ಕರಾವಳಿ

ಮಂಗಳೂರಿನಲ್ಲಿಂದು ರೂ. 3,800 ಕೋಟಿ ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ಮೋದಿ

Pinterest LinkedIn Tumblr

ಮಂಗಳೂರು, ಸೆ.2 : ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಸೆ.2ರ ಶುಕ್ರವಾರ ಮಂಗಳೂರಿಗೆ ಭೇಟಿ ನೀಡಿ ಬಂದರು, ಒಳನಾಡು ಜಲಸಾರಿಗೆಗೆ ಸಂಬಂಧಿಸಿದ ಎಂಟು ಯೋಜನೆಗಳ ಲೋಕಾರ್ಪಣೆ, ಶಿಲನ್ಯಾಸ ನೆರವೇರಿಸಿದರು.

ನಗರದ ಕೂಳೂರು ಸಮೀಪದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು 3,800 ಕೋಟಿ ರೂ.ಗಳ ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದರು.

ಪ್ರಧಾನಿಯವರು ಇಂದು ಲೋಕಾರ್ಪಣೆ ಮಾಡಿದ ಯೋಜನೆಗಳಲ್ಲಿ, ಕಂಟೇನರ್ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14 ರ ಯಾಂತ್ರೀಕರಣ (ರೂ. 281 ಕೋಟಿ), ಬಿಎಸ್ VI ಉನ್ನತೀಕರಣ ಯೋಜನೆ (ರೂ. 1829 ಕೋಟಿ), ಸಮುದ್ರ ನೀರಿನ ನಿರ್ಲವಣೀಕರಣ ಘಟಕ (ರೂ. 677 ಕೋಟಿ) ಗಳು ಸೇರಿವೆ.

ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ, ಎನ್ಎಂಪಿಟಿಯಲ್ಲಿ ಸಮಗ್ರ ಎಲ್ಪಿಜಿ ಹಾಗೂ ಬೃಹತ್ ಪಿಓಎಲ್ ಸೌಲಭ್ಯ (ಅಂದಾಜು ವೆಚ್ಚ ರೂ. 500 ಕೋಟಿ), ಶೇಖರಣಾ ಟ್ಯಾಂಕ್ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ (ರೂ. 100 ಕೋಟಿ), ಬಿಟುಮಿನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ (ರೂ. 100 ಕೋಟಿ) ಹಾಗೂ ಬಿಟುಮಿನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ (ರೂ. 100 ಕೋಟಿ) ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ಜೊತೆಗೆ, ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕಾ ಬಂದರು ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆಯನ್ನು ಮಾಡಲಾಯಿತು. ಈ ಎಲ್ಲಾ ಕಾರ್ಯಕ್ರಮವನ್ನು ಪ್ರಧಾನಿಯವರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಒಂದೇ ಸ್ಥಳದಲ್ಲಿ ರಿಮೋಟ್ ಬಟನ್ ಒತ್ತುವ ಮೂಲಕ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿ. ಎಂ. ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ, ಬಂದರು, ಹಡಗು ಮತ್ತು ಜಲಸಾರಿಗೆ ಹಾಗೂ ಆಯುಷ್ ಸಚಿವ ಸರ್ಬಾನಂದ್ ಸೋನೋವಾಲ್, ಇಂಧನ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಬಂದರು, ಹಡಗು ಮತ್ತು ಜಲಸಾರಿಗೆ ರಾಜ್ಯ ಸಚಿವರಾದ ಶ್ರೀಪಾದ್ ಯೆಸ್ಸೋ ನಾಯಕ್ ಹಾಗೂ ಶಂತನು ಠಾಕೂರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಮಂಗಳೂರು ಮೇಯರ್ ಹಾಗೂ ಪಕ್ಷದ ಪ್ರಮುಖರು ಭಾಗವಹಿಸಿದ್ದರು.

Comments are closed.