ಕರಾವಳಿ

ತೌಖ್ತೆ ಚಂಡಮಾರುತವನ್ನು ಸಮರ್ಥವಾಗಿ ಎದುರಿಸಿ, 60 ಕೋಟಿ ಹಣವನ್ನು ಸದ್ಬಳಕೆ ಮಾಡಿಕೊಳ್ಳಿ: ಸಚಿವ ಬೊಮ್ಮಾಯಿ ಸೂಚನೆ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಕರಾವಳಿಗೆ ಅಪ್ಪಳಿಸಿರುವ ತೌಖ್ತೆ ಚಂಡಮಾರುತವನ್ನು ಸಮರ್ಥವಾಗಿ ಎದುರಿಸಿ. ಚಂಡಮಾರುತದಿಂದ ಯಾವುದೇ ಅಪಾಯ ಆಗದಂತೆ ಮುನ್ನೆಚ್ಚರಿಕೆ ವಹಿಸಿ. SDRF ನಿಧಿಯಿಂದ ನೀಡಲಾಗಿರುವ 60 ಕೋಟಿ ರೂಪಾಯಿ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ಉಡುಪಿ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶನಿವಾರ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಜತೆ ನಡೆಸಿದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ತೌಖ್ತೆ ಚಂಡಮಾರುತ ನಾಲ್ಕು ದಿನಗಳ ಕಾಲ ತನ್ನ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಕರಾವಳಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿ. ತಗ್ಗು ಪ್ರದೇಶದಿಂದ ಸಾರ್ವಜನಿಕರನ್ನು ಸ್ಥಳಾಂತರಗೊಳಿಸಿ. ಸ್ಥಳಾಂತರಗೊಳಿಸಿದ ಜನರಿಗೆ ಆಹಾರ ಮತ್ತು ಇತರೆ ವಸ್ತುಗಳನ್ನು ಪೂರೈಕೆ ಮಾಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಬೆಂಗಳೂರಿನಿಂದ ಚಂಡಮಾರುತ ಅನಾಹುತ ತಪ್ಪಿಸಲು ಮತ್ತು ಅಪಾಯದಲ್ಲಿ ಸಿಲುಕಿದ್ದ ಜನರನ್ನ ರಕ್ಷಣೆ ಮಾಡಲು ತಂಡವನ್ನು ಕಳುಹಿಸಲಾಗುವುದು. ಪೊಲೀಸ್ ಇಲಾಖೆ, ಕರಾವಳಿ ರಕ್ಷಣಾ ಪಡೆ, ಅಗ್ನಿಶಾಮಕ ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಕೆಲಸ ನಿರ್ವಹಿಸಿ ಅನಾವುತಗಳು ಸಂಭವಿಸಿದಂತೆ ಕಾರ್ಯ ಮಾಡುವಂತೆ ಬಸವರಾಜ್ ಬೊಮ್ಮಾಯಿ ಸೂಚಿಸಿದರು.

ಈಗಾಗಲೇ ಎಸ್ ಟಿ ಆರ್ ಎಫ್ ನಿಧಿಯಿಂದ 60ಕೋಟಿ ಹಣವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಆ ಹಣವನ್ನು ಸದ್ಬಳಕೆ ಮಾಡಿಕೊಂಡು ಕೆಲಸ ಮಾಡುವಂತೆ ಅವರು ಸೂಚನೆ ನೀಡಿದರು.
ಕರಾವಳಿಗೆ ಹೊಂದಿಕೊಂಡಿರುವ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯಲ್ಲಿ ಚಂಡಮಾರುತ ಪ್ರಭಾವ ಉಂಟಾಗುವ ಸಾಧ್ಯತೆ ಇದೆ. ಯಾವುದೇ ರೀತಿಯ ಅನಾಹುತ, ಆಪತ್ತು ಎದುರಾದರೂ ಅದನ್ನು ನಿವಾರಿಸಲು ಸಿದ್ಧತೆ ಮಾಡಿಕೊಳ್ಳಿ. ಟೌಟೆ ಚಂಡಮಾರುತದ ಬಗ್ಗೆ ಎಚ್ಚರ ಇರಲಿ ಎಂದರು.

ಕೋವಿಡ್ ನಿಯಂತ್ರಣಕ್ಕೆ ಗಮನಹರಿಸಿ…
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೆಚ್ಚು ಆದ್ಯತೆ ನೀಡಿ. ಖಾಸಗಿ ಆಸ್ಪತ್ರೆಗಳಿಂದ ಸರ್ಕಾರಕ್ಕೆ ಬರಬೇಕಾದ ಬೆಡ್ ಗಳನ್ನು ಪಡೆಯಿರಿ. ಆಕ್ಸಿಜನ್ ಪೂರೈಕೆ ಯನ್ನು ಸಮರ್ಪಕವಾಗಿ ಕೈಗೊಳ್ಳಿ. ಆಮ್ಲಜನಕವನ್ನು ಅಗತ್ಯಕ್ಕೆ ಅನುಗುಣವಾಗಿ ಬಳಕೆಮಾಡಿ. ಚಿಕಿತ್ಸೆ ಪಡೆದು ಗುಣಮುಖರಾಗಿರುವ ಸೋಂಕಿತರನ್ನು ಕೋವೊಡ್ ಕೇರ್ ಸೆಂಟರ್ ನಲ್ಲಿ ದಾಖಲು ಮಾಡಿ. ಇಂಥವರಿಂದ ತೆರವಾದ ಐಸಿಯು ಮತ್ತು ಎಚ್ಡಿ ಯು ಬೆಡ್ ಗಳನ್ನು ಗಂಭೀರವಾಗಿ ಸೋಂಕಿತಗೊಂಡ ವ್ಯಕ್ತಿಗಳಿಗೆ ಬಳಕೆಮಾಡಿ ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸುನಿಲ್ ಕುಮರ್, ಲಾಲಾಜಿ ಆರ್ ಮೆಂಡನ್, ಜಿಲ್ಲಾದಿಕಾರಿ ಜಿ.ಜಗದೀಶ್, ಜಿ.ಪಂ. ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ ಮತ್ತಿತರರು ಉಪಸ್ಥಿತರಿದ್ದರು.

Comments are closed.