ಕರ್ನಾಟಕ

ಕಳ್ಳರತ್ತ ಸೆಕ್ಯುರಿಟಿ ಗಾರ್ಡ್ ಗುಂಡು

Pinterest LinkedIn Tumblr

bullets

ಬೆಂಗಳೂರು: ಹೆಬ್ಬಗೋಡಿ ಬಳಿಯ ಚೊಕ್ಕಸಂದ್ರದ ನಿರ್ಮಾಣ ಹಂತದ ಬಡಾವಣೆಗೆ ಕಟ್ಟಡ ಸಾಮಾಗ್ರಿ­ಗ­ಳನ್ನು ಕದಿಯಲು ಬಂದಿದ್ದ ದುಷ್ಕರ್ಮಿ­ಗಳತ್ತ ಗುಂಡು ಹಾರಿಸಿದ ಸೆಕ್ಯರಿಟಿ ಗಾರ್ಡ್‌ಗಳು, ಇಬ್ಬರು ಆರೋಪಿ­ಗಳನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಳೆದ 15 ದಿನಗಳಲ್ಲಿ ಇದೇ ಬಡಾ­ವಣೆಯಲ್ಲಿ ನಡೆದ ಮೂರನೇ ಪ್ರಕರಣ ಇದಾಗಿದ್ದು, ಉತ್ತಪ್ಪ ದೊರೈ ಮತ್ತು ಸಂತೋಷ್ ಎಂಬ ಸೆಕ್ಯುರಿಟಿ ಗಾರ್ಡ್‌ಗಳೇ ಮೂರು ಬಾರಿಯೂ ಗುಂಡು ಹಾರಿಸಿ ಕಳ್ಳ­ರನ್ನು ಹಿಡಿಯುವಲ್ಲಿ ಯಶಸ್ವಿಯಾ­ಗಿರುವುದು ವಿಶೇಷ.

ಗುರುವಾರ ಬೆಳಗಿನ ಜಾವ 3.30ಕ್ಕೆ ಸರಕು ಸಾಗಣೆ ವಾಹನ­ದಲ್ಲಿ ಬಡಾವಣೆಗೆ ನುಗ್ಗಿದ ಎಂಟು ಮಂದಿ ದುಷ್ಕರ್ಮಿಗಳು, ಮೊದಲು ಇಲ್ಲಿನ ಕಾರ್ಮಿಕರನ್ನು ಸುತ್ತುವರಿದು ಹಣ–ಮೊಬೈಲ್‌ಗಳನ್ನು ಕಿತ್ತು­ ಕೊಂಡಿ­ದ್ದಾರೆ. ನಂತರ ಸರಕು ಸಾಗಣೆ ವಾಹನಕ್ಕೆ ಕಬ್ಬಿಣ ಹಾಗೂ ಸಿಮೆಂಟ್ ಶೀಟ್‌ಗಳನ್ನು ತುಂಬಿ­ಕೊಂಡಿ­ದ್ದಾರೆ. ಈ ವೇಳೆ ಸಂತೋಷ್‌ ಜತೆ ಸ್ಥಳಕ್ಕೆ ಬಂದ ಉತ್ತಪ್ಪ, ಅವರನ್ನು ಬೆದರಿಸಲು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ.

ಈ ವೇಳೆ ದುಷ್ಕರ್ಮಿಗಳು, ಸೆಕ್ಯುರಿಟಿ ಗಾರ್ಡ್‌­ಗಳತ್ತ ಕಲ್ಲುಗಳನ್ನು ತೂರಲು ಆರಂಭಿಸಿದ್ದಾರೆ. ಇದರಿಂದ ಕೆರಳಿದ ಉತ್ತಪ್ಪ, ನೇರವಾಗಿ ಗುಂಪಿನ ಕಡೆಗೆ ಆರು ಸುತ್ತು ಗುಂಡು ಹಾರಿಸಿದ್ದಾರೆ. ಆಗ ಭೀತಿಗೆ ಒಳಗಾದ ಕಳ್ಳರು, ಸ್ಥಳದಲ್ಲೇ ವಾಹನ ಬಿಟ್ಟು ಓಡಲಾರಂಭಿಸಿದ್ದಾರೆ. ಈ ಹಂತದಲ್ಲಿ ಅವರನ್ನು ಬೆನ್ನಟ್ಟಿದ ಸೆಕ್ಯುರಿಟಿ ಗಾರ್ಡ್‌ಗಳು, ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

‘ಹೆಬ್ಬಗೋಡಿ ಸಮೀಪದ ಹೊಸ ರಸ್ತೆ ನಿವಾಸಿ­ಗಳಾದ ಚಿನ್ನಸ್ವಾಮಿ (20) ಮತ್ತು ನರಸಿಂಹ (21) ಎಂಬುವರನ್ನು ಸೆಕ್ಯುರಿಟಿ ಗಾರ್ಡ್‌ಗಳು ಹಿಡಿದು ಕೊಟ್ಟಿದ್ದಾರೆ. ಸರಕು ಸಾಗಣೆ ವಾಹನ­ವನ್ನು ಸಹ ಜಪ್ತಿ ಮಾಡಲಾಗಿದೆ. ಅದು ತಮಿಳು­ನಾಡು ನೋಂದಣಿ ಸಂಖ್ಯೆ ಹೊಂದಿದ್ದು, ಮಾಲೀಕರ ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಈ ಬಡಾವಣೆಯು ಐದು ಎಕರೆ ವಿಸ್ತೀರ್ಣ­ದಲ್ಲಿದೆ. ಇಲ್ಲಿ ಕೇರಳ ಮೂಲದ ರಾಜೇಂದ್ರ ಎಂಬು­ವರು ಕ್ಲಬ್‌ ನಿರ್ಮಿಸುತ್ತಿದ್ದಾರೆ. ಮೂರ್ನಾಲ್ಕು ವರ್ಷಗಳಿಂದ ಅದರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಭಾಗದಲ್ಲಿ ಕಳವು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹೆಚ್ಚಿನ ಸಿಬ್ಬಂದಿಯನ್ನು ಗಸ್ತಿಗೆ ನಿಯೋಜಿಸಲಾಗುವುದು’ ಎಂದು ಬೆಂಗಳೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿ­ಕಾರಿ ರಮೇಶ್‌ ಬಾನೋತ್‌ ತಿಳಿಸಿದ್ದಾರೆ.

ಘಟನೆ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಾವಣೆಯ ‘ಸಿಂಗಂ’ ಉತ್ತಪ್ಪ
ಮೂಲತಃ ಕೊಡಗಿನವರಾದ ಉತ್ತಪ್ಪ ದೊರೈ, ಐದು ವರ್ಷಗಳ ಹಿಂದೆ ನಗರಕ್ಕೆ ಬಂದು ನಾರಾ­ಯಣ ಗುರು ಸಮಿತಿ ಬಡಾವಣೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದಾರೆ. 15 ದಿನಗಳಿಂದೀಚಿಗೆ ಅವರು ಮೂರು ಬಾರಿ ಕಳ್ಳತನ ತಪ್ಪಿಸಿದ್ದು, ಆರೋಪಿ­ಗಳನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಮೂಲಕ ಬಡಾವಣೆಯಲ್ಲಿ ‘ಸಿಂಗಂ’ ಎಂಬ ಹೆಸರು ಸಂಪಾದಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಉತ್ತಪ್ಪ, ‘ಈ ಪ್ರದೇಶದಲ್ಲಿ ಎರಡು ಬಡಾವಣೆ­ಗಳು ನಿರ್ಮಾಣವಾಗುತ್ತಿವೆ. ಸಂಜೆ ಆರು ಗಂಟೆ ನಂತರ ಈ ಸ್ಥಳದಲ್ಲಿ ಜನರ ಓಡಾಟ ಕಡಿಮೆ ಇರುತ್ತದೆ. ಹೀಗಾಗಿ ಕತ್ತಲಾಗುತ್ತಿದ್ದಂತೆ ಕಬ್ಬಿಣ ಕದಿಯಲು ಕಳ್ಳರು ಇಲ್ಲಿಗೆ ಬರುತ್ತಾರೆ. ಪೊಲೀ­ಸರು ಈ ಭಾಗದಲ್ಲಿ ಗಸ್ತು ತಿರುಗದ ಕಾರಣ, ರಾತ್ರಿಯಿಡೀ ಎಚ್ಚರ ವಹಿಸಬೇಕಾಗುತ್ತದೆ. ಸೆ.1 ರಂದು ಹೊಸದಾಗಿ ಕೆಲಸಕ್ಕೆ ಬಂದ ಸಂತೋಷ್, ಕಳ್ಳರನ್ನು ಹಿಡಿಯುಲು ನೆರವಾದರು’ ಎಂದರು.

‘ಆತ್ಮರಕ್ಷಣೆ ಕಾರಣದಿಂದ ಪರವಾನಗಿ ಪಡೆದು­ಕೊಂಡು ಜೋಡಿ ನಳಿಕೆಯ ಬಂದೂಕು ಇಟ್ಟು­ಕೊಂಡಿದ್ದೆ. ಬಂದೂಕು ಇರುವ ಕಾರಣಕ್ಕೆ ಬಡಾವಣೆ­ಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಸಿಕ್ಕಿತು. ಐದು ವರ್ಷಗಳಲ್ಲಿ ಆರು ಬಾರಿ ಕಳ್ಳರತ್ತ ಗುಂಡು ಹಾರಿಸಿದ್ದೇನೆ’ ಎಂದರು.

ಮೂರನೇ ಪ್ರಕರಣ
ಸೆ.2ರಂದು ದುಷ್ಕರ್ಮಿಗಳ ತಂಡ ಇದೇ ಸ್ಥಳಕ್ಕೆ ಕಬ್ಬಿಣದ ಸರಕುಗಳನ್ನು ಕಳವು ಮಾಡಲು ಬಂದಿತ್ತು. ಆಗ ಉತ್ತಪ್ಪ ಅವರು ಗುಂಡು ಹಾರಿಸಿ ಕಿಶೋರ್ ಎಂಬಾತನನ್ನು ಪೊಲೀಸರಿಗೆ ಹಿಡಿದು­ಕೊಟ್ಟಿದ್ದರು.

ಸೆ.14ರ ನಸುಕಿನಲ್ಲಿ ಸಹ ಸರಕು ಸಾಗಣೆ ವಾಹನ­ದೊಂದಿಗೆ ಕಳ್ಳರು ಬಡಾವಣೆಗೆ ನುಗ್ಗಿ­ದ್ದರು. ಆಗ ಉತ್ತಪ್ಪ ಹಾರಿಸಿದ ಗುಂಡು ವಾಹನದ ಚಕ್ರಕ್ಕೆ ತಗುಲಿ ಪಂಕ್ಚರ್‌ ಆಗಿತ್ತು. ನಂತರ ಪರಾರಿ­ಯಾಗಲೆತ್ನಿಸಿದ ಕಳ್ಳರನ್ನು ಬೆನ್ನಟ್ಟಿದ ಸೆಕ್ಯುರಿಟಿ ಗಾರ್ಡ್‌ಗಳು, ಶಿವರೆಡ್ಡಿ ಮತ್ತು ಮಂಜುನಾಥ ಎಂಬುವರನ್ನು ಹಿಡಿದಿದ್ದರು.

Write A Comment