
ಬೆಂಗಳೂರು, ಸೆ.28: ಕುಡಿದು ಬಂದು ಜಗಳ ಮಾಡುತ್ತಿದ್ದ ತಾಯಿಯ ಕಪಾಳಕ್ಕೆ ಹೊಡೆದು ದೊಣ್ಣೆಯಿಂದ ಮಗ ಥಳಿಸಿದ್ದರಿಂದ ಆಕೆ ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತಮಟ್ಟ ದುರ್ದೈವಿಯನ್ನು ತಿಗಳರಪಾಳ್ಯ ನಿವಾಸಿ ವೆಂಕಟಮ್ಮ(45) ಎಂದು ಗುರುತಿಸಲಾಗಿದೆ. ಕುಡಿತದ ಚಟ ಇದ್ದ ವೆಂಕಟಮ್ಮ ನಿತ್ಯ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದಳು ಎನ್ನಲಾಗಿದೆ.
ಶನಿವಾರ ರಾತ್ರಿ 7 ಗಂಟೆ ಸುಮಾರಿನಲ್ಲಿ ವೆಂಕಟಮ್ಮ ಯಥಾಪ್ರಕಾರ ಕುಡಿದು ಬಂದು ಮನೆಯಲ್ಲಿ ಜಗಳ ಆರಂಭಿಸಿದ್ದು, ಕೋಪಗೊಂಡ ಮಗ ಕೈಯಿಂದ ತಾಯಿ ಕಪಾಳಕ್ಕೆ ಹೊಡೆದಿದ್ದಾನೆ. ನಂತರ ದೊಣ್ಣೆಯಿಂದಲೂ ಥಳಿಸಿದ್ದಾನೆ. ಈ ವೇಳೆ ಅಸ್ವಸ್ಥಗೊಂಡ ವೆಂಕಟಮ್ಮ ಸ್ಥಳದಲ್ಲೆ ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಿಲ್ಲ. ಈ ಮೊಕದ್ದಮೆಯನ್ನು ದಾಖಲಿಸಿಕೊಂಡಿರುವ ತಾವರೆಕೆರೆ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.