ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವ ಸೆ.26ರಿಂದ ಆರಂಭಗೊಂಡು ಅ.6ರವರೆಗೆ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಲಿದೆ ಎಂದು ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ತಿಳಿಸಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ದಸರಾ ಮಹೋತ್ಸವದ ಅಂಗವಾಗಿ ಪ್ರತಿದಿನ ಮಧ್ಯಾಹ್ನ 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ, 7.00ರಿಂದ 8.30ರವರೆಗೆ ಭಜನಾ ಕಾರ್ಯಕ್ರಮ, 8.30ರಿಂದ ಶ್ರೀ ದೇವಿ ಪುಷ್ಪಾಲಂಕಾರ ಪೂಜೆ, ಅನ್ನದಾನ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇವರ ಬಲಿ ಉತ್ಸವಗಳು ನಡೆಯಲಿದೆ ಎಂದರು.
ಕ್ಷೇತ್ರದ ಕಾರ್ಯದರ್ಶಿ ಮಾಧವ ಸುವರ್ಣ ಮಾತನಾಡಿ, ಸೆ.26ರಂದು ಬೆಳಗ್ಗೆ 9.30ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ ಧರ್ನುಲಗ್ನ, ಕಲಶ ಪತ್ರಿಷ್ಠೆ, ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠೆ ನಡೆಯಲಿದೆ. ಈ ಸಂದರ್ಭ ದೀಪ ಬೆಳಗುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಕೇಂದ್ರದ ಮಾಜಿ ವಿತ್ತ ಸಚಿವ, ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಚಾಲನೆ ನೀಡಲಿದ್ದಾರೆ. ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ಮತ್ತು ಅಮೈ ಮಹಾಲಿಂಗ ನಾಯ್ಕ ಹಾಗೂ ಶಾಸಕರುಗಳು, ಗಣ್ಯರು ಉಪಸ್ಥಿತರಿರುವರು ಎಂದರು.
ಸೆ. 27ರಂದು ಬೆಳಗ್ಗೆ ಗಂಟೆ 10.00ಕ್ಕೆ ದುರ್ಗಾಹೋಮ, ಸೆ. 28ರಂದು ಬೆಳಗ್ಗೆ ಗಂಟೆ 10.00ಕ್ಕೆ ಆರ್ಯ ದುರ್ಗಾಹೋಮ, ಸೆ. 29ರಂದು ಬೆಳಗ್ಗೆ ಗಂಟೆ 10.00ಕ್ಕೆ ಅಂಬಿಕಾ ದುರ್ಗಾ ಹೋಮ, ಸೆ.30ರಂದು ಬೆಳಗ್ಗೆ ಗಂಟೆ 10.00ಕ್ಕೆ ಭಗವತೀ ದುರ್ಗಾ ಹೋಮ (ಲಲಿತಾ ಪಂಚಮಿ), ಸಾಮೂಹಿಕ ಚಂಡಿಕಾ ಹೋಮ, ಅ. 1ರಂದು ಬೆಳಗ್ಗೆ ಗಂಟೆ 10.00ಕ್ಕೆ ಕುಮಾರಿ ದುರ್ಗಾ ಹೋಮ, ಅ. 2ರಂದು ಬೆಳಗ್ಗೆ 10.00ಕ್ಕೆ ಮಹಿಷಮರ್ದಿನಿ ದುರ್ಗಾ ಹೋಮ, ಅ.3ರಂದು ಬೆಳಗ್ಗೆ ಗಂಟೆ 10.00ಕ್ಕೆ ಚಂಡಿಕಾಹೋಮ, ಹಗಲೋತ್ಸವ, ದುರ್ಗಾಷ್ಟಮಿ, ಅ.4ರಂದು ಬೆಳಗ್ಗೆ ಗಂಟೆ 10.00ರಿಂದ ಸರಸ್ವತಿ ದುರ್ಗಾಹೋಮ, 11.30ಕ್ಕೆ ಶತಸೀಯಾಳಾಭಿಷೇಕ, ಶಿವಪೂಜೆ (ಮಹಾನವಮಿ), ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಭವ್ಯ ಶೋಭಾಯಾತ್ರೆ: ಅ.5 ರಂದು ಬೆಳಗ್ಗೆ ಗಂಟೆ 10.00ರಿಂದ ವಾಗೀಶ್ವರಿ ದುರ್ಗಾಹೋಮ, 12.30ಕ್ಕೆ ಶಿವಪೂಜೆ, ಸಂಜೆ 4.00ರಿಂದ ಶ್ರೀ ಶಾರದ ಮಾತೆಯ ಶೋಭಾಯಾತ್ರೆ ನಡೆಯಲಿದೆ. ಅ.6ರಂದು ಪ್ರಾತಃಕಾಲ 4.00ರಿಂದ ಪೂಜೆ ಬಲಿ, ಮಂಟಪ ಬಲಿ, ಪ್ರಾತಃಕಾಲ ಮಂಟಪ ಪೂಜೆ ಬಳಿಕ ಶ್ರೀ ಶಾರದ ವಿಸರ್ಜನೆ, ಅವಭೃತ ಸ್ನಾನ. ರಾತ್ರಿ 7.00ರಿಂದ 8.00ರತನಕ ಭಜನಾ ಕಾರ್ಯಕ್ರಮ, 8.00ರಿಂದ ಗುರುಪೂಜೆ ನಡೆಯಲಿದೆ.
ಅ.5ರಂದು 4.00ಕ್ಕೆ ಸರಿಯಾಗಿ ಕುದ್ರೋಳಿ ಕ್ಷೇತ್ರದಿಂದ ಅಭೂತಪೂರ್ವವಾದ ಮಂಗಳೂರು ದಸರಾ ಬೃಹತ್ ಶೋಭಾಯಾತ್ರೆ ಆರಂಭವಾಗಲಿದ್ದು, ಈ ಮೆರವಣಿಗೆಗೆ ರಾಜ್ಯದ ನಾನಾ ಕಡೆಯಿಂದ ಆಗಮಿಸಿ ಕಲಾತಂಡಗಳು, ಹುಲಿವೇಷ ಹಾಗೂ ಇತರ ವೇಷದ ಟ್ಯಾಬ್ಲೋಗಳು, ವೇಷಭೂಷಣಗಳು, ಚೆಂಡೆ ತಂಡಗಳು ಮೆರುಗು ನೀಡಲಿದೆ ಎಂದು ಮಾಧವ ಸುವರ್ಣ ಅವರು ಕಾರ್ಯಕ್ರಮದ ವಿವರ ನೀಡಿದರು.
500ಕ್ಕೂ ಅಧಿಕ ವಾಹನ ಪಾರ್ಕಿಂಗ್ :
ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ( ಅಡ್ವಕೇಟ್) ಅವರು ಮಾತನಾಡಿ, ದಸರಾ ಮಹೋತ್ಸವ ಮೆರವಣಿಗೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಶ್ರೀ ಕ್ಷೇತ್ರದ ಪಾರ್ಕಿಂಗ್ ವ್ಯವಸ್ಥೆ ಮಾತ್ರವಲ್ಲದೆ ಒಟ್ಟು 7ಕಡೆಗಳಲ್ಲಿ 500ಕ್ಕೂ ಅಧಿಕ ವಾಹನಗಳಿಗೆ ಪಾರ್ಕಿಂಗ್ ಮಾಡುವಷ್ಟು ವ್ಯವಸ್ಥೆಯನ್ನು ಕ್ಷೇತ್ರದ ಭಕ್ತಾದಿಗಳಿಂದ ಸಹಕಾರದಿಂದ ಮಾಡಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗೆ ಆಹ್ವಾನ:
ಕುದ್ರೋಳಿ ದಸರಾ ಮೆರವಣಿಗೆ ಉದ್ಘಾಟನೆಗೆ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಆಶಯದಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗಿದ್ದು, ಅವರು ಆಗಮಿಸುವ ನಿರೀಕ್ಷೆಯಿದೆ ಎಂದು ಪದ್ಮರಾಜ್ ಆರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಕ್ಷೇತ್ರದ ಉಪಾಧ್ಯಕ್ಷೆ ಊರ್ಮಿಳ ರಮೇಶ್, ಟ್ರಸ್ಟಿಗಳಾದ ರವಿಶಂಕರ್ ಮಿಜಾರ್, ಕೆ. ಮಹೇಶ್ಚಂದ್ರ, ಎಂ. ಶೇಖರ್ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷರಾದ ಅನಸೂಯ ಬಿ.ಟಿ. ಸಾಲಿಯಾನ್, ಉಪಾಧ್ಯಕ್ಷರಾದ ಬಿ.ಜಿ. ಸುವರ್ಣ, ಸದಸ್ಯರಾದ ಚಿತ್ತರಂಜನ್ ಗರೋಡಿ, ರಮಾನಾಥ ಕಾರಂದೂರು, ಜತಿನ್ ಅತ್ತಾವರ, ಗೌರವಿ ಪಿ.ಕೆ., ಕೀಶೋರ್ ದಂಡೆಕೇರಿ, ಲೀಲಾಕ್ಷ ಕರ್ಕೇರಾ ಉಪಸ್ಥಿತರಿದ್ದರು.
Comments are closed.