಆ ವೇಳೆ ಚಿರತೆ ದಾಳಿ ನಡೆಸಿದೆ. ಈ ದಾಳಿಯನ್ನು ಕಣ್ಣಾರೆ ಕಂಡ ಚಾಲಕ ರಮೇಶ್‌ ಹಾಸನೂರು ಪೊಲೀಸರು ಮತ್ತು ದಿಂಬಂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೆಳಿಗ್ಗೆ ಸುದ್ದಿ ಮುಟ್ಟಿಸಿದರು.

ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿ­ದ್ದಾರೆ. ಅರಣ್ಯದ ಪೊದೆಯಲ್ಲಿ ಮೃತದೇಹ ಪತ್ತೆಯಾಗಿದೆ. ಶ್ರೀನಿವಾಸ್ ಅವರ  ಕೊರಳ ಭಾಗದಲ್ಲಿ ಕಚ್ಚಿದ ಗಾಯದ ಗುರುತುಗಳಿದ್ದು, ಬಲಗಾಲಿನ ತೊಡೆ ಭಾಗವನ್ನು ಚಿರತೆ ಕಿತ್ತು ತಿಂದಿದೆ. ಹಾಸನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3ನೇ ಬಲಿ: ಇದೇ ವರ್ಷ ಜೂನ್‌ 12ರಂದು ಚಾಮರಾಜನಗರದ ಗಡಿಭಾಗದ ತಮಿಳುನಾಡಿಗೆ ಸೇರಿದ ತಾಳವಾಡಿಯ ಲಾರಿ ಚಾಲಕ ಮಹಮ್ಮದ್‌ ಇಲಿ­ಯಾಸ್‌ ಎಂಬುವವರು ಇದೇ ಪ್ರದೇಶದಲ್ಲಿ ಚಿರತೆಗೆ ಬಲಿಯಾಗಿದ್ದರು.

ಜುಲೈ 21ರಂದು ದಿಂಬಂ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿ­ಸುತ್ತಿದ್ದ ಅರಣ್ಯ ರಕ್ಷಕ ಕೃಷ್ಣನ್‌ ಅವರು ಚಿರತೆ ದಾಳಿಯಿಂದ ಮೃತಪಟ್ಟಿದ್ದರು. ಜುಲೈ 24ರಂದು ಅರಣ್ಯ ಇಲಾಖೆ­ಯಿಂದ ಇಡಲಾಗಿದ್ದ ಬೋನಿನಲ್ಲಿ ಚಿರತೆಯೊಂದು ಸೆರೆಯಾಗಿತ್ತು.

ಈ ಮೂವರು ಬೆಳಿಗ್ಗೆ ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆಯೇ ಚಿರತೆ ದಾಳಿಗೆ ಬಲಿಯಾಗಿದ್ದಾರೆ ಎಂಬುದು ಗಮನಿಸಬೇಕಾದ ಅಂಶ. ಮತ್ತೆ ಚಿರತೆ ದಾಳಿ ಆಗಿರುವುದರಿಂದ ಕರ್ನಾಟಕ ಮತ್ತು ತಮಿಳುನಾಡು ನಡುವೆ ರಾತ್ರಿ ವೇಳೆ ಸಂಚರಿಸುವ ವಾಹನಗಳ ಚಾಲಕರು, ಕ್ಲೀನರುಗಳು ಭಯ­ಗೊಂಡಿದ್ದಾರೆ.

Write A Comment