ಬೆಂಗಳೂರು, ಸೆ.19: ಇಸ್ಕಾನ್ ಸಂಸ್ಥೆಯ ಬಿಸಿಯೂಟವನ್ನು ಸೇವಿಸಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ. ಅಸ್ವಸ್ಥ ಮಕ್ಕಳನ್ನು ಕಾವಲಭೈರಸಂದ್ರದ ಡಾ. ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳೆಲ್ಲರೂ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಡಿ.ಜೆ. ಹಳ್ಳಿಯ ಸರಕಾರಿ ಉರ್ದು ಶಾಲೆಗೆ ಇಸ್ಕಾನ್ ಸಂಸ್ಥೆಯವರು ಶುಕ್ರವಾರ ಅಪರಾಹ್ಣ 12:30ರ ಸುಮಾರಿನಲ್ಲಿ 8 ಕಂಟೇನರ್ಗಳಲ್ಲಿ ಬಿಸಿ ಊಟವನ್ನು ತಂದಿದ್ದರು. ಊಟವನ್ನು ಸೇವಿಸಿದ ಬಳಿಕ ಅನೇಕ ಮಕ್ಕಳಿಗೆ ತಲೆಸುತ್ತಿ ಬಂದಂತಾಗಿ ವಾಂತಿ ಮಾಡತೊಡಗಿದರೆಂದು ಅಧಿಕೃತ ಮೂಲಗಳು ತಿಳಿಸಿವೆ. ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರುವುದೇ ಘಟನೆಗೆ ಕಾರಣವೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ತಕ್ಷಣ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಊಟವನ್ನು ಸೇವಿಸದಂತೆ ತಡೆ ಹಿಡಿದು, ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಡಾ.ಅಂಬೇಡ್ಕರ್ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದಾರೆ. ಇದರಿಂದ, ಎಲ್ಲ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಮಾಧ್ಯಮ ಗಳಿಂದ ತಿಳಿಯುತ್ತಿದ್ದಂತೆ ಪೋಷಕರು ಆಸ್ಪತ್ರೆಗೆ ದೌಡಾಯಿಸಿ, ವೈದ್ಯರು ಮಕ್ಕಳ ಬಗ್ಗೆ ಮಾಹಿತಿ ಕೊಡುತ್ತಿಲ್ಲ. ಹಾಗೂ ಉತ್ತಮ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿ ಆಸ್ಪತ್ರೆಯ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಇದೆ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್ ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿ, ಭಯಗ್ರಸ್ಥರಾಗದಂತೆ ಮನವಿ ಮಾಡಿಕೊಂಡರು. ಶಾಲಾಮಕ್ಕಳಿಗೆ ನೀಡಲಾದ ಆಹಾರದಲ್ಲಿ ಸತ್ತುಬಿದ್ದಿರುವ ಹಲ್ಲಿಯೊಂದು ಪತ್ತೆಯಾಗಿದೆಯೆಂದು ವೈದ್ಯರು ಮಾಹಿತಿ ನೀಡಿರುವುದಾಗಿ ಡಾ. ಅಂಬೇಡ್ಕರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿರುವ ಪೋಷಕರು ಘಟನೆಗೆ ಶಾಲಾ ಮುಖ್ಯಸ್ಥರೇ ನೇರ ಹೊಣೆ ಎಂದು ದೂರಿದ್ದಾರೆ. ಆದರೆ, ಈ ಶಾಲಾ ಮಕ್ಕಳಿಗೆ ಇಸ್ಕಾನ್ ಸಂಸ್ಥೆ ಬಿಸಿಯೂಟ ಪೂರೈಕೆ ಮಾಡುತ್ತಿದ್ದು, ಊಟದಲ್ಲಿ ಹಲ್ಲಿ ಬಿದ್ದಿರುವುದು ಘಟನೆಗೆ ಕಾರಣ ಎನ್ನಲಾಗುತ್ತಿದೆ.
ಮಕ್ಕಳ ಆರೋಗ್ಯ ಸುಧಾರಿಸುತ್ತಿದೆ. ಆರೋಗ್ಯ ಸುಧಾರಿಸಿದವರು ಈಗಾಗಲೆ ಮನೆಗಳಿಗೆ ತೆರಳಿದ್ದಾರೆ. ಡಾ.ಅಂಬೇಡ್ಕರ್ ಆಸ್ಪತ್ರೆಯ ವೈದ್ಯರು ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಪೋಷಕರು ಭಯಗ್ರಸ್ಥರಾಗದೆ ಮಕ್ಕಳಲ್ಲಿ ಧೈರ್ಯ ತುಂಬಬೇಕು. ಇಸ್ಕಾನ್ ಸಂಸ್ಥೆಯ ಬಿಸಿಯೂಟದ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಆರೋಗ್ಯ ಇಲಾಖೆಯ ಮಂತ್ರಿಯಾಗಿದ್ದರಿಂದ ಮಕ್ಕಳ ಆರೋಗ್ಯದ ಕಡೆಗೆ ಗಮನ ಕೊಡುತ್ತೇನೆ. – ಯು.ಟಿ.ಖಾದರ್, ಸಚಿವ