ಕರ್ನಾಟಕ

ಇಸ್ಕಾನ್ ಬಿಸಿಯೂಟ ಪ್ರಕರಣ: 35 ಮಕ್ಕಳು ಮತ್ತೆ ಅಸ್ವಸ್ಥ, ಆಸ್ಪತ್ರೆಗೆ ದಾಖಲು; ಸಚಿವರ ವಿರುದ್ಧ ಪೋಷಕರ ಆಕ್ರೋಶ

Pinterest LinkedIn Tumblr

000003B

ಬೆಂಗಳೂರು, ಸೆ.20: ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದ ಡಿಜೆ ಹಳ್ಳಿ ಸರಕಾರಿ ಉರ್ದು ಶಾಳೆಯ 35 ಮ್ಕಕಳ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಅವರನ್ನು ಮತ್ತೆ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರ ಬೆಳಗ್ಗೆ 5 ಮಕ್ಕಳು ಆಸ್ಪತ್ರಗೆ ದಾಖಲಾಗಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಒಟ್ಟು 35 ಮ್ಕಕಳಲ್ಲಿ ವಾಂತಿ, ತಲೆ ಸುತ್ತು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಕಿಮ್ಮನೆ ವಿರುದ್ಧ ಆಕ್ರೋಶ: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ ಅಸ್ವಸ್ಥರಾಗಲು ಕಾರಣವಾಗಿದ್ದ ಡಿ.ಜಿ.ಹಳ್ಳಿ ಶಾಲೆಗೆ ಶನಿವಾರ ಬೆಳಗ್ಗೆ ಭೇಟಿ ನೀಡಿದ್ದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸ್ಥಳೀಯರ ಆಕ್ರೋಶಕ್ಕೆ ತುತ್ತಾಗಬೇಕಾಯಿತು. ಶನಿವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ಸಚಿವರು ಶಾಲೆಗೆ ಭೇಟಿ ನೀಡಿದ್ದರು.

ಸಚಿವರ ಆಗಮನದ ಸುದ್ದಿ ತಿಳಿದ ತಕ್ಷಣ ಸ್ಥಳೀಯರು ಮತ್ತು ಪಾಲಕರು ಸ್ಥಳಕ್ಕೆ ಧಾವಿಸಿದರು. ಅರ್ಧಗಂಟೆಯಲ್ಲಿ ಸುಮಾರು ನೂರಾರು ಜನ ಆಗಮಿಸಿ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸುಮಾರು 15 ನಿಮಿಷಗಳ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಸಚಿವ ಕಿಮ್ಮನೆ ಶಿಕ್ಷಣಾಧಿಕಾರಿಗಳಿಂದ ಘಟನೆಯ ಸಂಪೂರ್ಣ ಮಾಹಿತಿ ಪಡೆದರು. ಶಾಲಾ ಕಾಂಪೌಂಡ್ ಎತ್ತರಿಸಲು ಕ್ರಮ ತೆಗೆದುಕೊಳ್ಳಲಾಗುವುದು, ಬಾಲಕ ಮತ್ತು ಬಾಲಕಿಯರಿಗೆ 15 ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು. ಶುಕ್ರವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದ ಸುಮಾರು 150 ಮ್ಕಕಳ ಆರೋಗ್ಯದಲ್ಲಿ ಏರುಪೇರಾಗಿದ್ದು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ವೇಳೆ ಮಾತನಾಡಿದ ಪಾಲಕರು, ನಿನ್ನೆ ಅವಘಡ ಸಂಭವಿಸಿದರೂ ಸರಕಾರ ಯಾವ ನೆರವು ನೀಡಲಿಲ್ಲ. ಮಕ್ಕಳನ್ನು ನಾವೇ ಆಸ್ಪತ್ರೆಗೆ ದಾಖಲಿಸಿದೆವು. ಶಾಲೆಯಲ್ಲಿ ಕುಡಿಯಲು ನೀರಿಲ್ಲ, ವಿದ್ಯಾರ್ಥಿನಿಯರಿಗೆ ಸಮರ್ಪಕ ಶೌಚಾಲಯವಿಲ್ಲ. ಸ್ವಚ್ಛತೆ ಮರೆಯಾಗಿದೆ ಎಂದು ಆರೋಪಿಸಿದರು. ಸರಕಾರ ಒಂದು ತಿಂಗಳಿನಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

Write A Comment