ಕರಾವಳಿ

ದೇವಸ್ಥಾನಗಳ ಯಕ್ಷಗಾನ ಮೇಳದ ಕಲಾವಿದರಿಗೆ ಪೂರ್ಣಾವಧಿ ಸಂಭಾವನೆ ನೀಡಲು ಸೂಚನೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಕುಂದಾಪುರ: ಯಾವ ದೇವಸ್ಥಾನದ ಮೂಲಕ ಯಕ್ಷಗಾನ ಮೇಳ ನಡೆಯುತ್ತದೆಯೋ ಆ ದೇವಸ್ಥಾನದ ಸಂಪನ್ಮೂಲ ಕ್ರೋಢೀಕರಿಸಿ ಕಲಾವಿದರಿಗೆ ಪೂರ್ಣಾವಧಿಯ ಸಂಭಾವನೆ ಕೊಡಲು ಸೂಚಿಸಲಾಗಿದೆ. ಆದರೆ ಕೆಲವು ದೇವಸ್ಥಾನಗಳು ಕಲಾವಿದರ ಬಳಿ ಅಗ್ರಿಮೆಂಟ್ ಮಾಡಿಕೊಳ್ಳುವಾಗಲೇ ಮಧ್ಯದಲ್ಲೇ ಯಕ್ಷಗಾನ ಪ್ರದರ್ಶನ ನಿಂತರೆ, ಸಂಭಾವನೆ ಕಡಿತಗೊಳಿಸಲು ಬದ್ಧರಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆನ್ನಲಾಗಿದ್ದು ಯಾವ ದೇವಸ್ಥಾನದ ಮೂಲಕ ಯಕ್ಷಗಾನ ಮೇಳ ನಡೆಯುತ್ತದೆಯೋ ಆ ದೇವಸ್ಥಾನದ ಸಂಪನ್ಮೂಲಗಳಲ್ಲಿ ಶಕ್ತಿ ಇದ್ದರೆ ಕಲಾವಿದರಿಗೆ ಪೂರ್ಣ ಸಂಬಳ ಕೊಡಿ ಎಂದು ಸರ್ಕಾರ ಆದೇಶಿಸಿದೆ ಎಂದು‌ ಕುಂದಾಪುರದ ತಲ್ಲೂರುನಲ್ಲಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಕ್ಕೆ ಅದರದೇ ಆದ ಜವಾಬ್ದಾರಿ ಇದೆ. ಉದಾಹರಣೆಗೆ ಸರ್ಕಾರಕ್ಕೆ ಸಲಹೆ ಕೊಟ್ಟರೆ ಅದನ್ನು ತೆಗೆದುಕೊಳ್ಳಬಾರದೆಂದಿಲ್ಲ. ಪ್ರಧಾನಮಂತ್ರಿ ಮೋದಿಯವರು, ಸುದೀರ್ಘ ಅವಧಿಯವರೆಗೆ ರೇಶನ್ ಉಚಿತವಾಗಿ ಕೊಡುವ ಬಗ್ಗೆ ಹೇಳಿರುವುದು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಯಾವ ರೀತಿ ಪೂರೈಕೆ ಮಾಡುತ್ತೇವೆ ಎಂದಿರುವುದು, 75% ಲಸಿಕೆ ಉಚಿತವಾಗಿ ಕೊಡುವ ವ್ಯವಸ್ಥೆ ಮಡಿರುವುದು, 25% ಹಣವಂತರು ಲಸಿಕೆ ಪಡೆದರೂ ಕೂಡ ಮಾರ್ಗಸೂಚಿ, ನಿಯಮಗಳ ಆಧಾರದಲ್ಲೇ ಹೆಚ್ಚಿನ ಸೇವಾ ಶುಲ್ಕ ಪಡೆಯದೇ ನೀಡುವುದು ಇವೆಲ್ಲವೂ ಸಾಮಾನ್ಯ ಸಂಗತಿಯಾಗದೆ ಇಡೀ ರಾಷ್ಟ್ರವನ್ನು ಸೆಳೆದಿರುವ ಸಂಗಾತಿಯಾಗಿದ್ದು, ಮೋದಿಯವರನ್ನು ಅಭಿನಂದನೆ ಎಂದರು.

ಕೊರೋನಾ‌ ಲಸಿಕೆ ಪಾರದರ್ಶಕವಾಗಿ ವಿತರಣೆ….
ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆಯ ಮೂಲಕ ವ್ಯಾಕ್ಸಿನ್ ಹಂಚಿಕೆ ಮಾಡಲಾಗಿದೆ. ಗ್ರಾ.ಪಂ.ಅಧ್ಯಕ್ಷರು ಸದಸ್ಯರುಗಳು ಕೊರೋನಾ ವಾರಿಯರ್ ವ್ಯಾಪ್ತಿಗೆ ಬರುವಂತೆ ಮನವಿ ಮಾಡಿದ್ದೇನೆ. ಪತ್ರಕರ್ತರೂ ಸೇರಿದಂತೆ ಅನೇಕ ಕೊರೋನಾ ವಾರಿಯರ್ಸ್ ವ್ಯಾಪ್ತಿಯೊಳಗೆ ಬರುವಂತವರಿಗೆ ಪ್ರಾಶಸ್ತ್ಯ ನೀಡಿ ಲಸಿಕೆ ಕೊಡಬೇಕು. ಉಳಿದಿರುವಂತ ಲಸಿಕೆಯನ್ನು 60 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಡೋಸ್ ಕೊಟ್ಟಿದ್ದೇವೆ, ದ್ವಿತೀಯ ಡೋಸ್ ಕೊಡಬೇಕು. ಅಂಗವಿಕಲರಿಗೆ, 49 ವರ್ಷ 60 ವರ್ಷ ಒಳಗಿನವರಿಗೆ ಕೊಡುವಂತದ್ದಿದೆ. 18 ವರ್ಷ ಮೇಲ್ಪಟ್ಟವರಿಗೆ ಕೊಡಲು ಇದೆ. ಈ ಪ್ರಕಾರವೇ ಲಸಿಕೆ ವಿತರಣೆ ನಡೆಯುತ್ತದೆ. ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿರುವಾಗ ಕೆಲವರಿಗೆ ಬಿಜೆಪಿಯವರಿಗೆ ಮಾತ್ರ ಕೊಡುತ್ತಿದ್ದಾರೆ ಎಂದು ಯಾರಾದರೂ ಹೇಳಿರ ಬಹುದು ಇದರಲ್ಲಿ ಗೊಂದಲಗಳಿಲ್ಲ.

ಕೊರೋನಾ ಲಸಿಕೆ ಹಂಚಿಕೆ ಪಾರದರ್ಶಕವಾಗಿರಬೇಕು ಎಂದು ಆರೋಗ್ಯ ಇಲಾಖೆಗೆ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಯಾವ ಪಾರ್ಟಿಯವರಾದರೂ, ಬಡವರಾದರೂ ಎಲ್ಲರೂ ನಮ್ಮವರೇ. ತಪ್ಪುಗಳಾಗಬಾರದು. ಎಚ್ಚರದಿಂದ ನಿಭಾಯಿಸಲು ತಿಳಿಸಿದ್ದೇನೆ ಎಂದರು.

ಈ ಸಂದರ್ಭ ಮುಖಂಡರಾದ ಸದಾನಂದ ಉಪ್ಪಿನಕುದ್ರು, ಮಹೇಂದ್ರ ಪೂಜಾರಿ, ಕರಣ್ ಕುಮಾರ್ ಪೂಜಾರಿ, ಸಂಜೀವ ದೇವಾಡಿಗ‌ ಮೊದಲಾದವರು ಇದ್ದರು.

 

Comments are closed.