ಕುಂದಾಪುರ: ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ಆರಾಧ್ಯ ದೇವತೆ ಶ್ರೀ ಮಹಾಕಾಳಿ ಸನ್ನಿಧಿಗೆ ಮಂಗಳವಾರ ರಾತ್ರಿ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿದರು.

ಈ ಸಂದರ್ಭ ಮಹಾಕಾಳಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಕೇಶವ ಖಾರ್ವಿ ಸ್ವಾಗತಿಸಿದರು. ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಜಯಾನಂದ ಖಾರ್ವಿಯವರು ಕೊಂಕಣಿ ಖಾರ್ವಿ ಸಮಾಜದ ಬಗ್ಗೆ ಚುಟುಕಾಗಿ ವಿವರಿಸಿದರು. ಹೊನ್ನಾವರದ ಕಾಸರಕೋಡು ಟೊಂಕದಲ್ಲಿ ಖಾರ್ವಿ ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಎಳೆ ಎಳೆಯಾಗಿ ತಿಳಿಸಿ,ನೀವು ನಮ್ಮ ಸಮಾಜದ ಧ್ವನಿಯಾಗಿ ನಮ್ಮ ಕಾಸರಕೋಡುವಿನಲ್ಲಿ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿ ಕೊಟ್ಟು,ಮೀನುಗಾರರ ಬದುಕು ಹಸನಾಗುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಬುಧವಾರ ಆ ಭಾಗಕ್ಕೆ ಭೇಟಿ ನೀಡುತ್ತೇನೆ ಸಮಸ್ಯೆಯ ಬಗ್ಗೆ ಅರಿತುಕೊಂಡು ನಿಮ್ಮ ನೋವಿಗೆ ಸ್ಪಂದಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಭರವಸೆಯಿತ್ತರು.
ಖಾರ್ವಿ ಸಮಾಜವನ್ನುದ್ದೇಶಿಸಿ ಮಾತನಾಡಿದ ಅವರು, ಅವಿಭಜಿತ ದ.ಕ ಜಿಲ್ಲೆಯಲ್ಲಿ ಪ್ರವಾಸ ಮಾಡಿರುವೆ. ಖಾರ್ವಿ ಸಮುದಾಯದವರು ಗಂಗಾ ಭಕ್ತರಾಗಿದ್ದು ಧರ್ಮ, ನ್ಯಾಯ, ನೀತಿಯಿಂದ ಸೇವೆ ಮಾಡುತ್ತಿರುವವರು. ಮೀನುಗಾರ ವೃತ್ತಿಯವರು ಸಮುದ್ರಕ್ಕೆ ತೆರಳಿದರೆ ಆತನ ನಂಬಿಕೊಂಡ ಹತ್ತಾರು ಮಂದಿ ಜೀವನ ಸಾಗಿಸಲು ಸಾಧ್ಯವಾಗಿದ್ದು ಮೀನುಗಾರರ ಪರ ಧ್ವನಿಯಾಗಿ ಅವರಿಗೆ ನ್ಯಾಯ ಒದಗಿಸಲು ಮತ್ತು ಅಗತ್ಯ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಭಿಪ್ರಾಯ ಪಡೆದು ಚರ್ಚಿಸಲಾಗಿದೆ. ಕ್ಲಿಷ್ಟಕರ ಜೀವನ ನಡೆಸುವ ಮೀನುಗಾರರಿಗೆ ಗೌರವ ಸಿಗಬೇಕು, ಸ್ವಾಭಿಮಾನಕ್ಕೆ ದಕ್ಕೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ವಿರೋಧ ಪಕ್ಷವಾಗಿ ಕಾರ್ಯಕ್ರಮ ರೂಪಿಸಲಾಗುತ್ತದೆ. ಅಸಂಘಟಿತ ಕಾರ್ಮಿಕರು, ಮೀನುಗಾರರು ಹಾಗೂ ಇತರೆ ಕಾರ್ಮಿಕರಿಗೆ ಕೊರೋನಾ ಸಂದರ್ಭದಲ್ಲಾದ ಅನ್ಯಾಯ ಸರಿಪಡಿಸಬೇಕಾಗಿರುವುದು ಸರಕಾರದ ಮಹತ್ತರ ಜವಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸರಕಾರದಿಂದಾದ ವಿಫಲತೆ ಬಗ್ಗೆ ಈಗಾಗಾಲೇ ಚರ್ಚಿಸಲಾಗಿದೆ. ಮೀನುಗಾರರ ಪರವಾಗಿ ಧ್ವನಿಯೆತ್ತುವೆ ಇದು ದೇವರಾಣೆಗೂ ಸತ್ಯ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಪ್ರಮುಖರಾದ ಕಿಶನ್ ಹಗ್ಡೆ ಕೊಳ್ಕೆಬೈಲ್, ಹರಿಪ್ರಸಾದ್ ಶೆಟ್ಟಿ ಬಿದ್ಕಲ್‌ಕಟ್ಟೆ, ಮಲ್ಯಾಡಿ ಶಿವರಾಮಶೆಟ್ಟಿ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರಿಗಾರ, ದೇವಕಿ ಸಣ್ಣಯ್ಯ, ಅಬು ಮಹಮ್ಮದ್, ಕುಮಾರ ಖಾರ್ವಿ ಸೇರಿದಂತೆ ಖಾರ್ವಿ ಸಮಾಜದವರು, ಕಾಂಗ್ರೆಸ್ ಮುಖಂಡರು ಇದ್ದರು.
Comments are closed.