ಕರ್ನಾಟಕ

ರೈತರ ವಿರುದ್ಧದ ಮೊಕದ್ದಮೆ ಹಿಂಪಡೆಯಲು ಸಿಎಂ ಜೊತೆ ಚರ್ಚೆ: ಜಾರ್ಜ್

Pinterest LinkedIn Tumblr

GEORGE

ಬೆಂಗಳೂರು, ಸೆ.18: ರಾಜ್ಯದಲ್ಲಿ ವಿವಿಧ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ರೈತರ ವಿರುದ್ಧ ಹೂಡಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯುವ ಸಂಬಂಧ ಮುಖ್ಯ ಮಂತ್ರಿಯೊಂದಿಗೆ ಚರ್ಚಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಗುರುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರ ಕುಂದು, ಕೊರತೆಗಳನ್ನು ಆಲಿಸಲು ಆಗಮಿಸಿದ್ದ ವೇಳೆ ಕೆಪಿಸಿಸಿ ಕಿಸಾನ್ ಖೇತ್ ಮ ಜ್ದೂರ್ ಕಾಂಗ್ರೆಸ್‌ನ ಹಿರಿಯ ಉಪಾಧ್ಯಕ್ಷ ಡಾ. ಆನಂದ್‌ಕುಮಾರ್ ನೇತೃತ್ವದ ನಿಯೋಗ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ರೈತರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳ ಜಿಲ್ಲಾವಾರು ವಿವರವನ್ನು ತರಿಸಿಕೊಂಡು, ಅವುಗಳನ್ನು ಯಾವ ರೀತಿಯಲ್ಲಿ ಹಿಂಪಡೆಯಲು ಸಾಧ್ಯವಿದೆ ಎಂಬುದರ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಯಾವುದೆ ಸಂಘಟನೆಗಳಿಗೆ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ. ನೈತಿಕ ಪೊಲೀಸ್ ಗಿರಿ ಮಾಡುವ ಸಂಘಟನೆಗಳನ್ನು ನಿಷೇಧ ಮಾಡುವ ಚಿಂತನೆ ನಡೆಯುತ್ತಿದೆ. ಇಂತಹ ಚಟುವಟಿಕೆಗಳನ್ನು ಮಾಡುವ ಸಂಘಟನೆಗಳ ವಿರುದ್ಧ ಈಗಾಗಲೇ ಗೂಂಡಾ ಕಾಯ್ಡೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

ಸನ್ನಡತೆ ಆಧಾರದಲ್ಲಿ ಕೈದಿಗಳನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಸರಕಾರ ಮತ್ತು ರಾಜ್ಯಪಾಲರ ನಡುವೆ ಯಾವುದೇ ಸಂಘರ್ಷವಿಲ್ಲ. ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ಕೆಲಸ ಸರಕಾರ ಮಾಡಿಲ್ಲ ಎಂದು ಜಾರ್ಜ್ ಸ್ಪಷ್ಟಪಡಿಸಿದರು.

ಸಂವಿಧಾನದ 161ನೆ ವಿಧಿ ಪ್ರಕಾರ ರಾಜ್ಯಪಾಲರು ಕೈದಿಗಳನ್ನು ಬಿಡುಗಡೆ ಮಾಡಲು ಅವಕಾಶವಿದೆ. ಅದೇ ರೀತಿ ಸಂವಿಧಾನದ 432ನೆ ವಿಧಿ ಪ್ರಕಾರ ರಾಜ್ಯ ಸರಕಾರಕ್ಕೂ ಕೈದಿಗಳನ್ನು ಬಿಡುಗಡೆ ಮಾಡುವ ಅಧಿಕಾರವಿದೆ. ರಾಜ್ಯದಲ್ಲಿ ಸನ್ನಡತೆ ಆಧಾರದ ಮೇಲೆ 250 ರಿಂದ 300 ಕೈದಿಗಳನ್ನು ಬಿಡುಗಡೆ ಮಾಡಲು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಅಖಂಡ ಕರ್ನಾಟಕಕ್ಕೆ ಧಕ್ಕೆಯಿಲ್ಲ: ಮಾಜಿ ಸಚಿವ ಉಮೇಶ್ ಕತ್ತಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ವನ್ನಾಗಿ ಮಾಡಬೇಕು ಎಂದು ಹೇಳಿಕೆ ನೀಡಿದ ಕೂಡಲೆ ಅದು ಕಾರ್ಯಗತ ಆಗುವುದಿಲ್ಲ. ಬಿಜೆಪಿಯವರು ಉಮೇಶ್ ಕತ್ತಿಗೆ ಬುದ್ಧಿವಾದ ಹೇಳಬೇಕು ಎಂದು ಅವರು ತಿಳಿಸಿದರು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಯಾರೂ ಕಾನೂನು ಸುವ್ಯವಸ್ಥೆಗೆ ಭಂಗ ತರಲು ಯತ್ನಿಸುತ್ತಾರೊ ಅವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಬೆಳಗಾವಿಯಲ್ಲಿ ದಾಂಧಲೆ ನಡೆಸಿದ ಎಂಇಎಸ್ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಜಾರ್ಜ್ ಹೇಳಿದರು.

ಪ್ರತ್ಯೇಕ ರಾಜ್ಯದ ಬಗ್ಗೆ ಬಾವುಟ ಹಾರಿಸುವುದು, ಫಲಕ ಅಳವಡಿಸುದನ್ನು ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರಜೈನ್, ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Write A Comment