ಕಲಬುರ್ಗಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಜಿಲ್ಲೆಯ ಚಿತ್ತಾಪುರ ಪಟ್ಟಣದ ಕಂಬಳೇಶ್ವರ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಪಕ್ಕದ ಜಿಲ್ಲೆಗೆ ಇವರು ಪಲಾಯನ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಚಿತ್ತಾಪುರ ಹೊರವಲಯ ಬಳಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಐಪಿಸಿ 376 (ಅತ್ಯಾಚಾರ) ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ–2012 (ಪೋಕ್ಸೊ)ರ ಅಡಿ ನ. 29ರ ವರೆಗೆ ಸೋಮಶೇಖರ ಸ್ವಾಮೀಜಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
ನ್ಯಾಯಾಲಯಕ್ಕೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ‘ವೈದ್ಯಕೀಯ ವರದಿ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ. ಆ ಬಳಿಕವೂ ನಾನು ಕಂಬಳೇಶ್ವರ ಮಠದ ಪೀಠಾಧಿಪತಿಯಾಗಿ ಮುಂದುವರಿಯುತ್ತೇನೆ.
ನನ್ನ ವಿರುದ್ಧ ದೂರು ನೀಡಿರುವವರು ನನ್ನ ವಿರೋಧಿಗಳಲ್ಲ. ಆದರೆ, ಈಗ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ. ಬಾಲಕಿಯ ಪೋಷಕರು ಇದುವರೆಗೂ ದೂರು ನೀಡಿಲ್ಲ. ಶೀಘ್ರದಲ್ಲೇ ಸತ್ಯಾಂಶ ಬಹಿರಂಗವಾಗಲಿದೆ’ ಎಂದು ಹೇಳಿದರು. ‘ಬಾಲಕಿಯ ಪೋಷಕರಿಗೆ ನಾಲ್ಕು ಎಕರೆ ಜಮೀನು, ₨ 2 ಲಕ್ಷ ಆಮಿಷವೊಡ್ಡಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸ್ವಾಮೀಜಿ, ‘ಮಠದ ದಾಸೋಹ ಮನೆಯ ಗೋಡೆ ಕುಸಿದು ಬಿದ್ದಿದ್ದು, ಅದನ್ನು ಕಟ್ಟಿಸಲು ನನ್ನ ಬಳಿ ಹಣವಿಲ್ಲ. ಹೀಗಿರುವಾಗ ಇಷ್ಟೊಂದು ಹಣ ಹೇಗೆ ಕೊಡಲು ಸಾಧ್ಯ?’ ಎಂದು ಕೇಳಿದರು.
ಏನಾಗಿತ್ತು?: ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆದ್ದರಿಂದ ಅವರನ್ನು ಕೂಡಲೇ ಬಂಧಿಸಬೇಕು ಎಂದು ಪಟ್ಟಣದ ಪ್ರಮುಖರು ನ.15ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಭಾನುವಾರ (ನ. 16) ಪ್ರತಿಭಟನೆ ನಡೆಸಿದ್ದರು.

1 Comment
manya mutalik aware evarnnu enu madabeku , neve helei,