ಕರ್ನಾಟಕ

ಇಂಡಿಯನ್ ಕಬ್ಬಡಿ ತಂಡದ ಭವಿಷ್ಯದ ತಾರೆಯಾಗಿ ಮಿಂಚುತ್ತಿರುವ ರಿಶಾಂಕ್ ದೇವಾಡಿಗ; ಹೆಚ್ಚುತ್ತಿದೆ ಅಭಿಮಾನಿ ಬಳಗ

Pinterest LinkedIn Tumblr

IMG-20141002-WA0004

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ

ದುಬೈ: ಇಂಡಿಯನ್ ಕಬ್ಬಡಿ ತಂಡದ ಭವಿಷ್ಯದ ತಾರೆ ಎಂದೆ ಬಿಂಬಿತರಾಗುತ್ತಿರುವ ರಿಶಾಂಕ್ ದೇವಾಡಿಗ, ಕಬ್ಬಡಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಮೂಲಕ ಕಬ್ಬಡಿಯಲ್ಲಿ ದೇಶದ ಕೀರ್ತಿಪತಾಕೆಯನ್ನು ಹಾರಿಸುವ ಹುಮ್ಮಸ್ಸಿನಲ್ಲಿದ್ದು, ದಿನನಿತ್ಯ ಕಠಿಣ ಶ್ರಮಪಡುತ್ತಿದ್ದಾರೆ. ಇತ್ತೀಚೆಗೆ ಮುಂಬೈಯಲ್ಲಿ ನಡೆದ ಪ್ರೊ ಕಬ್ಬಡಿ ಲೀಗ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರೊಂದಿಗೆ ಎಲ್ಲರ ಮನೆ ಮಾತಾಗಿದ್ದು, ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಕಂಡು ಇನ್ನಷ್ಟು ಪುಳಕಿತರಾಗಿದ್ದಾರೆ.

ಪ್ರಸಕ್ತ ಭಾರತ್ ಪೆಟ್ರೋಲಿಯಂ ಸಂಸ್ಥೆಯಲ್ಲಿ ಕ್ರೀಡಾಪಟುವಾಗಿರುವ 22 ಹರೆಯದ ರಿಶಾಂಕ್ ದೇವಾಡಿಗ, ಭಾರತ ತಂಡವನ್ನು ಪ್ರತಿನಿಧಿಸಲು ತುದಿಗಾಲಲ್ಲಿ ನಿಂತಿದ್ದು, ಪ್ರೊ ಕಬ್ಬಡಿ ಲೀಗ್‌ನ ಪಂದ್ಯಾಟದಲ್ಲಿ ಅವರು ತೋರಿದ ಅತ್ಯುತ್ತಮವಾದ ಪ್ರದರ್ಶನವನ್ನು ಕಂಡು ಜನ ನಿಬ್ಬೆರಗಾಗಿದ್ದು, ಇನ್ನಷ್ಟು ಸಾಧನೆಯನ್ನು ಮಾಡುವ ತವಕದಲ್ಲಿದ್ದಾರೆ.

IMG-20141002-WA0003

IMG-20141002-WA0038

IMG-20141002-WA0037

IMG-20141002-WA0036

ಕೆಲದಿನಗಳ ಹಿಂದೆ ಮುಂಬೈ ಕಬ್ಬಡಿ ತಂಡದವರೊಂದಿಗೆ ದುಬೈ ಪ್ರವಾಸದಲ್ಲಿದ್ದ ರಿಶಾಂಕ್ ದೇವಾಡಿಗ ‘ಕನ್ನಡಿಗ ವರ್ಲ್ಡ್’ ಕಚೇರಿಗೆ ಭೇಟಿ ನೀಡಿದ್ದು, ಈ ವೇಳೆ ಕಬ್ಬಡಿ ಕುರಿತು ಮಾತಿಗಿಳಿದರು.

ನಿಮ್ಮ ಬಾಲ್ಯ, ವಿದ್ಯಾಭ್ಯಾಸ, ಪೋಷಕರ ಕುರಿತು ಏನಂತಿರೀ ?

ನಾವು ಮೂಲತಃ ಉಡುಪಿ ಜಿಲ್ಲೆಯ ಗಂಗೊಳ್ಳಿಯವರು. ನನ್ನ ಪೋಷಕರು ಮುಂಬೈಯಲ್ಲಿ ನೆಲೆನಿಂತ ಕಾರಣ ಹುಟ್ಟಿ-ಬೆಳೆದದ್ದು ಮುಂಬೈಯ ಸಂತಕ್ರೂಸ್‌ನಲ್ಲಿ. ಸೈಂಟ್ ಅಂಥಾನಿ ಶಾಲೆಯಲ್ಲಿ ಪ್ರಾಥಮಿಕ, ಅನಂತರ ಇದೀಗ ಆರ್.ಜೆ.ಕಾಲೇಜಿನ ಅಂತಿಮ ಬಿಕಾಂ ಪದವಿ ವ್ಯಾಸಾಂಗದಲ್ಲಿದ್ದಾನೆ. ತಂದೆಯನ್ನು ಸಣ್ಣ ವಯಸ್ಸಿನಲ್ಲಿಯೇ ಕಳೆದುಕೊಂಡೆ. ತಾಯಿ ಆರೈಕೆಯಲ್ಲಿ ಬೆಳೆದಿದ್ದೇನೆ. ತಾಯಿ, ಅಕ್ಕಳೊಂದಿಗೆ ಬೆಳೆದು ದೊಡ್ಡವನಾಗಿದ್ದೇನೆ.

ಕಬ್ಬಡಿಗೆ ಪೋಷಕರಿಂದ ಯಾವ ರೀತಿಯ ಪ್ರೋತ್ಸಾಹ ಸಿಕ್ಕಿತು…..ಜನರಿಂದ ಯಾವ ರೀತಿಯ ಪ್ರೇರಣೆ ಸಿಕ್ಕಿತು?

ಮುಂಬೈಯ ಹಲವು ಕಡೆಗಳಲ್ಲಿ ನಾನು ಕಬ್ಬಡಿ ಆಡಿದ್ದೇನೆ. ಮೊದಮೊದಲು ತಾಯಿ ಕಬ್ಬಡಿಗೆ ಪ್ರೋತ್ಸಾಹ ನೀಡುತ್ತಿರಲಿಲ್ಲ. ಕಬ್ಬಡಿಯನ್ನು ನೆಚ್ಚಿನ ಕ್ರೀಡಿಯನ್ನಾಗಿ ಆಯ್ಕೆ ಮಾಡಿಕೊಂಡು, ಮುಂಬೈಯಲ್ಲಿ ನಡೆಯುತ್ತಿದ್ದ ಎಲ್ಲ ಪಂದ್ಯಗಳಲ್ಲಿ ನಾನು ಆಡಿದ್ದೇನೆ. ಕಬ್ಬಡಿ ಆಟದಿಂದ ನನಗೆ ಗಾಯವಾಗಬಹುದು…ಅದು ನನ್ನ ವಿದ್ಯಾಭ್ಯಾಸವನ್ನು ಕುಂಠಿತಗೊಳಿಸಬಹುದು ಎಂಬ ಆತಂಕ ನನ್ನ ತಾಯಿಗಿತ್ತು. ನಂತರ ನನ್ನ ಆಟವನ್ನು ನೋಡಿ ತಾಯಿ ಕೂಡಾ ಬೆಂಬಲವಾಗಿ ನಿಂತರು. ತಂದೆಯನ್ನು ಸಣ್ಣ ವಯಸ್ಸಿನಲ್ಲಿಯೇ ಕಳೆದುಕೊಂಡ ಕಾರಣ ತಾಯಿಯೇ ನನಗೆ ತಂದೆ-ತಾಯಿ ಎರಡೂ ಆಗಿದ್ದರು. ಜೊತೆಗೆ ನನ್ನ ಕಬ್ಬಡಿ ಆಟವನ್ನು ನೋಡಿದ ಜನ ಕೂಡಾ ಬೆಂಬಲಕ್ಕೆ ನಿಂತರು. ಅಲ್ಲಲ್ಲಿ ನಡೆಯುವ ಆಟವನ್ನು ಆಡುವಂತೆ ಪ್ರೇರಣೆ ನೀಡಿ, ಇಂದು ಓರ್ವ ಉತ್ತಮ ಆಟಗಾರನಾಗುವಲ್ಲಿ ಸಹಕಾರ ನೀಡಿದ್ದಾರೆ.

IMG-20141002-WA0001

ಕ್ರಿಕೆಟ್, ಫುಟ್ಬಾಲ್, ಹಾಕಿಯಂಥ ಕ್ರೀಡೆಗಳಿರುವಾಗ ಕಬ್ಬಡಿಯನ್ನೇ ಏಕೆ ನೀವು ಆಯ್ಕೆ ಮಾಡಿಕೊಂಡಿರಿ ?

ಎಲ್ಲರೂ ಕ್ರಿಕೆಟ್, ಫುಟ್ಬಾಲ್, ಹಾಕಿಯಂಥ ಕ್ರೀಡೆಗಳ ಹಿಂದೆಬಿದ್ದಿರುವಾಗ ನಾನು ಕಬ್ಬಡಿಯನ್ನೆ ನನ್ನ ಗುರಿಯಾಗಿಸಿಕೊಂಡೆ. ಬಾಲ್ಯದಿಂದಲೂ ಮುಂಬೈಯ ಗಲ್ಲಿಗಲ್ಲಿಗಳಲ್ಲಿ ಕಬ್ಬಡಿ ಆಟ ಆಡಿ ಬೆಳೆದವ ನಾನು. ಚಿಕ್ಕ ವಯಸ್ಸಿನಿಂದಲೇ ಕಬ್ಬಡಿ ಎಂದರೆ ಬಹಳ ಇಷ್ಟ. ಮುಂದೆ ಬೆಳೆಬೆಳೆಯುತ್ತ ನನಗೆ ಅದು ದಾರಿದೀಪವಾಗುತ್ತ ಹೋಯಿತು. ಕಬ್ಬಡಿ ಆಟದಿಂದಾಗಿ ಜನ ನನ್ನನ್ನು ಗುರುತಿಸಲು ಆರಂಭಿಸಿದರು. ಇದು ನನಗೆ ಮತ್ತಷ್ಟು ಪ್ರೊತ್ಸಾಹ ನೀಡಿತು.

IMG-20141002-WA0041

IMG-20141002-WA0040

IMG-20141002-WA0039

ಹಿಂದೊಮ್ಮೆ ಕಬ್ಬಡಿ ಆಟ ಬಿಟ್ಟಿದ್ದು ಏಕೆ? ಮತ್ತೆ ಕಬ್ಬಡಿ ಕೈಬೀಸಿ ಕರೆದಿದ್ದು ಹೇಗೆ ?

ತಂದೆಯನ್ನು ಕಳೆದುಕೊಂಡ ನನ್ನನ್ನು ಹಾಗೂ ಅಕ್ಕಳನ್ನು ತಾಯಿ(ಪಾರ್ವತಿ)ಯೆ ಸಾಕಿದ್ದು, ಆಕೆ ಬ್ಯೂಟಿಷಿಯನ್ ಆಗಿ ಕೆಲಸ ಮಾಡಿ ನಮ್ಮನ್ನು ಸಾಕುತ್ತಿದ್ದಳು, ಎಸ್ಸೆಸ್ಸೆಲ್ಸಿಯ ನಂತರ ವಿದ್ಯಾಭ್ಯಾಸ ಮುಂದುವರಿಸುವುದಕ್ಕೆ ಆರ್ಥಿಕ ಸಂಕಷ್ಟ ಎದುರಾಯಿತು. ಆಗ ನಾನು ವಿದ್ಯಾಭ್ಯಾಸಕ್ಕೆ ಗುಡ್‌ಬೈ ಹೇಳಿ ಮುಂಬೈಯ ಲೀಲಾ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿದೆ. ಆಗಲೂ ನನ್ನ ಕಬ್ಬಡಿ ಆಟ ಮುಂದುವರಿದಿತ್ತು. ಆಗ ಮುಂಬೈ ಜಿಲ್ಲಾ ತಂಡಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದೆ. ನಂತರ ಮುಂಬೈ ತಂಡಕ್ಕೆ ಆಯ್ಕೆಯಾದೆ. ಈ ಮಧ್ಯೆ ವಿದ್ಯಾಭ್ಯಾಸ ಮುಂದುವರಿಸುವುದಕ್ಕಾಗಿ ಆರ್.ಜೆ.ಕಾಲೇಜನ್ನು ಸೇರಿದೆ.

IMG-20141002-WA0002

ಕಬ್ಬಡಿ ಆಟ ಮುಂದುವರಿದದ್ದು ಹೇಗೆ ?

7-8 ವರ್ಷದಿಂದಲೇ ಕಬ್ಬಡಿ ಆಟ ಆಡುತ್ತಿದ್ದೆ. ಅದು ಶಾಲಾ-ಕಾಲೇಜು ದಿನಗಳಲ್ಲಿಯೂ ಮುಂದುವರಿಯಿತು. ದೇನಾ ಬ್ಯಾಂಕ್‌ನಿಂದ ಗುತ್ತಿಗೆ ಆಧಾರದಲ್ಲಿ ನನ್ನ ಕಬ್ಬಡಿ ವೃತಿ ಬದುಕು ಆರಂಭವಾಯಿತು. ಮುಂಬೈಯ ಬಳಿಕ ಮಹಾರಾಷ್ಟ್ರ ತಂಡದ ಪರವಾಗಿ ಆಟ ಆಡಿದೆ. ಏಷ್ಯನ್ ಗೇಮ್ಸ್‌ಗಾಗಿ ಇಂಡಿಯನ್ ತಂಡದ ಕ್ಯಾಂಪ್‌ಗೆ ಆಯ್ಕೆಗೊಂಡೆ. ಅನಂತರ ಪ್ರೊ ಕಬ್ಬಡಿ ಲೀಗ್ ಪಂದ್ಯದ ಹರಾಜು ಪ್ರಕ್ರಿಯೆಯಲ್ಲಿ ‘ಯು ಮುಂಬಾ’ ತಂಡವು ನನ್ನನ್ನು ಆಯ್ಕೆ ಮಾಡಿತು.

ಪ್ರೊ ಕಬ್ಬಡಿ ಲೀಗ್ ಪಂದ್ಯದ ಸಾಧನೆ ಏನನಿಸುತ್ತಿದೆ ?

ಪ್ರೊ ಕಬ್ಬಡಿ ಲೀಗ್‌ನಲ್ಲಿ ಯು ಮುಂಬಾ ತಂಡದ ಪರವಾಗಿ ಆಡಿದೆ. ರೈಡರ್ ಆಗಿ, ಆಲ್‌ರೌಂಡರ್ ಆಗಿ ಉತ್ತಮ ಪ್ರದರ್ಶನ ನೀಡಿದೆ. ಇದರಿಂದ ಯು ಮುಂಬಾ ತಂಡವು ಫೈನಲ್‌ಗೆ ಲಗ್ಗೆ ಇಡುವಲ್ಲಿ ಯಶಸ್ವಿಯಾಯಿತು. ಫೈನಲ್‌ನಲ್ಲಿ ನಮ್ಮ ತಂಡದವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದಾಗಿ ಫೈನಲ್‌ನಲ್ಲಿ ಜೈಪುರ ತಂಡದ ವಿರುದ್ಧ ಸೋಲನ್ನು ಕಾಣಬೇಕಾಯಿತು. ಆದರೂ ಈ ಪಂದ್ಯಾಟದಲ್ಲಿ ‘ಬೆಸ್ಟ್ ರೈಡರ್’, ‘ಬೆಸ್ಟ್ ಡಿಪೆಂಡರ್’, ಬೆಸ್ಟ್ ಮೂವ್‌ಮೆಂಟ್ ಆಫ್ ದಿ ಮ್ಯಾಚ್’ ಪ್ರಶಸ್ತಿ ನನಗೆ ದೊರಕಿತು. ಈ ಸಾಧನೆ ನನ್ನ ಕಬ್ಬಡಿ ವೃತ್ತಿ ಬದುಕಿಗೆ ಇನ್ನಷ್ಟು ಅಡಿಪಾಯ ಹಾಕಿಕೊಟ್ಟಿದೆ.

ಕ್ರಿಕೆಟ್‌ನ ಮುಂದೆ ಕಬ್ಬಡಿಯನ್ನು ಜನಮೆಚ್ಚುತ್ತಾರೆಯೇ ?

ಖಂಡಿತ. ಭಾರತದಲ್ಲಿ ಕ್ರಿಕೆಟ್‌ಗೆ ಸಿಗುವಷ್ಟು ಬೆಂಬಲ ಬೇರೆ ಯಾವುದೇ ಕ್ರೀಡೆಗೆ ಸಿಗುತ್ತಿಲ್ಲ. ಆದರೆ ಪ್ರೊ ಕಬ್ಬಡಿ ಲೀಗ್(ಪಿಕೆಎಲ್) ಪಂದ್ಯಾಟ ನಡೆದ ಬಳಿಕ ಬಹಳಷ್ಟು ಮಂದಿ ಕಬ್ಬಡಿಯನ್ನು ಕ್ರಿಕೆಟ್‌ನಂತೆಯೇ ಇಷ್ಟಪಡುತ್ತಾರೆ…ಬೆಂಬಲಿಸಲು ಆರಂಭಿಸಿದ್ದಾರೆ. ಪಿಕೆಎಲ್ ಬಳಿಕ ಸಾಮಾಜಿಕ ತಾಣಗಳಲ್ಲಿ ಕಬ್ಬಡಿ ಕುರಿತು ಬೆಂಬಲ, ಆಸಕ್ತಿ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಕಬ್ಬಡಿ ಕೂಡಾ ಕ್ರಿಕೆಟ್‌ನಂತೆ ಜನಮೆಚ್ಚುವ ಕ್ರೀಡೆಯಾಗಿ ಹೊರಹೊಮ್ಮಲಿದೆ ಎಂಬ ಭರವಸೆ ನನಗಿದೆ.

Write A Comment