ಅಂತರಾಷ್ಟ್ರೀಯ

ಲಡಾಕ್‌ನಲ್ಲೇ ಕುಳಿತ ಚೀನಾ ಸೇನೆ: ಹುಸಿಯಾದ ಚೀನಾ ಅಧ್ಯಕ್ಷರ ಆಶ್ವಾಸನೆ

Pinterest LinkedIn Tumblr

China

ಹೊಸದಿಲ್ಲಿ, ಸೆ.20: ಲಡಾಕ್‌ನ ಛುಮುರ್ ಎಂಬಲ್ಲಿ ಕಳೆದ ವಾರ ಭಾರತದ ಭೂಪ್ರದೇಶದೊಳಗೆ ಪ್ರವೇಶಿಸಿದ್ದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) ಸೈನಿಕರು ಈಗಲೂ ಅಲ್ಲೇ ನೆಲೆ ನಿಂತಿದ್ದಾರೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.

ಇತ್ತೀಚಿನ ವರ್ಷಗಳಲ್ಲಿ ಭಾರತ-ಚೀನಾಗಳ ಗಡಿ ಪ್ರದೇಶದಲ್ಲಿ ಉದ್ಭವಿಸಿರುವ ಅಪರೂಪದ ಸಂಘರ್ಷದ ಬೆಳವಣಿಗೆ ಇದಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಕೂಡ 1,500 ಸೈನಿಕರನ್ನು ಗಡಿ ಪ್ರದೇಶಕ್ಕೆ ರವಾನಿಸಿದೆ. ಸುದೀರ್ಘ ಸಂಘರ್ಷಕ್ಕೆ ಭಾರತದ ಸೇನೆ ಕೂಡ ಸಿದ್ಧವಾಗಿದೆ ಎಂದು ಈ ಮೂಲಗಳು ಹೇಳಿವೆ.

ಎರಡೂ ಪಕ್ಷಗಳ ನಡುವಿನ ಮುಖಾಮುಖಿಯನ್ನು ಇತ್ಯರ್ಥಗೊಳಿಸಲು ಸೇನಾಧಿಕಾರಿಗಳ ಮಟ್ಟದಲ್ಲಿ ಸಭೆ ನಡೆದ ಬಗ್ಗೆ ವರದಿಯಾಗಿಲ್ಲ ಎಂದೂ ಈ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಭಾರತಕ್ಕೆ ಭೇಟಿ ನೀಡಿದ್ದ ಚೀನಾದ ಅಧ್ಯಕ್ಷರು ಶುಕ್ರವಾರ ಗಡಿ ಪ್ರದೇಶದಿಂದ ಪಿಎಲ್‌ಎ ಸೈನಿಕರ ವಾಪಸ್‌ಗೆ ಆಶ್ವಾಸನೆ ನೀಡಿದ್ದರು. ಆದರೂ ಚೀನಾದ ಸೈನಿಕರು ವಾಪಸ್ ಹೋಗಿಲ್ಲ.

ಗಡಿಯಲ್ಲಿ ಎರಡೂ ದೇಶಗಳ ಸೈನಿಕರ ನಡುವಣ ಪರಸ್ಪರ ಮುಖಾಮುಖಿಯ ಸ್ಥಿತಿಯಿಂದ ವಾಪಸ್ ತೆರಳಲು ಪಿಎಲ್‌ಎ ಸೈನಿಕರಿಗೆ ತಾನು ಆದೇಶ ನೀಡಿದ್ದೇನೆಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದರು ಎಂದು ವರದಿಯಾಗಿತ್ತು.

ಚೀನಾ ಅಧ್ಯಕ್ಷರ ಮೂರು ದಿನಗಳ ಭೇಟಿಯ ಅವಧಿಯಲ್ಲಿ ಮೋದಿ, ಎರಡು ಬಾರಿ ಲಡಾಕ್‌ನಲ್ಲಿ ಚೀನಾದ ಸೈನಿಕರ ಅತಿಕ್ರಮಣದ ವಿಷಯವನ್ನು ಜಿನ್‌ಪಿಂಗ್‌ರೊಂದಿಗೆ ಪ್ರಸ್ತಾಪಿಸಿದ್ದರು. ಪಿಎಲ್‌ಎ ಸೈನಿಕರ ವಾಪಸಾತಿಗೆ ತಾನು ಆದೇಶ ನೀಡಿದ್ದೇನೆಂದು ಜಿನ್‌ಪಿಂಗ್ ತಿಳಿಸಿದ್ದರು. ಭಾರತ-ಚೀನಾಗಳ ನಡುವಣ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಬರುವ ಲಡಾಕ್‌ನ ಛುಮುರ್ ಪ್ರದೇಶದೊಳಗೆ ಕಳೆದ ವಾರ ಚೀನಾದ ಸೈನಿಕರು ಪ್ರವೇಶಿಸಿದ್ದರು.

ಅಪಾರ ಸಂಖ್ಯೆಯ ಕಾರ್ಮಿಕರು ಮತ್ತು ನಿರ್ಮಾಣ ಯಂತ್ರಗಳ ಸಹಿತ ಸೈನಿಕರು ಬಂದಿದ್ದರು. ಗಡಿ ಪ್ರದೇಶದಲ್ಲಿ ಸಂಪರ್ಕ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ವರದಿಯಾಗಿತ್ತು.

ಅಪಾರ ಸಂಖ್ಯೆಯ ಕಾರ್ಮಿಕರು ಮತ್ತು ನಿರ್ಮಾಣ ಯಂತ್ರಗಳ ಸಹಿತ ಸೈನಿಕರು ಬಂದಿದ್ದರು. ಗಡಿ ಪ್ರದೇಶದಲ್ಲಿ ಸಂಪರ್ಕ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ವರದಿಯಾಗಿತ್ತು. ನಂತರ ಎರಡು ದಿನಗಳ ಹಿಂದೆ ಚೀನಾ ಸೈನಿಕರು ಒಂದು ಕಿ.ಮೀ.ಯಷ್ಟು ಹಿಂದೆ ಸರಿದು ಈಗ ಮತ್ತೆ ವಾಪಸಾಗಿದ್ದಾರೆ.

Write A Comment