ಕರಾವಳಿ

ನನ್ನ ಹೋರಾಟ ನಾಲ್ವರ ವಿರುದ್ದವೇ ಹೊರತು ಖಾರ್ವಿ ಸಮುದಾಯದ ವಿರುದ್ಧವಲ್ಲ: ಕ್ರೀಡಾಪಟು ಸತೀಶ್ ಖಾರ್ವಿ

Pinterest LinkedIn Tumblr

ಕುಂದಾಪುರ: ನಾನು ಸಮುದಾಯದ ವಿರುದ್ಧ ಎಲ್ಲಿಯೂ ಅವಹೇಳನ ಮಾಡಿಲ್ಲ, ಕೀಳಾಗಿ ಮಾತನಾಡಿಲ್ಲ, ಯಾವುದೇ ಮಾಧ್ಯಮದಲ್ಲಿ ಸಮುದಾಯದ ವಿರುದ್ಧ ಹೇಳಿಕೆ ನೀಡಿಲ್ಲ, ಸಮುದಾಯವೆಂದರೆ ದೇವರಿಗೆ ಸಮಾನವೆಂದು ಭಾವಿಸಿದ್ದೇನೆ. ನನ್ನ ಕೊಂಕಣ ಖಾರ್ವಿ ಸಮಾಜದ ಮೇಲೆ ಅಪಾರವಾದ ಗೌರವವನ್ನು ಹೊಂದಿದ್ದೇನೆ. ನಾನು ಕೊಂಕಣ ಖಾರ್ವಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಆದರೆ ಪತ್ರಿಕಾಗೋಷ್ಠಿಯಲ್ಲಿ ಸತ್ಯವನ್ನು ಮರೆಮಾಚುವ ಪ್ರಯತ್ನ ನಡೆದಿದ್ದು, ಮತ್ತೊಮ್ಮೆ ನನ್ನ ತೇಜೋವದೆ ಮಾಡುವ ಪ್ರಯತ್ನ ಇದಾಗಿದೆ ಎಂದು ಕ್ರೀಡಾಪಟು ಸತೀಶ್ ಖಾರ್ವಿ ತಿಳಿಸಿದ್ದಾರೆ.

ಗುರುವಾರ ಕುಂದಾಪುರದಲ್ಲಿನ ಹಕ್ರ್ಯುಲೆಸ್ ಜಿಮ್‍ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮಾಡಿದ ಸಾಧನೆಯನ್ನು ಅಪಪ್ರಚಾರ ಮಾಡಿದ ನಾಲ್ಕು ಜನ ವ್ಯಕ್ತಿಗಳ ಮೇಲೆ ದೂರು ದಾಖಲಿಸಿದ್ದೇನೆಯೇ ಹೊರತು ಸಮುದಾಯದ ಮೇಲೆ ಯಾವುದೇ ಆರೋಪ ಮಾಡಿಲ್ಲ. ಕಜಕಿಸ್ತಾನದಲ್ಲಿ ನಾನು ಚಿನ್ನದ ಪದಕ ಗೆದ್ದು ಮೊದಲ ಸ್ಥಾನ ಪಡೆದ್ದನ್ನು 5ನೇ ಸ್ಥಾನ ಎಂದು ತಿದ್ದಿ ವಾಟ್ಸಪ್‍ನಲ್ಲಿ ಹರಿಯ ಬಿಟ್ಟಿರುವವರ ವಿರುದ್ಧ ದೂರು ದಾಖಲಿಸಿದ್ದೇನೆ. ಅದರ ಸಾಕ್ಷಿಯನ್ನು ಈಗಾಗಗಲೇ ನ್ಯಾಯಾಲಯದಲ್ಲಿ ನೀಡಿದ್ದೇನೆ. ಎಲ್ಲಾ ದಾಖಲೆ ಪರಿಶೀಲಿಸಿದ ಮೇಲೆ ಆರೋಪಿಗಳ ವಿರುದ್ಧ ಕೇಸು ದಾಖಲಿಸಲು ನ್ಯಾಯಾಲಯ ಆದೇಶಿಸಿದೆ ಎಂದು ಹೇಳಿದರು.

ನನ್ನ ಹೋರಾಟ ಏನೇ ಇದ್ದರೂ ನಾಲ್ಕು ವ್ಯಕ್ತಿಗಳ ವಿರುದ್ಧವೇ ಹೊರತು ಸಮುದಾಯದ ವಿರುದ್ಧವಲ್ಲ. ಆದರೆ ಇಲ್ಲಿ ವೈಯಕ್ತಿಕ ವಿಚಾರವನ್ನು ಸಮುದಾಯದ ವಿಚಾರವೆಂದು ತಿರುಚುವುದು ಸರಿಯಲ್ಲ ಎಂದು ಅವರು ಹೇಳಿದರು.

Comments are closed.