ಕರ್ನಾಟಕ

ಟಿವಿ 9 ಪ್ರಸಾರ ಸ್ಥಗಿತ: ಸರ್ಕಾರದ ಪಾತ್ರ ಇಲ್ಲ ಎಂದ್ರು ಸಿಎಂ

Pinterest LinkedIn Tumblr

siddu

ಬೆಂಗಳೂರು: ನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಟಿವಿ 9 ಹಾಗೂ ನ್ಯೂಸ್ 9 ಸುದ್ದಿ ವಾಹಿನಿಗಳ ಪ್ರಸಾರ ಸ್ಥಗಿತಗೊಳಿಸುವುದರಲ್ಲಿ ಸರ್ಕಾರದ ಪಾತ್ರ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಮ್ಮ ಸರ್ಕಾರ ಮಾಧ್ಯಮಗಳ ವಿರೋಧಿಯಲ್ಲ. ಟಿವಿ 9 ಪ್ರಸಾರ ಸ್ಥಗಿತಗೊಳಿಸಿರುವುದರಲ್ಲಿ ಸರ್ಕಾರದ ಅಥವಾ ಸಚಿವರ ಕೈವಾಡ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಕೇಬಲ್ ಆಪರೇಟರ್ಸ್ ಹಾಗೂ ಮಾಧ್ಯಮ ಸಂಸ್ಥೆ ಮುಖ್ಯಸ್ಥರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಕೇಬಲ್ ಆಪರೇಟರ್‌ಗಳ ನಡುವೆ ಸಭೆ ನಡೆದಿತ್ತು. ಈ ವೇಳೆ ಎರಡೂ ಸುದ್ದಿವಾಹಿನಿಗಳ ಕೇಬಲ್ ಮೂಲಕ ಪ್ರಸಾರವನ್ನು ಸ್ಧಗಿತಗೊಳಿಸುವಂತೆ ಆದೇಶಿಸಿದ್ದರು. ಇಲ್ಲವಾದರೆ ಕೇಬಲ್ ಸಂಸ್ಥೆಗಳ ಮೇಲೆ ಭಾರಿ ತೆರಿಗೆ ಹಾಗೂ ದಂಡ ವಿಧಿಸುವುದಾಗಿ ಸಚಿವರು ಹೇಳಿದ್ದರೆಂದು ಚಾನೆಲ್ ಆರೋಪಿಸಿದೆ. ಆದರೆ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಡಿಕೆಶಿ, ಸುದ್ದಿ ವಾಹಿನಿ ಸ್ಥಗಿತಕ್ಕೆ ನಾನಾಗಲಿ, ನಮ್ಮ ಸರ್ಕಾರವಾಗಲಿ ಕಾರಣವಲ್ಲ ಎಂದಿದ್ದಾರೆ.

ಟಿವಿ 9 ಪ್ರಸಾರ ಸ್ಥಗಿತಗೊಳಿಸುವಂತೆ ನಾನು ಆದೇಶಿಸಿಲ್ಲ. ನಾನು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇರಿಸಿಕೊಂಡವನು. ಮಾಧ್ಯಮ ಸ್ವಾತಂತ್ರ್ಯ ಕಾಪಾಡಲು ನಾನು ಬದ್ಧ. ವೈಯಕ್ತಿಕ ದ್ವೇಷದಿಂದ ಸತತವಾಗಿ ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಿ ನನ್ನ ತೇಜೋವಧೆ ಮಾಡಿದ್ದಾರೆ. ನಾನು ಈ ಬಗ್ಗೆ ನಾನು ನ್ಯಾಯಾಲಯಕ್ಕೆ ಹೋಗಲು ಸಿದ್ಧ ಎಂದು ಡಿಕೆ ಶಿವಕುಮಾರ್ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

Write A Comment