ಕುಂದಾಪುರ : ಮುಜರಾಯಿ ಇಲಾಖೆಯ ಅಧಿನದಲ್ಲಿ ಇರುವ ರಾಜ್ಯದಲ್ಲಿನ ‘ಸಿ’ ದರ್ಜೆ ದೇವಸ್ಥಾನಗಳಲ್ಲಿನ ನೌಕರರಿಗೆ ಹಾಗೂ ಅರ್ಚಕರಿಗೆ 1,500 ರೂ. ವೆಚ್ಚದಲ್ಲಿ ಅಗತ್ಯ ಅಹಾರ ವಸ್ತುಗಳ ಕಿಟ್ ನೀಡಬೇಕು ಎನ್ನುವ ತೀರ್ಮಾನ ಮಾಡಲಾಗಿದ್ದು, ಇದಕ್ಕಾಗಿ ರಾಜ್ಯದ ‘ಎ’ ದರ್ಜೆ ದೇವಸ್ಥಾನದ ನೆರವನ್ನು ಪಡೆದುಕೊಳ್ಳಲಾಗುವುದು ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಇಲ್ಲಿಗೆ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕೊಲ್ಲೂರು ಗ್ರಾಮದ 550 ಮಂದಿ ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಶ್ರೀ ಮೂಕಾಂಬಿಕಾ ದೇವಸ್ಥಾನದ ವತಿಯಿಂದ ನೀಡಲಾದ ಆಹಾರದ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.
ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ಮುಜರಾಯಿ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರಿಗೆ ಮುಖ್ಯಮಂತ್ರಿಗಳು 3,000 ರೂ. ನೆರವಿನ ಪ್ಯಾಕೇಜ್ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಕೊರೊನಾ ಪಾಸಿಟಿವಿಟಿ ಕಡಿಮೆ ಇರುವ ಪ್ರದೇಶಗಳಲ್ಲಿ ಲಾಕ್‌ಡೌನ್ ಸಡಲಿಕೆ ಮಾಡಬೇಕು ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿದೆ. ಲಾಕ್‌ಡೌನ್ ಸಡಲಿಕೆಯ ವೇಳೆ ದೇವಸ್ಥಾನಗಳಿಗೆ ದೇವರ ದರ್ಶನಕ್ಕಾಗಿ ಪ್ರವೇಶಾವಕಾಶ ನೀಡಬೇಕು ಎನ್ನುವ ಬೇಡಿಕೆಗಳು ಇದ್ದು, ಇದು ಭಾವನಾತ್ಮಕ ವಿಚಾರವಾಗಿರುವುದರಿಂದ , ಒಮ್ಮೆಲೆ ದರ್ಶನ ಅವಕಾಶ ನೀಡುವುದರಿಂದ ನೂಕು ನುಗ್ಗಲು ಉಂಟಾಗುವ ಸಾಧ್ಯತೆಗಳು ಇರೋದರಿಂದ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸೀಮಿತ ಸಂಖ್ಯೆ ಭಕ್ತರಿಗೆ ಅವಕಾಶ ನೀಡಲು ಸಾಧ್ಯವೇ ಎನ್ನುವ ಕುರಿತು ಪರಿಶೀಲನೆ ನಡೆಸಲಾಗುವುದು. ನಮ್ಮ ಅಹವಾಲುಗಳನ್ನು ಮುಖ್ಯಮಂತ್ರಿಗಳ ಬಳಿ ಹೇಳುತ್ತೇವೆ. ಈ ವಿಚಾರದ ಕುರಿತು ಸಾಧಕ-ಬಾಧಕಗಳ ವಿಮರ್ಶೆ ಮಾಡಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.
ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಸದಸ್ಯರಾದ ಜಯಾನಂದ ಹೋಬಳಿದಾರ್, ಗಣೇಶ್ ಕಿಣಿ, ಶೇಖರ್ ಪೂಜಾರಿ, ಸಂಧ್ಯಾ ರಮೇಶ್, ರತ್ನ ರಮೇಶ್ ಕುಂದರ್, ಬೈಂದೂರು ತಹಶೀಲ್ದಾರ್ ಶೋಭಾ ಲಕ್ಷ್ಮೀ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮ ಕೃಷ್ಣಭಟ್ , ಉಪಾಧ್ಯಕ್ಷ ಹರೀಶ್ ಶೆಟ್ಟಿ , ಸದಸ್ಯರಾದ ನಾಗೇಶ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರುಕ್ಕಣ್ಣ ಗೌಡ ಇದ್ದರು.
Comments are closed.