ಕರ್ನಾಟಕ

ಡಿನೋಟಿಫಿಕೇಷನ್ ಪ್ರಕರಣಗಳ ತನಿಖೆ: ರಾಜ್ಯ ಬಿಜೆಪಿಯ ಮಾಜಿ ಸಿಎಂಗಳಿಗೆ ನಡುಕ

Pinterest LinkedIn Tumblr

KPCC 04

ಬೆಂಗಳೂರು, ಸೆ.20: ಬಿಜೆಪಿ ಸರಕಾರದ ಅಧಿಕಾರಾವಧಿಯಲ್ಲಿ ನಡೆದಿರುವ ಎಲ್ಲ ಡಿನೋಟಿಫಿಕೇಷನ್ ಪ್ರಕರಣಗಳ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕೆಪಿಸಿಸಿ ಕಾರ್ಯಕಾರಿಣಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತಾವಧಿಯಲ್ಲಿ 10 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಡಿನೋಟಿಫೈ ಮಾಡಲಾಗಿದೆ. ಇದೀಗ ನಮ್ಮ ವಿರುದ್ಧ ವ್ಯರ್ಥ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಗಾರಿದರು.

ಸುಳ್ಳನ್ನು ಸಾವಿರ ಬಾರಿ ಹೇಳಿ ಅದನ್ನು ಸತ್ಯ ಎಂದು ನಂಬಿಸಲು ಹೊರಟಿದ್ದಾರೆ. ಆದರೆ, ನಮ್ಮ ಸರಕಾರ ಕಾನೂನುಬಾಹಿರವಾಗಿ ಒಂದು ಗುಂಟೆ ಜಮೀನನ್ನು ಡಿನೋಟಿಫಿಕೇಷನ್ ಮಾಡಿಲ್ಲ. ಆದುದರಿಂದ, ಡಿನೋಟಿಫಿಕೇಷನ್ ಹಗರಣಗಳ ಸಂಪೂರ್ಣ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.ವಿಧಾನಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ನೀಡಿದ್ದ 160ಕ್ಕೂ ಭರವಸೆಗಳ ಪೈಕಿ 90 ಭರವಸೆಗಳನ್ನು ಈಗಾಗಲೆ ಈಡೇರಿಸಲಾಗಿದೆ. ಇನ್ನುಳಿದ ಭರವಸೆಗಳನ್ನು ಈಡೇರಿಸುತ್ತೇವೆ. ಸರಕಾರದ ಮೇಲೆ ಜನತೆ ವಿಶ್ವಾಸವಿಟ್ಟಿರುವುದು ಉಪ ಚುನಾವಣೆಗಳಲ್ಲಿ ಸಾಬೀತಾಗಿದೆ. ಮುಂಬರುವ ಚುನಾವಣೆಗಳನ್ನು ಇದೇ ವಿಶ್ವಾಸದ ಮೇಲೆ ಎದುರಿಸುತ್ತೇವೆ ಎಂದು ಅವರು ತಿಳಿಸಿದರು. ರಾಜಧಾನಿ ಬೆಂಗಳೂರು ಸುಮಾರು 80ಕಿ.ಮೀ.ಗೂ ಅಧಿಕ ವಿಸ್ತೀರ್ಣ ಹೊಂದಿದೆ. ಉತ್ತಮ ಆಡಳಿತದ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಲು ಸರಕಾರ ಮುಂದಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸಮಿತಿಯನ್ನು ರಚನೆ ಮಾಡಲಾಗಿದೆ. ಸಮಿತಿ ನೀಡುವ ವರದಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ನಡೆಸಿದ ತಂತ್ರ ಯಶಸ್ವಿಯಾಯಿತು. ಶಿಕಾರಿಪುರದಲ್ಲಿ ಅತ್ಯಲ್ಪ ಮತದಿಂದ ಪಕ್ಷದ ಅಭ್ಯರ್ಥಿ ಸೋತರು. ಮತ್ತಷ್ಟು ಪ್ರಯತ್ನ ಮಾಡಿದ್ದರೆ ಅಲ್ಲಿಯೂ ಗೆಲುವು ಸಾಧಿಸಬಹುದಾಗಿತ್ತು. ಚಿಕ್ಕೋಡಿ ಕಾಂಗ್ರೆಸ್‌ನ ಭದ್ರ ಕೋಟೆಯಾಗಿ ಉಳಿದಿದೆ ಎಂದು ಅವರು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ತಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂಬುದೆಲ್ಲ ಮಾಧ್ಯಮಗಳ ಸೃಷ್ಟಿ. ನಿಗಮ, ಮಂಡಳಿಗಳ ನೇಮಕಾತಿ ಕುರಿತು ಈಗಾಗಲೆ ತಾವಿಬ್ಬರೂ ಸಭೆ ಸೇರಿ ಒಂದು ಸುತ್ತಿನ ಮಾತುಕತೆ ನಡೆಸಿದ್ದೇವೆ. ನಮ್ಮ ನಡುವೆ ಯಾವುದೆ ಬಗೆಯ ಅಸಮಾಧಾನವಿಲ್ಲ. ವಿವಿಧ ಕಾರಣಗಳಿಂದಾಗಿ ನಿಗಮ, ಮಂಡಳಿ ನೇಮಕಾತಿಗೆ ವಿಳಂಬವಾಗಿದೆ. ಆದರೆ, ಮಾಸಾಂತ್ಯಕ್ಕೆ ನೇಮಕಾತಿ ಪೂರ್ಣಗೊಳ್ಳುವ ಸಾಧ್ಯತೆಗಳಿವೆ ಎಂದು ಸಿದ್ದರಾಮಯ್ಯ ತಿಳಿಸಿದರು.

Write A Comment