ಕರ್ನಾಟಕ

ಕಿಸ್ಸಿಂಗ್ ಡೇ ಎಲ್ಲೆ ಮೀರಿದರೆ ಕ್ರಮ: ಸಿಎಂ ಸಿದ್ದರಾಮಯ್ಯ

Pinterest LinkedIn Tumblr

Siddu Congress Karnataka_0_0_0

ಬೆಂಗಳೂರು, ನ.೧೯-ನಗರದಲ್ಲಿ ಆಚರಣೆ ಮಾಡಲು ಉದ್ದೇಶಿಸಿರುವ ಕಿಸ್ಸಿಂಗ್ ಡೇ ಕಾನೂನು ವ್ಯಾಪ್ತಿ ಮೀರಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಾನೂನಿನ ವ್ಯಾಪ್ತಿಯಲ್ಲಿ ಕಿಸ್ಸಿಂಗ್ ಡೇ ಆಚರಿಸಿಕೊಂಡರೆ ಯಾವುದೇ ಅಭ್ಯಂತರವಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ನಡೆಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಆಚರಣೆ ವೇಳೆ ಯಾರೊಬ್ಬರೂ ಅಶ್ಲೀಲ ಹಾಗೂ ಅಸಭ್ಯವಾಗಿ ವರ್ತಿಸಬಾರದು. ಸಾರ್ವಜನಿಕರಿಗೆ ತೊಂದರೆ ಕೊಡುವ ರೀತಿಯಲ್ಲಿ ನಡೆದುಕೊಂಡರೆ ಪೊಲೀಸರು ಕ್ರಮ ಜರುಗಿಸಲಿದ್ದಾರೆ. ಕಿಸ್ಸಿಂಗ್ ಡೇ ಆಚರಣೆ ಮಾಡಲು ನಗರ ಪೊಲೀಸ್ ಆಯುಕ್ತರು ಕಾನೂನಿನ ವ್ಯಾಪ್ತಿಯಡಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಕಿಸಿಂಗ್ ಡೇ ವಿವಾದ : ಶೋಭಾ ಟೀಕೆ

ಬೆಂಗಳೂರು, ನ.19- ಕಿಸ್ಸಿಂಗ್ ದಿನಾಚರಣೆಯಂತಹ ಆಚರಣೆಗಳು ಯುವ ಸಮುದಾಯವನ್ನು ತಪ್ಪು ದಾರಿಗೆ ಎಳೆಯುವಂತಾಗಿದೆ. ಅದಕ್ಕೆ ಅವಕಾಶ ಕೊಡಬಾರದೆಂದು ಶೋಭಾ ಕರಂದ್ಲಾಜೆ ಇಂದಿಲ್ಲಿ ಆಗ್ರಹಿಸಿದರು.

ಬಿಜೆಪಿ ಕಚೇರಿಯಲ್ಲಿ ಯುವಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುವಂತಹ ಕಿಸ್ಸಿಂಗ್ ಡೇಗೆ ಅವಕಾಶ ಕೊಡಬಾರದು ಎಂದು ಪ್ರಜ್ಞಾವಂತರು ವಿರೋಧಿಸುತ್ತಿದ್ದಾರೆ. ಮಲಗುವ ಕೋಣೆಯಲ್ಲಿ ನಡೆಯುವಂತಹ ಚಟುವಟಿಕೆಗಳನ್ನು ಬೀದಿಯಲ್ಲಿ ಮಾಡುವುದು ಸರಿಯಲ್ಲ. ಆರ್‌ಎಸ್‌ಎಸ್ ಮತ್ತು ಬಿಜೆಪಿ ನೈತಿಕ ಪೊಲೀಸ್ ಗಿರಿಯನ್ನು ಬೆಂಬಲಿಸುವುದಿಲ್ಲ , ಖಂಡಿಸುತ್ತದೆ ಎಂದು ಅವರು ಹೇಳಿದರು. ಚಹಾ ಮಾರಿದ ನರೇಂದ್ರಮೋದಿಯವರು ಪ್ರಧಾನಿಯಾದರು. ನಂತರ ಮಂಡ್ಯದಲ್ಲಿ ನಿಂಬೆಹಣ್ಣು ಮಾರಿದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಇದು ಬಿಜೆಪಿಯಲ್ಲಿ ಸಾಧ್ಯ ಎಂದು ಬಣ್ಣಿಸಿದರು.

ಹೈದ್ರಾಬಾದ್ ಕರ್ನಾಟಕ ಭಾಗದಿಂದ ಗೊರಟ ಕಾಲದಲ್ಲಿ ನಿಜಾಮರ ದಾಳಿ ನಡೆದಾಗ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ತಾಯಿ ಮತ್ತು ತಂಗಿ ಮೃತಪಟ್ಟಿದ್ದರು. ಈ ವಿಚಾರವನ್ನು ಖರ್ಗೆಯವರು ತಮಗೆ ತಿಳಿಸಿದರು. ಬಿಜೆಪಿ ಯುವಮೋರ್ಚಾ ಗೊರಟ ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಾಗ ರಾಜಕೀಯ ಕಾರಣದಿಂದಾಗಿ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಎಂದು ಹೇಳಿದರು. ಕಪ್ಪು ಬಾವುಟ ಪ್ರದರ್ಶನ: ರಾಜ್ಯಸರ್ಕಾರದ ವೈಫಲ್ಯದ ವಿರುದ್ಧ ನ.೨೪ರಿಂದ ವಿವಿಧ ಸ್ವರೂಪದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಮುನಿರಾಜು ತಿಳಿಸಿದರು.

ವಿವಿಧ ಆರೋಪಗಳನ್ನು ಎದುರಿಸುತ್ತಿರುವ ಸಚಿವರಾದ ದಿನೇಶ್ ಗುಂಡೂರಾವ್, ಖಮರುಲ್ಲಾ ಇಸ್ಲಂ, ಎಚ್.ಎಸ್.ಮಹದೇವ ಪ್ರಸಾದ್, ಕೆ.ಜೆ.ಜಾರ್ಜ್ ಅವರು ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಅವರು ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಯುವಮೋರ್ಚಾ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಇದು ಆ ಸಚಿವರು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವವರೆಗೆ ಮುಂದುವರಿಯಲಿದೆ ಎಂದು ಹೇಳಿದರು.

Write A Comment