ಕರ್ನಾಟಕ

ದೇಶದ ಅಭಿವೃದ್ಧಿಗೆ ರಾಜ್ಯಗಳು ಕೈಜೋಡಿಸಲಿ: ಮೋದಿ; ತುಮಕೂರಿನಲ್ಲಿ ದೇಶದ ಮೊದಲ ಮೆಗಾ ಫುಡ್‌ಪಾರ್ಕ್ ಲೋಕಾರ್ಪಣೆ

Pinterest LinkedIn Tumblr

modi121

ತುಮಕೂರು, ಸೆ.24: ದೇಶ ಎಲ್ಲ ಕ್ಷೇತ್ರಗಳಲ್ಲಿಯೂ ಸಮಗ್ರ ಅಭಿವೃದ್ಧಿ ಸಾಧಿಸಬೇಕಾದರೆ ರಾಜ್ಯ ಸರಕಾರಗಳು ಕೇಂದ್ರ ಸರಕಾರದೊಂದಿಗೆ ಸಂಘರ್ಷಕ್ಕೆ ಇಳಿಯದೆ ಪಕ್ಷ ಭೇದ ಮರೆತು ಕೇಂದ್ರದೊಂದಿಗೆ ಕೈ ಜೋಡಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಜಿಲ್ಲೆಯ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಫ್ಯೂಚರ್ ಗ್ರೂಪ್, ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದೊಂದಿಗೆ ನಿರ್ಮಾಣವಾಗಿರುವ ದೇಶದ ಮೊದಲ ಮೆಗಾ ಫುಡ್‌ಪಾರ್ಕ್ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ನನಗೆ ಮುಖ್ಯಮಂತ್ರಿ ಮಾತನಾಡಿದ ಕನ್ನಡ ಭಾಷೆ ಅರ್ಥವಾಗದೇ ಇರಬಹುದು, ಆದರೆ ರಾಜ್ಯ ಜನತೆಯ ಭಾವನೆಗಳು ಅರ್ಥವಾಗುತ್ತವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೇಂದ್ರ ಸರಕಾರ ಅನುಷ್ಠಾನಗೊಳಿಸುವ ಯೋಜನೆಗಳಿಗೆ ರಾಜ್ಯ ಸರಕಾರ ಸಹಕಾರ ನೀಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ರಾಜ್ಯಗಳ ಅಭಿವೃದ್ಧಿ, ವಿಕಾಸದಿಂದ ದೇಶದ ಅಭಿವೃದ್ಧಿ ಸಾಧ್ಯ. ರಾಜನೀತಿ, ಪಕ್ಷ ಬೇರೆ ಇರಬಹುದು. ಆದರೆ ನಮ್ಮ ಮುಂದಿರುವ ಉದ್ದೇಶ ದೇಶದ ಪ್ರಗತಿ. ಇದಕ್ಕಾಗಿ ನಾವು ಎಲ್ಲವನ್ನು ಮರೆಯಬೇಕಾಗಿದೆ. ದೇಶದಲ್ಲಿ ಉತ್ತಮ ಆಡಳಿತ ನೀಡಬೇಕಾದರೆ ಕೇಂದ್ರ ಸರಕಾರಕ್ಕೆ, ರಾಜ್ಯ ಸರಕಾರದ ಸಹಕಾರ ಅಗತ್ಯ ಮತ್ತು ಅನಿವಾರ್ಯ. ಅಭಿವೃದ್ಧಿ ವಿಚಾರದಲ್ಲಿ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಧ್ವನಿ ಸೇರಬೇಕು. ನಿಮ್ಮ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು ದೇಶದ ಅಭಿವೃದ್ಧಿ ಮಾಡಲು ಸಿದ್ಧನಿದ್ದೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ರಾಜ್ಯ ಸರಕಾರಗಳು ಕೇಂದ್ರ ಸರಕಾರದೊಂದಿಗೆ ಒಟ್ಟಾಗಿ ಆಧುನಿಕ ಮತ್ತು ವೈಜ್ಞಾನಿಕ ತಂತ್ರಜ್ಞಾನವನ್ನು ಅಳವಡಿಸಬೇಕು, ಪ್ರೋತ್ಸಾಹ ನೀಡಲು ನಾವು ಸಿದ್ಧವಿದ್ದೇವೆ. ದೇಶದಲ್ಲಿ ಆಹಾರ ಸಂಸ್ಕರಣೆ ಹೊಸದಲ್ಲ. ಆದರೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ವಿಶ್ವಕ್ಕೆ ರುಚಿಕರ ಸಾಂಬಾರು ಪದಾರ್ಥಗಳನ್ನು ರಫ್ತು ಮಾಡುವುದು ಭಾರತದ ಹೆಗ್ಗಳಿಕೆ. ಮೌಲ್ಯವರ್ಧನೆಗೊಂಡರೆ ಇನ್ನಷ್ಟು ಲಾಭಗಳಿಸಬಹುದು, ರೈತರ ಜೀವನ ಕ್ರಮವೂ ಸುಧಾರಿಸಲಿದೆ ಎಂದು ಮೋದಿ ಹೇಳಿದರು.

ವರ್ಷಕ್ಕೆ 3 ಲಕ್ಷದ 14 ಸಾವಿರ ಕೋಟಿ ರೂ. ನಷ್ಟ: ದೇಶದಲ್ಲಿ ಪ್ರತಿವರ್ಷ 3 ಲಕ್ಷದ 14 ಸಾವಿರ ಕೋಟಿಗೂ ಅಧಿಕ ಮೊತ್ತದ ಆಹಾರ ಪದಾರ್ಥ ವ್ಯರ್ಥವಾಗುತ್ತಿದೆ. ಆಹಾರ ಸಂಸ್ಕರಣೆೆ ಮಾಡಿದರೆ ಪ್ರತಿವರ್ಷ 3 ಲಕ್ಷದ 14 ಸಾವಿರ ಕೋಟಿ ರೂ. ಉಳಿತಾಯವಾಗಲಿವೆ. ಇದರಿಂದ ಹೆಚ್ಚಿನ ಲಾಭವಾಗುವುದು ರೈತರಿಗೆ ಎಂದು ಮೋದಿ ತಿಳಿಸಿದರು.

ಶೇ.5ರಷ್ಟು ನೈಸರ್ಗಿಕ ರಸ ಸೇರಿ: ದೇಶದಲ್ಲಿ ಉತ್ಪಾದನೆಯಾಗುವ ಮತ್ತು ಮಾರಾಟವಾಗುತ್ತಿರುವ ತಂಪು ಪಾನೀಯಗಳಿಗೆ ಸೇ.5ರಷ್ಟು ನೈಸರ್ಗಿಕವಾದ ರಸ ಸೇರ್ಪಡೆಯಿಂದ ದೇಶದ ತೋಟಗಾರಿಕಾ ಬೆಳೆಗಾರರ ಉತ್ಪನ್ನಗಳಿಗೆ ಬೇಡಿಕೆಯೂ ಸಿಗುತ್ತಿದೆ. ಉತ್ತಮ ಬೆಲೆಯೂ ದೊರೆಯುತ್ತದೆ. ಈ ನಿಟ್ಟಿನಲ್ಲಿ ತಂಪು ಪಾನೀಯ ತಯಾರಿಕಾ ಕಾರ್ಖಾನೆಗಳ ಮಾಲಕರು ಗಮನ ಹರಿಸಬೇಕು, ಅದಕ್ಕೆ ಬೇಕಾದ ಸಹಕಾರ ನೀಡಲು ಕೇಂದ್ರ ಸರಕಾರ ಸಿದ್ಧವಿದೆ. ಕೃಷಿ ಕ್ಷೇತ್ರದ ಸಮಗ್ರ ಬದಲಾವಣೆಗೆ ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ. ಹೊಸ ಕೃಷಿ ಆರ್ಥಿಕ ನೀತಿಯನ್ನು ಜಾರಿಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ. ಆ ಮೂಲಕ ಕೃಷಿಕರ ಹಿತಕಾಯಲು ಸರಕಾರರ ಬದ್ಧವಿದೆ ಎಂದು ಪ್ರಧಾನಿ ನುಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರ ಆಹಾರ ಸಂಸ್ಕರಣ ಇಲಾಖೆಯ ಸಚಿವೆ ಹರ್‌ಪೀತ್ ಸಿಂಗ್ ಕೌರ್ ಬಾದಲ್, ದೇಶದಲ್ಲಿ ವ್ಯರ್ಥವಾಗುತ್ತಿರುವ ಮತ್ತು ನಷ್ಟವಾಗುತ್ತಿರುವ ಆಹಾರ ಉತ್ಪನ್ನಗಳ ಪ್ರಮಾಣ ಕಡಿಮೆ ಮಾಡಲು ಆಹಾರ ಸಂಸ್ಕರಣೆ ಅಗತ್ಯ ಮತ್ತು ಅನಿವಾರ್ಯ. ಈ ಮೂಲಕ ಸಾವಿರಾರು ರೈತರಿಗೆ, ಯುವಕರಿಗೆ ಉದ್ಯೋಗ ದೊರೆಯಲಿದೆ. ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಹಾಗೆಯೇ ಆಹಾರ ಉತ್ಪಾದನೆಯಲ್ಲಿ ಎರಡನೆ ಸ್ಥಾನದಲ್ಲಿದೆ. ಇಷ್ಟೊಂದು ಪ್ರಮಾಣದಲ್ಲಿ ಉತ್ಪಾದನಾ ಸಮರ್ಥ್ಯವಿರುವ ದೇಶಕ್ಕೆ ಆಹಾರ ಸಂಸ್ಕರಣ ಘಟಕಗಳು ಅವಶ್ಯಕ. ದೇಶದ ಮೊದಲ ಫುಡ್‌ಪಾರ್ಕ್ ಇಂದು ಉದ್ಘಾಟನೆಯಾಗುತ್ತಿದ್ದು, ಈ ವರ್ಷದ ಅಂತ್ಯದೊಳಗೆ ಇನ್ನು ನಾಲ್ಕು ಫುಡ್‌ಪಾರ್ಕ್‌ಗಳನ್ನು ಪ್ರಧಾನಿಗಳು ಉದ್ಘಾಟನೆ ಮಾಡಲಿದ್ದಾರೆ ಎಂದರು.

ಹಾಗೆಯೇ ಇವುಗಳ ಜೊತೆಗೆ ದೇಶದಲ್ಲಿ ಮತ್ತೆ 16 ಫುಡ್‌ಪಾರ್ಕ್‌ಗಳನ್ನು ನಿರ್ಮಿಸಲಾಗುವುದು.ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಮೂಲಕ ರೈತರಿಗೆ ಬರುವ ಆದಾಯವನ್ನು ಹೆಚ್ಚಿಸುವುದು ಸರಕಾರದ ಉದ್ದೇಶ. ತುಮಕೂರಿನಲ್ಲಿ ಆರಂಭವಾಗುತ್ತಿರುವ ಮೆಗಾ ಫುರ್ಡ್‌ಪಾರ್ಕ್ ನಿಂದ ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ದಾವಣಗೆರೆ, ಸೇರಿದಂತೆ ಹಳೆ ಮೈಸೂರು ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವೆ ಹರ್‌ಪೀತ್ ಸಿಂಗ್ ತಿಳಿಸಿದರು.

ವೇದಿಕೆಯಲ್ಲಿ ಕರ್ನಾಟಕದ ರಾಜ್ಯಪಾಲ ವಜುಬಾಯ್ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್, ಸಿದ್ದೇಶ್ವರ್, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಫ್ಯೂಚರ್ ಗ್ರೂಫ್ ಸಿಇಒ ಕಿಶೋರ್ ದಯಾನಿಧಿ, ಕೇಂದ್ರ ಆಹಾರ ಸಂಸ್ಕರಣಾ ಇಲಾಖೆಯ ಕಾರ್ಯದರ್ಶಿ ಸಿರಾಜ್ ಹಸನ್ ಮತ್ತಿತರರು ಉಪಸ್ಥಿತರಿದ್ದರು.

‘ವೈಜ್ಞಾನಿಕವಾಗಿ ಕೃಷಿ ಅಭಿವೃದ್ಧಿ’
ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿಕ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರಕಾರ ವೈಜ್ಞಾನಿಕ ಕೃಷಿಗೆ ಆದ್ಯತೆ ನೀಡಲಿದೆ. ಈ ನಿಟ್ಟಿನಲ್ಲಿ ಕೃಷಿ ಉತ್ಪಾದನೆ ಮತ್ತು ಉತ್ಪನ್ನಗಳು ಮೌಲ್ಯವರ್ಧನೆಯಾಗಬೇಕು. ದೇಶದ ನಾಗರಿಕರ ಹೊಟ್ಟೆ ತಂಬಿಸುತ್ತಿರುವ ರೈತನ ಜೇಬು ಮಾತ್ರ ತಂಬುತ್ತಿಲ್ಲ. ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಸೂಕ್ತ ಬೆಲೆ, ಮೌಲ್ಯವರ್ಧನೆ, ಉತ್ತಮ ವ್ಯವಸ್ಥೆ ಸಿಗಬೇಕು ಎನ್ನುವ ದೃಷ್ಟಿಯಿಂದ ದೇಶದಲ್ಲಿ ಸಾರ್ವಜನಿಕ, ಖಾಸಗಿ, ಸರಕಾರಿ ಸಹಭಾಗಿತ್ವದಲ್ಲಿ ಫುಡ್‌ಪಾರ್ಕ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಬಡವರು, ರೈತರ ಕೊಳ್ಳುವ ಶಕ್ತಿ ಹೆಚ್ಚಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮೋದಿ ಅಭಿಪ್ರಾಯಪಟ್ಟರು.

Write A Comment