ಕರ್ನಾಟಕ

ಮೈಸೂರಿಗೆ ಚೀನಾ ತಜ್ಞರ ಭೇಟಿ: ಹೈಸ್ಪೀಡ್ ರೈಲು ಸಂಪರ್ಕ ಸಂಬಂಧ ಅಧ್ಯಯನ

Pinterest LinkedIn Tumblr

pvec28BRY-mys58

ಮೈಸೂರು: ಮೈಸೂರು–ಚೆನ್ನೈ (ಬೆಂಗ­ಳೂರು ಮೂಲಕ) ನಡುವೆ ಹೈ ಸ್ಪೀಡ್ ರೈಲು ಸಂಪರ್ಕ ಕಲ್ಪಿಸುವ ಸಂಬಂಧ ಚೀನಾದ ಎಂಜಿನಿಯರುಗಳ ತಂಡ ಗುರು­ವಾರ ಮೈಸೂರಿನ ನೈರುತ್ಯ ರೈಲ್ವೆ ವಿಭಾ­ಗೀಯ ಕಚೇರಿಗೆ ಭೇಟಿ ನೀಡಿ ಅಧಿ­ಕಾರಿ­ಗಳ ಜತೆ ಸಾಧಕ–ಬಾಧಕಗಳ ಕುರಿತು ಚರ್ಚೆ ನಡೆಸಿತು.

ಚೀನಾ ರೈಲ್ವೆ ಇಯಾನ್‌ ಎಂಜಿನಿ­ಯ­ರಿಂಗ್‌ ಗ್ರೂಪ್‌ ಕಂಪೆನಿ ಲಿಮಿಟೆಡ್‌ನ (ಸಿಆರ್‌­ಇಇಸಿ) ೧೬ ಜನರನ್ನು ಒಳ­ಗೊಂಡ ತಜ್ಞರ ತಂಡ ಸಂಜೆ ಟಿಪ್ಪು ಎಕ್ಸ್‌­ಪ್ರೆಸ್ ರೈಲಿನಲ್ಲಿ ನಗರದ ರೈಲು ನಿಲ್ದಾ­ಣಕ್ಕೆ ಬಂದಿಳಿಯಿತು.

ಬೆಂಗಳೂರು–ಮೈಸೂರು ರೈಲು ಮಾರ್ಗದಲ್ಲಿ ಇರುವ ತಿರುವುಗಳು, ಸಿಗ್ನಲ್‌ ಮತ್ತು ಸೇತುವೆಗಳು ಹೈಸ್ಪೀಡ್‌ ರೈಲಿಗೆ ಮಾರಕವಾ­ಗಲಿವೆಯೇ ಎಂಬುದರ ಕುರಿತು ತಜ್ಞರ ತಂಡ ನೈರುತ್ಯ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿತು.

ತಂಡದ ಜತೆ ಬಂದಿದ್ದ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಎ.ಕೆ. ಅಗರ್‌ವಾಲ್‌ ಸುದ್ದಿಗಾರರೊಂದಿಗೆ ಮಾತನಾಡಿ, ‘ಮೈಸೂರು–ಬೆಂಗಳೂರು ಮಾರ್ಗದಲ್ಲಿ ೨೫೦ ಸೇತುವೆಗಳು ಬರಲಿವೆ. ಅವುಗಳನ್ನು ಮತ್ತಷ್ಟು ಬಲಗೊಳಿಸುವ ಅಗತ್ಯ ಇದೆ. ತಿರುವುಗಳು ಕಡಿಮೆ ಇದ್ದಷ್ಟು ಹೈ ಸ್ಪೀಡ್‌ ರೈಲಿಗೆ ಅನುಕೂಲವಾಗಲಿದೆ ಎಂದು ತಂಡ ಹೇಳಿದೆ’ ಎಂದರು.
‘ಚೀನಾದ ಇದೇ ತಂಡ ದೇಶದಲ್ಲಿ ಸಂಚರಿಸುತ್ತಿರುವ ರೈಲುಗಳ ವೇಗ ಹೆಚ್ಚಿಸುವ ಕುರಿತು ಅಧ್ಯಯನ ನಡೆಸುತ್ತಿದೆ’ ಎಂದು ಅವರು ಹೇಳಿದರು.

‘ಹೈ ಸ್ಪೀಡ್‌ ರೈಲು ಕುರಿತು ಚೀನಾ ತಂಡವು ಅಧ್ಯ­ಯನ ನಡೆಸಿ ಮೂರು ತಿಂಗಳ ಒಳಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ’ ಎಂದು ರೈಲ್‌ ವಿಕಾಸ್‌ ನಿಗಮ್‌ ಲಿಮಿಟೆಡ್‌ನ (ಆರ್‌ವಿ­ಎನ್‌ಎಲ್‌) ಬೆಂಗಳೂರಿನ ಯೋಜನಾ ಮುಖ್ಯ ವ್ಯವಸ್ಥಾಪಕ ಅಲೋಕ್‌ ತಿವಾರಿ ತಿಳಿಸಿದರು. ‘ಚೀನಾ ತಂಡವು ಶುಕ್ರವಾರ ರೈಲ್ವೆ ಅಧಿ­ ಕಾರಿ­ಗ­ಳೊಂದಿಗೆ ಸಭೆ ನಡೆಸಿದ ಬಳಿಕ ಬಸವ ಎಕ್ಸ್‌­ಪ್ರೆಸ್‌­­ನಲ್ಲಿ ಬೆಂಗಳೂರಿಗೆ ವಾಪಸಾಗುವ ಸಾಧ್ಯತೆ ಇದೆ’ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜಕುಮಾರ್‌ ಲಾಲ್‌ ತಿಳಿಸಿದರು.

Write A Comment