ಕರ್ನಾಟಕ

ರಾಘವೇಶ್ವರ ಶ್ರೀಗಳಿಗೆ ನಿರೀಕ್ಷಣಾ ಜಾಮೀನು ಮೇಲ್ಮನವಿ ಅರ್ಜಿ ವಿಚಾರಣೆಗೆ ಹೈಕೋರ್ಟ್ ನಕಾರ

Pinterest LinkedIn Tumblr

raghave

ಬೆಂಗಳೂರು, ಅ. 15: ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳಿಗೆ ನಗರ ಸಿವಿಲ್ ನ್ಯಾಯಾಲಯ ಮಂಜೂರು ಮಾಡಿದ ನಿರೀಕ್ಷಣಾ ಜಾಮೀನು ರದ್ದುಗೊಳಿಸಬೇಕೆಂದು ಕೋರಿ ಸರಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಸರಕಾರ ಹಿಂಪಡೆದು ಕೊಂಡಿದೆ.

ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ನ್ಯಾಯಪೀಠ, ಅಧೀನ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ವಿವೇಚನೆಯ ಮೇರೆಗೆ ಜಾಮೀನು ಮಂಜೂರು ಮಾಡಿದ್ದು, ಅವರ ವಿವೇಚನೆಯನ್ನು ಪ್ರಶ್ನೆ ಮಾಡುವುದಕ್ಕೆ ಹೈಕೋರ್ಟ್‌ಗೆ ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ಅಲ್ಲದೆ, ಅಧೀನ ನ್ಯಾಯಾಲಯ ನೀಡಿರುವ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಅದೇ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ದಾಖಲಿಸಬಹುದು ಎಂದು ಹಲವು ಪ್ರಕರಣಗಳ ಆದೇಶದಲ್ಲಿ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಧೀನ ನ್ಯಾಯಾಲಯದಲ್ಲಿಯೇ ಪ್ರಶ್ನಿಸಿ ಎಂದು ನ್ಯಾಯಪೀಠ ಸೂಚಿಸಿ ಅರ್ಜಿ ಇತ್ಯರ್ಥಗೊಳಿಸಿತು.

ಈ ವೇಳೆ ಹೆಚ್ಚುವರಿ ಅಡೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ಅರ್ಜಿಯ ವಿಚಾರಣೆಯನ್ನು 10 ದಿನಗಳಲ್ಲಿ ಪೂರ್ಣಗೊಳಿಸಿ ಇತ್ಯರ್ಥ ಮಾಡುವಂತೆ ಅಧೀನ ನ್ಯಾಯಾಲಯಕ್ಕೆ ಆದೇಶಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ನ್ಯಾಯಮೂರ್ತಿಗಳು ನಾನು ಸಹ ಅಧೀನ ನ್ಯಾಯಾಲಯದಿಂದ ಬಂದಿರುವವನೆ. ನ್ಯಾಯಾಲಯದಲ್ಲಿ ಎಷ್ಟು ಪ್ರಕರಣಗಳು ಬಾಕಿಯಾಗಿ ಉಳಿದಿವೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದುದರಿಂದ ಇಷ್ಟೇ ದಿನಗಳಲ್ಲಿ ಇತ್ಯರ್ಥ ಮಾಡಿ ಎಂದು ಸೂಚಿಸಲು ಸಾಧ್ಯವಿಲ್ಲ ಎಂದು ತಿಳಿಸಿ, ಆದಷ್ಟು ಬೇಗ ಇತ್ಯರ್ಥ ಮಾಡುವಂತೆ ಅಧೀನ ನ್ಯಾಯಾಲಯಕ್ಕೆ ಸೂಚಿಸಿದರು.

ರಾಮಚಂದ್ರಾಪುರ ಮಠದಲ್ಲಿನ ರಾಮಕಥಾ ಕಲಾವಿದೆ ಪ್ರೇಮಲತಾ ಶಾಸ್ತ್ರೀ ಅವರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧನದ ಭೀತಿಯಲ್ಲಿದ್ದ ರಾಘವೇಶ್ವರ ಶ್ರೀಗಳು ನಗರ ಸಿವಿಲ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಅಧೀನ ನ್ಯಾಯಾಲಯ ಶ್ರೀಗಳ ಜಾಮೀನು ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ನೋಟಿಸ್ ನೀಡಿ ಆಕ್ಷೇಪಣೆ ಪಡೆದಿಲ್ಲ. ಜಾಮೀನು ಮಂಜೂರು ಮಾಡುವ ಬಗ್ಗೆ ಸರಕಾರದ ವಾದ ಆಲಿಸಿಲ್ಲ. ಸ್ವಾಮೀಜಿ ವಿರುದ್ಧ ಅತ್ಯಾಚಾರದಂತಹ ಗಂಭೀರ ಆರೋಪವಿದೆ. ಇಂತಹ ಸಂದರ್ಭದಲ್ಲಿ ಶ್ರೀಗಳಿಗೆ ನಿರೀಕ್ಷಣಾ ಜಾಮೀನು ನೀಡಿರುವ ಅಧೀನ ನ್ಯಾಯಾಲಯದ ಕ್ರಮ ನ್ಯಾಯಸಮ್ಮತವಾಗಿಲ್ಲ. ಆದುದರಿಂದಾಗಿ ಜಾಮೀನು ರದ್ದು ಮಾಡಬೇಕು ಎಂದು ಸರಕಾರ ತನ್ನ ಅರ್ಜಿಯಲ್ಲಿ ಕೋರಿತ್ತು.

Write A Comment