ರಾಮನಗರ: ಬಿಡದಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಯ (36) ದೈಹಿಕ ಬೆಳವಣಿಗೆ ವಯಸ್ಸಿಗೆ ತಕ್ಕಂತೆ ನಡೆದಿದೆ. ಅವರು ಪುರುಷ ಸಹಜ ಲಕ್ಷಣಗಳನ್ನು ಹೊಂದಿದ್ದಾರೆ ಎಂಬ ಸಂಗತಿಗಳನ್ನು ಒಳಗೊಂಡ ವೈದ್ಯಕೀಯ ವರದಿಯನ್ನು ಸಿಐಡಿ ಪೊಲೀಸರು ಬುಧವಾರ ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯಕ್ಕೆ ಸಲ್ಲಿಸಿದರು.
ಭಕ್ತೆ ಆರತಿರಾವ್ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿತ್ಯಾನಂದ ಸ್ವಾಮೀಜಿ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಐಡಿ ಪೊಲೀಸರು, ಬುಧವಾರ ಹೆಚ್ಚುವರಿ ದೋಷಾರೋಪ ಪಟ್ಟಿ ಹಾಗೂ 31 ಪುಟಗಳ ವೈದ್ಯಕೀಯ ವರದಿಯನ್ನು ಸಲ್ಲಿಸಿದರು.
‘ನಿತ್ಯಾನಂದ ಸ್ವಾಮೀಜಿಗೆ ಸೆ.8ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾಗಿದ್ದ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, ರೋಮ ಪರೀಕ್ಷೆ, ರಕ್ತನಾಳದಲ್ಲಿನ ರಕ್ತ ಸಂಚಾರ ತೀವ್ರತೆಯ ಪರೀಕ್ಷೆಯ ವರದಿಗಳು ಅದರಲ್ಲಿ ಅಡಕವಾಗಿವೆ’ ಎಂದು ಸಿಐಡಿ ಪೊಲೀಸರು ಮಾಹಿತಿ ನೀಡಿದರು. ಬೆಳಿಗ್ಗೆ ನ್ಯಾಯಾಲಯದ ಮುಂದೆ ಹಾಜರಾಗಿದ್ದ ನಿತ್ಯಾನಂದ ಪರ ವಕೀಲರು ಸ್ವಾಮೀಜಿ ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ಬಗ್ಗೆ ಅರ್ಜಿ ಸಲ್ಲಿಸಿದರು. ನ್ಯಾಯಾಧೀಶರಾದ ಮಂಜುಳಾ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
20 ನಿಮಿಷ ಪರಿಶೀಲನೆ: ಸಿಐಡಿ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ವೈದ್ಯಕೀಯ ವರದಿಯನ್ನು ವಕೀಲರ ಮೂಲಕ ಪಡೆದ ನಿತ್ಯಾನಂದ ಸ್ವಾಮೀಜಿ ಭಕ್ತರ ಸಮ್ಮುಖದಲ್ಲಿಯೇ ಸುಮಾರು 20 ನಿಮಿಷ ಪ್ರತಿ ಪುಟಗಳನ್ನು ತಿರುವಿ ಪರಿಶೀಲಿಸಿದರು.
ಡಿ. 3ಕ್ಕೆ ಮುಂದೂಡಿಕೆ: ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಆರಂಭವಾದಾಗ ಸ್ವಾಮೀಜಿ ಪರ ವಾದಿಸಲು ಹಿರಿಯ ವಕೀಲರಾದ ಸಿ.ವಿ.ನಾಗೇಶ್ವರ್, ಪ್ರಮಿಳಾ ನೇಸರ್ಗಿ, ರವಿ ನಾಯಕ್ ಬಂದಿದ್ದರು. ಸಿ.ವಿ. ನಾಗೇಶ್ವರ್ ಅವರು ಒಂದು ಗಂಟೆಗೂ ಹೆಚ್ಚು ಕಾಲ ವಾದ ಮಂಡಿಸಿದರು. ಬಳಿಕ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಡಿ. 3 ಮತ್ತು ಜ. 12ಕ್ಕೆ ನಿಗದಿಪಡಿಸಿದರು.
ಜ. 12ರಂದು ನಡೆಯುವ ವಿಚಾರಣೆಗೆ ನಿತ್ಯಾನಂದ ಸ್ವಾಮೀಜಿ ಹಾಜರಿರಬೇಕು ಎಂದು ನ್ಯಾಯಾಧೀಶರು ಸೂಚಿಸಿದರು. ಮಾಧ್ಯಮ ಪ್ರತಿನಿಧಿಗಳಿಗೆ ನ್ಯಾಯಾಲಯ ಪ್ರವೇಶವನ್ನು ನಿಷೇಧಿಸಲಾಗಿತ್ತು.
ಕಡಿಮೆ ‘ಟೆಸ್ಟೋಸ್ಟಿರಾನ್’
ವೈದ್ಯಕೀಯ ವರದಿ ಕುರಿತು ಪ್ರಕಟಣೆ ಮೂಲಕ ಹೇಳಿಕೆ ನೀಡಿರುವ ಬಿಡದಿ ಧ್ಯಾನಪೀಠ ಆಶ್ರಮವು, ನಿತ್ಯಾನಂದ ಸ್ವಾಮೀಜಿ ಅವರ ದೇಹದಲ್ಲಿ ಅತಿ ಕಡಿಮೆ ‘ಟೆಸ್ಟೋಸ್ಟಿರಾನ್’ ಪುರುಷ ಹಾರ್ಮೋನ್ ಪತ್ತೆಯಾಗಿದೆ ಎಂಬುದು ಸಿಐಡಿ ಪೊಲೀಸರು ಸಲ್ಲಿಸಿರುವ ವೈದ್ಯಕೀಯ ವರದಿಯಲ್ಲಿದೆ ಎಂದು ಹೇಳಿದೆ.
ಸಾಮಾನ್ಯವಾಗಿ 31ರಿಂದ 49 ವಯಸ್ಸಿನ ಪುರುಷರಲ್ಲಿ 249 ಎಂ.ಜಿ/ಡಿಎಲ್ ‘ಟೆಸ್ಟೋಸ್ಟಿರಾನ್’ ಪುರುಷ ಹಾರ್ಮೋನ್ ಇರಬೇಕು. ಆದರೆ, ಸ್ವಾಮೀಜಿ ದೇಹದಲ್ಲಿ ಇದು ಕೇವಲ 12.50 ಎಂ.ಜಿ/ಡಿಎಲ್ ಇದೆ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ. ಅಂದರೆ ಶೇಕಡ 5ರಷ್ಟು ‘ಟೆಸ್ಟೋಸ್ಟಿರಾನ್’ ಪುರುಷ ಹಾರ್ಮೋನ್ ಇಲ್ಲದ ಸ್ವಾಮೀಜಿಯನ್ನು ಪುರುಷ ಎನ್ನಲು ಹೇಗೆ ಸಾಧ್ಯ ಎಂದು ತಿಳಿಸಿದೆ. ಆದಾಗ್ಯೂ ನಿತ್ಯಾನಂದ ಸ್ವಾಮೀಜಿ ಅವರು ಲೈಂಗಿಕ ಕ್ರಿಯೆ ನಡೆಸಲು ಸಮರ್ಥ ಎಂಬುದನ್ನು ವೈದ್ಯಕೀಯ ವರದಿಯಲ್ಲಿ ಎಲ್ಲಿಯೂ ವೈದ್ಯರು ಪ್ರಸ್ತಾಪಿಸಿಲ್ಲ ಎಂದು ಪ್ರಕಟಣೆ ತಿಳಿಸಿದೆ.