ಕರಾವಳಿ

ಮಂಗಳೂರು ವಿವಿಯ ಎಲ್ಲಾ ಪದವಿ ಪರೀಕ್ಷೆಗಳು ತಾತ್ಕಾಲಿಕವಾಗಿ ರದ್ದು: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

Pinterest LinkedIn Tumblr

ಮಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟು ಸೋಮವಾರವಷ್ಟೇ ಆರಂಭವಾಗಿದ್ದ ಮಂಗಳೂರು ವಿಶ್ವಾವಿದ್ಯಾನಿಲಯದಲ್ಲಿ ನಡೆಯುತ್ತಿರುವ ಎಲ್ಲಾ ಪದವಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ ಹೆಚ್ಚಿನ ವಿದ್ಯಾರ್ಥಿಗಳು ಹೊರ ರಾಜ್ಯದವರಾಗಿದ್ದಾರೆ. ಗಡಿ ಭಾಗದಲ್ಲಿ ಇದೀಗ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ಮುಂದಿನ ಆದೇಶದ ತನಕ ರದ್ದುಕೊಳಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಅಂತರ್ ಜಿಲ್ಲೆಯಾದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಿಂದ ಆಗಮಿಸುತ್ತಿದ್ದು, ನೆರೆಯ ರಾಜ್ಯ / ಜಿಲ್ಲೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಯಾಣಿಕರ ಓಡಾಟದಿಂದಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ಹರಡುವ ಸಾಧ್ಯತೆಗಳಿವೆ. ಸಂಭಾವ್ಯ ಅಪಾಯವನ್ನು ತಪ್ಪಿಸಲು ಗಡಿಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕೆಂದು ಸರ್ಕಾರ ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಅಂತರ್ ರಾಜ್ಯ / ಜಿಲ್ಲೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ವಿದ್ಯಾಭ್ಯಾನಕ್ಕಾಗಿ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಕೂಡಾ ಅನಾನುಕೂಲವಾಗುವ ಸಾಧ್ಯತೆ ಇರುತ್ತದೆ.

ಪ್ರಸ್ತುತ ಸನ್ನಿವೇಶವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಹಾಗೂ ಯಾವುದೇ ವಿನಾಯಿತಿಯನ್ನು ನೀಡಲು ಅವಕಾವಿಲ್ಲದಿರುವುದರಿಂದ, ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಪ್ರಸ್ತುತ ನಡೆಯುತ್ತಿರುವ ಎಲ್ಲಾ ಪದವಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಆದೇಶ ನೀಡಲಾಗಿದೆ.

Comments are closed.