ಕರ್ನಾಟಕ

ಪೊಲೀಸ್ ಎಂದು ಹೇಳಿಕೊಂಡು ಸುಲಿಗೆ ಮಾಡುತ್ತಿದ್ದ ಖತರ್‌ನಾಕ್ ಕಳ್ಳಿ ಪೊಲೀಸರ ಬಲೆಗೆ

Pinterest LinkedIn Tumblr

Kalli-kalli

ಬೆಂಗಳೂರು, ನ.22: ತಾನು ಮಫ್ತಿಯಲ್ಲಿರುವ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ನಿಮ್ಮ ಮೇಲೆ ಗುಮಾನಿ ಇದೆ ಠಾಣೆಗೆ ಬನ್ನಿ ಎಂದು ತನ್ನ ದ್ವಿಚಕ್ರ ವಾಹನದಲ್ಲಿ ವಯಸ್ಸಾದ ಪುರುಷರನ್ನು ಕರೆದೊಯ್ದು ಮಾರ್ಗಮಧ್ಯೆ ಬೆದರಿಸಿ ಚಿನ್ನಾಭರಣಗಳನ್ನು ಕಸಿಯುತ್ತಿದ್ದ ಸರಗಳ್ಳಿಯನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಆಶಾ ಅಲಿಯಾಸ್ ಸೌಂದರ್ಯ (36) ಬಂಧಿತ ಸರಗಳ್ಳಿಯಾಗಿದ್ದು, ಈಕೆಯಿಂದ 10 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ಕಾರು, ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಕೆ ಚೆನ್ನಮ್ಮನಕೆರೆ ಅಚ್ಚುಕಟ್ಟು, ಜಯನಗರ, ಮಾಗಡಿರಸ್ತೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸರಗಳ್ಳಿ ಆಶಾ ಬೆಳಗಿನ ಸಮಯದಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಪುರುಷರನ್ನು ಗುರಿಯಾಗಿಟ್ಟುಕೊಂಡು ತಾನು ಮಫ್ತಿಯಲ್ಲಿರುವ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ನಿಮ್ಮ ಮೇಲೆ ಗುಮಾನಿ ಇದ್ದು ಠಾಣೆಗೆ ಬನ್ನಿ ಎಂದು ತನ್ನ ವಾಹನದಲ್ಲೇ ಕರೆದೊಯ್ದು ಸ್ವಲ್ಪ ಹೋದ ಬಳಿಕ ನೀನು ಹೆಂಗಸರನ್ನು ಚುಡಾಯಿಸುತ್ತೀಯ ಎಂದು ಬೆದರಿಸಿ ಅವರ ಬಳಿ ಇದ್ದ ಆಭರಣಗಳನ್ನು ಕಸಿದುಕೊಳ್ಳುತ್ತಿದ್ದಳು.

ಅಲ್ಲದೆ ರಸ್ತೆ ಬದಿಯಲ್ಲಿ ನಿಂತು ವಾಹನಗಳಲ್ಲಿ ಡ್ರಾಪ್ ಕೇಳಿ ವಾಹನ ಹತ್ತಿದ ಬಳಿಕ ವಾಹನಸವಾರರನ್ನು ನೀನು ನನ್ನನ್ನು ಮಾನಭಂಗ ಮಾಡಲು ಪ್ರಯತ್ನಿಸಿದ್ದೀಯಾ, ನಿನ್ನ ವಿರುದ್ಧ ದೂರು ನೀಡುತ್ತೇನೆ ಎಂದು ಬೆದರಿಸಿ ಅವರ ಬಳಿ ಇದ್ದ ಹಣ ಹಾಗೂ ಚಿನ್ನದ ಒಡವೆಗಳನ್ನು ದೋಚುವುದು ಈಕೆಯ ಪ್ರವೃತ್ತಿಯಾಗಿರುತ್ತದೆ. ಈಕೆಯನ್ನು ಪತ್ತೆ ಮಾಡಲು ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಲೋಕೇಶ್ ಕುಮಾರ್, ಬನಶಂಕರಿ ಉಪವಿಭಾಗದ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಮಾಲತೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ತೀವ್ರ ಕಾರ್ಯಾಚರಣೆ ನಡೆಸಿ ಆಕೆಯನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ತಂಡದ ಪತ್ತೆ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.

Write A Comment