ಅಂತರಾಷ್ಟ್ರೀಯ

ಭಾರತದ ಅಲೋಕ್ ಶೆಟ್ಟಿ ಭವಿಷ್ಯದ ನಾಯಕ: ಟೈಮ್ ಪತ್ರಿಕೆ ಗೌರವ

Pinterest LinkedIn Tumblr

alokshetty

ನ್ಯೂಯಾರ್ಕ್, ಸೆ.20: ಭಾರತದ 28ರ ಪ್ರಾಯದ ವಾಸ್ತುಶಿಲ್ಪಿ ಅಲೋಕ್ ಶೆಟ್ಟಿ ‘ಭವಿಷ್ಯದ ಯುವ ನಾಯಕ’ ಎಂದು ‘ಟೈಮ್’ ನಿಯತಕಾಲಿಕವು ತನ್ನ ವಿಶೇಷ ವರದಿಯಲ್ಲಿ ಬಣ್ಣಿಸಿದೆ.

ಭಾರತದಲ್ಲಿ ಕೊಳೆಗೇರಿ ನಿವಾಸಿಗಳಿಗೆ ಪ್ರವಾಹದ ನೀರಿನಿಂದ ರಕ್ಷಣೆ ಒದಗಿಸುವ ಮನೆಗಳನ್ನು ವಿನ್ಯಾಸಗೊಳಿಸುವ ಅಪರೂಪದ ಕೆಲಸದಲ್ಲಿ ಅವರು ತನ್ನನ್ನು ತೊಡಗಿಸಿಕೊಂಡಿದ್ದಾರೆ.

‘‘ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಬದಲಾವಣೆ ತರುವ ಕಠಿಣವಾದ ಕೆಲಸದಲ್ಲಿ ಅಲೋಕ್ ಶೆಟ್ಟಿ ತೊಡಗಿಸಿಕೊಂಡಿದ್ದು, ಅವರು ಭವಿಷ್ಯದ ಯುವ ನಾಯಕರಾಗಿದ್ದಾರೆ’’ ಎಂದು ಟೈಮ್ ನಿಯತಕಾಲಿಕ ಹೇಳಿದೆ. ಇಂತಹ ಆರು ಮಂದಿ ಭವಿಷ್ಯದ ತಲೆಮಾರಿನ ನಾಯಕರನ್ನು ಪತ್ರಿಕೆ ಹೆಸರಿಸಿದೆ.

ಶೆಟ್ಟಿ ವಾಸ್ತುಶಿಲ್ಪಿಯಾಗಿ ಭಾರತದಲ್ಲಿ ವಿಶ್ವಾಸವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂಕೀರ್ಣವಾದ ಸಮಸ್ಯೆಗಳಿಗೆ ಸರಳವಾದ ಪರಿಹಾರಗಳನ್ನು ಅವರು ಕಂಡುಕೊಳ್ಳುತ್ತಿದ್ದಾರೆ ಎಂದು ಪತ್ರಿಕೆ ಹೇಳಿದೆ.

ಬೆಂಗಳೂರು ಮೂಲದ ಸರಕಾರೇತರ ಸಂಸ್ಥೆ ‘ಪರಿಣಾಮ್ ಫೌಂಡೇಶನ್’ನೊಂದಿಗೆ ಅಲೋಕ್ ಕೆಲಸ ಮಾಡುತ್ತಿದ್ದಾರೆ. ಕೊಳೆಗೇರಿ ನಿವಾಸಿಗಳಿಗಾಗಿ ಮನೆ ವಿನ್ಯಾಸ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಪ್ರವಾಹದ ನೀರು ನುಗ್ಗಿ ತೊಂದರೆಗೆ ಒಳಗಾಗುವುದು ಹಾಗೂ ಮಲೇರಿಯಾ ಸೊಳ್ಳೆಗಳಿಂದ ಆರೋಗ್ಯ ಸಮಸ್ಯೆಗೆ ಈಡಾಗುವುದು ಕೊಳಗೇರಿ ನಿವಾಸಿಗಳ ಪ್ರಮುಖ ಸಮಸ್ಯೆಯಾಗಿದೆ.

ಬೆಂಗಳೂರಿನ ಎಲ್‌ಆರ್‌ಡಿಎ ಪ್ರದೇಶದಲ್ಲಿರುವ ಕೊಳೆಗೇರಿ ನಿವಾಸಿಗಳಿಗಾಗಿ ಈ ಸಂಸ್ಥೆ ಕೆಲಸ ಮಾಡುತ್ತಿದೆ. ದಕ್ಷಿಣ ಭಾರತದ ಅತ್ಯಂತ ದೊಡ್ಡ ತಂತ್ರಜ್ಞಾನ ಪಾರ್ಕ್‌ನ ಪಕ್ಕದಲ್ಲೇ 2,000ಕ್ಕೂ ಅಧಿಕ ಜನರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಅಲೋಕ್ ಶೆಟ್ಟಿ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ವಾಸ್ತುಶಿಲ್ಪ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ. ಪರಿಸರ ಸಂರಕ್ಷಣೆಯ ಬದ್ಧತೆಯೊಂದಿಗೆ ಆಧುನಿಕ ವಿನ್ಯಾಸವನ್ನು ಸಂಯೋಜಿಸುವುದು ಅವರ ವೈಶಿಷ್ಟವಾಗಿದೆ. 300 ಡಾಲರ್‌ಗಿಂತಲೂ ಕಡಿಮೆ ವೆಚ್ಚದಲ್ಲಿ ಪ್ರವಾಹವನ್ನು ತಡೆದುಕೊಳ್ಳಬಲ್ಲ ಮನೆಗಳನ್ನು ಅವರು ವಿನ್ಯಾಸಗೊಳಿಸಿದ್ದಾರೆ. ಮರ, ಬಿದಿರು ಮತ್ತು ಹಳೆಯ ವಸ್ತುಗಳನ್ನು ಬಳಸಿಕೊಂಡು ನಾಲ್ಕು ಗಂಟೆಗಳಲ್ಲಿ ನಿರ್ಮಿಸಿ ಕಳಚಬಹುದಾದ ಮನೆಗಳನ್ನು ಅವರು ನಿರ್ಮಿಸುತ್ತಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.

ಇಂತಹ ಮನೆಗಳ ನಿರ್ಮಾಣಕ್ಕೆ ಹಣಕಾಸು ಹೊಂದಿಸಲಾರದ ಕುಟುಂಬಗಳಿಗೆ ಸರಕಾರ ಸಹಾಯಧನ ನೀಡಬೇಕು ಎಂದು ಅವರು ಹೇಳುತ್ತಾರೆ. ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಆರೋಗ್ಯ ಮತ್ತು ಶಿಕ್ಷಣದ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಮುಂದಿನ ಯೋಜನೆಯಾಗಿದೆ ಎಂದು ಅವರು ತಿಳಿಸುತ್ತಾರೆ.

Write A Comment