ಕರಾವಳಿ

ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಿರುವ ಅನಧಿಕೃತ ಗೂಡಂಗಡಿ ತೆರವಿಗೆ ಪುರಸಭೆಗೆ ಮನವಿ

Pinterest LinkedIn Tumblr

ಕುಂದಾಪುರ: ಕುಂದಾಪುರ ಶಾಸ್ತ್ರಿ ಸರ್ಕಲ್ ನಲ್ಲಿ ರಾತ್ರೋರಾತ್ರಿ ಅಕ್ರಮವಾಗಿ ಗೂಡಂಗಡಿಗಳನ್ನು ಇಟ್ಟಿದ್ದು, ಇದನ್ನು ಕೂಡಲೇ ತೆರವುಗೊಳಿಸಬೇಕೆಂದು ಕಾಂಗ್ರೆಸ್ ಬೆಂಬಲಿತ ಪುರಸಭಾ ಸದಸ್ಯರು ಪುರಸಭಾ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಸುಂದರ ಕುಂದಾಪುರದ ಪರಿಕಲ್ಪನೆಯಲ್ಲಿ ಶಾಸ್ತ್ರೀ ಸರ್ಕಲ್ ಅನ್ನು ಸುಂದರವಾಗಿ ನಿರ್ಮಿಸಿದ್ದು, ಕುಂದಾಪುರದ ನಗರಕ್ಕೆ ಶೋಭೆ ತರುವಂತದ್ದಾಗಿದೆ. ಅದಕ್ಕಾಗಿಯೇ ಈ ಹಿಂದೆ ಬೇಕಾಬಿಟ್ಟಿಯಾಗಿ ಇಟ್ಟಿರುವ ಗೂಡಾಂಗಡಿಗಳನ್ನು ತೆರವುಗೊಳಿಸಿ ಬೇಡಿಕೆಯ ಪ್ರಕಾರ 13 ಗೂಡಂಗಡಿಗಳನ್ನು ನಿರ್ಮಿಸಿ, ವ್ಯಾಪಾರ ಮಾಡಲು ಅನುವು ಮಾಡಿಕೊಡಲು ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಪುರಸಭೆಯ ನಿಯಮವನ್ನು ಗಾಳಿಗೆ ತೂರಿ ಗೂಡಾಂಗಡಿಗಳನ್ನು ಇಟ್ಟಿರುವುದು ಕಾನೂನು ಬಾಹಿರವಾಗಿದೆ.

ಕೂಡಲೇ ಅನಧಿಕೃತವಾದ ಗೂಡಂಗಡಿಯನ್ನು ತೆರವುಗೊಳಿಸಬೇಕು. ಈಗಾಗಲೇ ಅಕ್ರಮ ಗೂಡಾಂಗಡಿಗಳನ್ನು ತೆರವುಗೊಳಿಸಿರುವ ಪುರಸಭೆ ಈ ಗೂಡಂಗಡಿಯನ್ನು ಇಟ್ಟಾಗ ಕಣ್ಣಿಗೆ ಕಂಡರೂ ಕಾಣದಂತೆ ಜಾಣ ಕುರುಡುತನ ತೋರಿಸಿರುವುದು ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ.
ಒಂದು ವೇಳೆ ಅಕ್ರಮವಾಗಿ ಇಟ್ಟಿರುವ ಗೂಡಂಗಡಿಯನ್ನು ತೆರವುಗೊಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಅಲ್ಲಲ್ಲಿ ಗೂಡಂಗಡಿಗಳು ಎದ್ದಲ್ಲಿ ನೀವೇ ಸಂಪೂರ್ಣ ಜವಾಬ್ದಾರಿಯಾಗಿರುತ್ತೀರಿ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂದರ್ಭ ಕುಂದಾಪುರ ಪುರಸಭಾ ಸದಸ್ಯರುಗಳಾದ ಪಿ.ದೇವಕಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಕೆ.ಜಿ.ನಿತ್ಯಾನಂದ, ಶ್ರೀಧರ ಶೇರುಗಾರ್, ಪ್ರಭಾವತಿ ಶೆಟ್ಟಿ, ಅಬ್ಬು ಮಹಮ್ಮದ್, ಅಶ್ಪಾಕ್ ಮಹಮ್ಮದ್, ಲಕ್ಷ್ಮಿ ಪೂಜಾರಿ ಉಪಸ್ಥಿತರಿದ್ದರು.

Comments are closed.