ಕರ್ನಾಟಕ

ಮಣಿಪುರ ಮೂಲದ ವಿದ್ಯಾರ್ಥಿಯ ಮೇಲೆ ಹಲ್ಲೆ; ಮೂವರು ಆರೋಪಿಗಳ ದಸ್ತಗಿರಿ

Pinterest LinkedIn Tumblr

manipuri2

ಬೆಂಗಳೂರು, ಅ. 15: ಕ್ಷುಲ್ಲಕ ಕಾರಣಕ್ಕೆ ಮದ್ಯದ ಅಮಲಿನಲ್ಲಿದ್ದ ಮೂರು ಮಂದಿ ಯುವಕರು ಮಣಿಪುರ ಮೂಲದ ಯುವಕನೊಬ್ಬನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ ಘಟನೆ ಇಲ್ಲಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಭೈರತಿ ಕ್ರಾಸ್‌ನಲ್ಲಿ ಬುಧವಾರ ನಡೆದಿದೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಮಣಿಪುರ ಮೂಲದ ವಿದ್ಯಾರ್ಥಿ ಮೈಕಲ್ ಎಂಬವರು ನಗರ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಅರುಣ್ ಕುಮಾರ್, ಕರುಣಾಕರ ಹಾಗೂ ಜೇಮ್ಸ್ ಎಂಬವನನ್ನು ಬಂಧಿಸಿದ್ದಾರೆ.

ಮದ್ಯದ ಅಮಲಿನಲ್ಲಿದ್ದ ಮೂವರು ಆರೋಪಿಗಳು ಹಾಗೂ ಹಲ್ಲೆಗೊಳಗಾದ ಮಣಿಪುರ ಮೂಲದ ಮೈಕಲ್ ನಿನ್ನೆ ರಾತ್ರಿ 9: 30ರ ಸುಮಾರಿಗೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಭೈರತಿ ಕ್ರಾಸ್‌ನಲಿನ ಪಾದಚಾರಿ ರಸ್ತೆಯಲ್ಲಿ ವಿಶ್ವನಾಥ್ ಎಂಬವರ ಹೊಟೇಲ್‌ಗೆ ಊಟಕ್ಕೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮೈಕಲ್ ಹಿಂದಿಯಲ್ಲಿ ಜೋರಾಗಿ ಮಾತನಾಡುತ್ತಿದ್ದ. ಇದಕ್ಕೆ ಆರೋಪಿಗಳ ಆಕ್ಷೇಪಿಸಿದ್ದು ಕನ್ನಡದಲ್ಲಿ ಮಾತನಾಡುವಂತೆ ತಾಕೀತು ಮಾಡಿದ್ದಾರೆ. ಹೀಗಾಗಿ ಆರೋಪಿಗಳು ಹಾಗೂ ಮೈಕಲ್ ಮಧ್ಯೆ ಜಗಳವಾಗಿದ್ದು, ಒಂದು ಹಂತದಲ್ಲಿ ಮೂವರು ಆರೋಪಿಗಳು ಮೈಕಲ್ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ.

ಇದರಿಂದ ಮೈಕಲ್ ಮುಖ, ಎದೆ, ಕೈ-ಕಾಲು ಸಂಪೂರ್ಣ ರಕ್ತಗಾಯಗಳಾಗಿದ್ದು, ಆತ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಆತನೊಂದಿಗಿದ್ದ ಸ್ನೇಹಿತರು ಮೈಕಲ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆ ಬಳಿಕ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಮೂರು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣ ಸಂಬಂಧ ಬೆಂಗಳೂರು ಹೊರ ವಲಯದ ಕೊತ್ತನೂರು ಠಾಣಾ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Write A Comment